IND vs AUS: ‘ಮೊದಲ ಎಸೆತದಿಂದಲೇ…’; ಪಂತ್ ಆಟಕ್ಕೆ ಫಿದಾ ಆದ ಕ್ರಿಕೆಟ್ ದೇವರು

Rishabh Pant's Explosive Fifty: ರಿಷಬ್ ಪಂತ್ ಸಿಡ್ನಿ ಟೆಸ್ಟ್‌ನಲ್ಲಿ 33 ಎಸೆತಗಳಲ್ಲಿ 61 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಸಚಿನ್ ತೆಂಡೂಲ್ಕರ್ ಅವರನ್ನು ಸಹ ಮೆಚ್ಚಿಸಿತು. 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಂತ್ ಆಟವನ್ನು ನೋಡುವುದೇ ಒಂದು ರೀತಿಯ ಮನೋರಂಜನಾತ್ಮಕವಾಗಿರುತ್ತದೆ ಎಂದು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

IND vs AUS: ಮೊದಲ ಎಸೆತದಿಂದಲೇ...; ಪಂತ್ ಆಟಕ್ಕೆ ಫಿದಾ ಆದ ಕ್ರಿಕೆಟ್ ದೇವರು
ಸಚಿನ್ ತೆಂಡೂಲ್ಕರ್

Updated on: Jan 04, 2025 | 8:59 PM

ಇಡೀ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದ್ದ ಟೀಂ ಇಂಡಿಯಾದ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೊನೆಗೂ ಅರ್ಧಶತಕದ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ವಾಸ್ತವವಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 250 ಕ್ಕೂ ಅಧಿಕ ರನ್ ಕಲೆಹಾಕಿದ ಟೀಂ ಇಂಡಿಯಾದ ಕೆಲವೇ ಕೆಲವು ಆಟಗಾರರ ಪೈಕಿ ರಿಷಬ್ ಪಂತ್ ಕೂಡ ಒಬ್ಬರು. ಆದರೆ ಪಂತ್ ಉತ್ತಮ ಆರಂಭ ಪಡೆದುಕೊಂಡ ಬಳಿಕ ವಿಕೆಟ್ ಕೈಚೆಲ್ಲುತ್ತಿದ್ದದ್ದು ತಂಡವನ್ನು ಸಂಕಷ್ಟಕ್ಕೆ ದೂಡುತ್ತಿತ್ತು. ಇದರಿಂದಾಗಿ ಪಂತ್, ಮಾಜಿ ಆಟಗಾರರ ಕೆಂಗಣ್ಣಿಗೂ ಗುರಿಯಾಗಿದ್ದರು. ಇದೀಗ ಟೆಸ್ಟ್ ಕ್ರಿಕೆಟ್​ನಲ್ಲಿ, ಟಿ20 ಶೈಲಿಯ ಬ್ಯಾಟಿಂಗ್ ಪ್ರದರ್ಶಿಸಿರುವ ರಿಷಬ್ ಪಂತ್, ತಂಡವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಕೊಂಚ ಯಶಸ್ವಿಯಾಗಿದ್ದಾರೆ. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಂತ್ ಇದನ್ನು ಶತಕವನ್ನಾಗಿ ಪರಿವರ್ತಿಸಲಿಲ್ಲವಲ್ಲ ಎಂಬ ಬೇಸರ ಎಲ್ಲರಿಗೂ ಇದೆ. ಆದಾಗ್ಯೂ ಪಂತ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ದೇವರನ್ನೇ ಮರಳು ಮಾಡುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.

ಸಚಿನ್ ಸೋಶಿಯಲ್ ಮೀಡಿಯಾ ಪೋಸ್ಟ್

ವಾಸ್ತವವಾಗಿ ಇಂದು ಸಿಡ್ನಿ ಮೈದಾನದಲ್ಲಿ ಪಂತ್ ಬ್ಯಾಟಿಂಗ್ ಮಾಡಿದ ರೀತಿಗೆ ಇಡೀ ಕ್ರಿಕೆಟ್ ಲೋಕವೇ ಸಲಾಂ ಹೊಡೆದಿದೆ. ಅವರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಒಬ್ಬರಾಗಿದ್ದಾರೆ. ಪಂತ್ ಅವರ ಈ ಇನ್ನಿಂಗ್ಸ್ ನಂತರ, ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್, ಪಂತ್ ಬ್ಯಾಟಿಂಗ್ ನೋಡುವುದು ಯಾವಾಗಲೂ ಮನೋರಂಜನಾತ್ಮಕವಾಗಿರುತ್ತದೆ ಎಂದಿದ್ದಾರೆ. ಮುಂದುವರೆದು ಬರೆದುಕೊಂಡಿರುವ ಅವರು, ಹೆಚ್ಚಿನ ಬ್ಯಾಟ್ಸ್‌ಮನ್‌ಗಳು 50 ಅಥವಾ ಅದಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ ವಿಕೆಟ್‌ನಲ್ಲಿ, 184 ಸ್ಟ್ರೈಕ್ ರೇಟ್‌ನೊಂದಿಗೆ ರಿಷಬ್ ಪಂತ್ ಬ್ಯಾಟಿಂಗ್ ಮಾಡಿದ್ದು, ನಿಜವಾಗಿಯೂ ಗಮನಾರ್ಹವಾಗಿದೆ. ಮೊದಲ ಎಸೆತದಿಂದಲ್ಲೇ ಪಂತ್ ಆಸ್ಟ್ರೇಲಿಯವನ್ನು ಕಾಡಿದರು. ಎಂತಹ ಪ್ರಭಾವಶಾಲಿ ಇನ್ನಿಂಗ್ಸ್ ಎಂದಿದ್ದಾರೆ.

33 ಎಸೆತಗಳಲ್ಲಿ 61 ರನ್

ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಭಾರತದ ಪರ ಗರಿಷ್ಠ 40 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ತಮ್ಮ ಎಂದಿನ ಆಟವನ್ನು ಮುಂದುವರೆಸಿದ ಪಂತ್ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ನಂತರವೂ ವೇಗದ ಆಟ ಮುಂದುವರಿಸಿದ ಪಂತ್ ವೈಯಕ್ತಿಕ ಸ್ಕೋರ್ 61 ರಲ್ಲಿ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಪಂತ್ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಹ ಸಿಡಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ