ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುಯತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ (Ruturaj Gaikwad) ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಶತಕವನ್ನು ಸಿಡಿಸಸಿದ್ದಾರೆ. ಆರಂಭದಿಂದಲೂ ಆಸೀಸ್ ಬೌಲರ್ಗಳ ಬೆವರಿಳಿಸಿದ ರುತುರಾಜ್ ಕೇವಲ 52 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ರುತುರಾಜ್ ಅವರ ಸಿಡಿಲಬ್ಬರದ ಶತಕದಿಂದಾಗಿ ಮೂರನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ 200 ರನ್ ಗಡಿ ದಾಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 222 ರನ್ ಗಳಿಸಿದೆ. ತಂಡದ ಪರ ರುತುರಾಜ್ ಗಾಯಕ್ವಾಡ್ 123 ರನ್ ಗಳಿಸಿ ಅಜೇಯರಾಗಿ ಉಳಿದರೆ, ಸೂರ್ಯಕುಮಾರ್ ಯಾದವ್ (Suryakumar Yadav) 39 ರನ್ ಹಾಗೂ ತಿಲಕ್ ವರ್ಮಾ ಕೂಡ 31 ರನ್ಗಳ ಕೊಡುಗೆ ನೀಡಿದರು.
ಮೇಲೆ ಹೇಳಿದಂತೆ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ನಡೆಸಿದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಕೇವಲ 51 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಸಹಿತ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದಾದ ನಂತರ ತಕ್ಷಣವೇ ಗೇರ್ ಬದಲಾಯಿಸಿದ ರುತುರಾಜ್ ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 57 ಎಸೆತಗಳನ್ನು ಎದುರಿಸಿ 215ರ ಸ್ಟ್ರೈಕ್ ರೇಟ್ನಲ್ಲಿ 13 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ ಅಜೇಯ 123 ರನ್ ಕಲೆಹಾಕಿದರು.
Maiden T20I CENTURY for @Ruutu1331 🔥🔥 #INDvAUS @IDFCFIRSTBank pic.twitter.com/FUxyBLEE3q
— BCCI (@BCCI) November 28, 2023
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಕಳೆದ ಪಂದ್ಯದಂತೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ 3 ಓವರ್‌ಗಳ ಮಧ್ಯದಲ್ಲಿಯೇ ತಂಡ ಯಶಸ್ವಿ ಜೈಸ್ವಾಲ್ (6) ಮತ್ತು ಇಶಾನ್ ಕಿಶನ್ (0) ಅವರ ವಿಕೆಟ್ ಕಳೆದುಕೊಂಡು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತು. ನಂತರ ಗಾಯಕ್ವಾಡ್ ಜೊತೆಯಾದ ನಾಯಕ ಸೂರ್ಯಕುಮಾರ್ ಯಾದವ್ (39 ರನ್) ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಬಳಿಕ ನಾಯಕ ಸೂರ್ಯ ಔಟಾದ ತಕ್ಷಣ ರನ್ ರೇಟ್ ಸುಧಾರಿಸುವ ಜವಾಬ್ದಾರಿಯನ್ನು ಹೊತ್ತ ರುತುರಾಜ್ ಗಾಯಕ್ವಾಡ್, ಕೊನೆಯವರೆಗೂ ಭಾರತದ ಇನ್ನಿಂಗ್ಸ್ ನಿಭಾಯಿಸಿದರು.
ತಮ್ಮ ಶತಕದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾದ ರುತುರಾಜ್, ಇನಿಂಗ್ಸ್ನ 20ನೇ ಅಂದರೆ ಕೊನೆಯ ಓವರ್ ಬೌಲ್ ಮಾಡಲು ಬಂದ ಗ್ಲೆನ್ ಮ್ಯಾಕ್ಸ್ವೆಲ್ರನ್ನು ಟಾರ್ಗೆಟ್ ಮಾಡಿದರು. ಈ ಓವರ್‌ನಲ್ಲಿ ರುತುರಾಜ್ ಒಟ್ಟು 30 ರನ್ ಕಲೆಹಾಕಿದರು. ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದ ರುತುರಾಜ್, ಇದಾದ ತಕ್ಷಣ ಬೌಂಡರಿ ಸಿಕ್ಸರ್‌ಗಳ ಮಳೆಗರೆದರು. ಕೊನೆಯ 3 ಎಸೆತಗಳಲ್ಲಿ ರುತುರಾಜ್ ಸತತ 2 ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು.
Published On - 8:54 pm, Tue, 28 November 23