IND vs AUS: ಶೂ ಒಳಗೆ ಸ್ಯಾಂಡ್ ಪೇಪರ್? ಬುಮ್ರಾ ವಿರುದ್ಧ ಗಂಭೀರ ಆರೋಪ; ವಿಡಿಯೋ ವೈರಲ್
Jasprit Bumrah Sandpaper Controversy: ಆಸ್ಟ್ರೇಲಿಯಾದ ಅಭಿಮಾನಿಗಳು ಜಸ್ಪ್ರೀತ್ ಬುಮ್ರಾ ಅವರ ಮೇಲೆ ಮರಳುಕಾಗದ ಬಳಸಿ ಚೆಂಡನ್ನು ವಿರೂಪಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವಿಡಿಯೋದಲ್ಲಿ ಬುಮ್ರಾ ಅವರ ಶೂನಿಂದ ಒಂದು ವಸ್ತು ಬೀಳುತ್ತಿರುವುದನ್ನು ತೋರಿಸಲಾಗಿದೆ. ಇದನ್ನು ಆಸೀಸ್ ಫ್ಯಾನ್ಸ್ ಸ್ಯಾಂಡ್ಪೇಪರ್ ಎನ್ನುತ್ತಿದ್ದಾರೆ. ಆದರೆ ಆ ವಸ್ತು ಬೌಲರ್‌ಗಳು ಬಳಸುವ ಫಿಂಗರ್ ಕ್ಯಾಪ್ ಎಂದು ತಿಳಿದುಬಂದಿದೆ. ಬೌಲರ್‌ಗಳು ಬೆರಳುಗಳನ್ನು ರಕ್ಷಿಸಿಕೊಳ್ಳಲು ಧರಿಸುವ ಈ ವಸ್ತುವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ.
ಸಿಡ್ನಿಯಲ್ಲಿ ನಡೆಯತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಎರಡೂ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ಕಂಡುಬರುತ್ತಿದೆ. ಈಗಾಗಲೇ ಉಭಯ ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿದ್ದು, ಟೀಂ ಇಂಡಿಯಾ ಕೇವಲ 4 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಇದರೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿದೆ. ಈ ನಡುವೆ ಆಸ್ಟ್ರೇಲಿಯಾ ತಂಡದ ಅಭಿಮಾನಿಗಳಿಂದ ಬುಮ್ರಾರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಇಡೀ ಸರಣಿಯಲ್ಲಿ ಆಸೀಸ್ ಆಟಗಾರರಿಗೆ ಸಿಂಹಸ್ವಪ್ನರಾಗಿರುವ ಬುಮ್ರಾ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಆಸೀಸ್ ಅಭಿಮಾನಿಗಳು, ಬುಮ್ರಾ ತಮ್ಮ ಶೂಗಳ ಒಳಗೆ ಸ್ಯಾಂಡ್‌ಪೇಪರ್ ಅನ್ನು ಇಟ್ಟುಕೊಂಡಿದ್ದಾರೆ. ಚೆಂಡನ್ನು ವಿರೂಪಗೊಳಿಸುವ ಮೂಲಕ ಬುಮ್ರಾ ಯಶಸ್ವಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಜೊತೆಗೆ ವಿಡಿಯೋವನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋ ವೈರಲ್
ವಾಸ್ತವವಾಗಿ ಆಸೀಸ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಜಸ್ಪ್ರೀತ್ ಬುಮ್ರಾ ತಾವು ಧರಿಸಿದ್ದ ಶೂಗಳನ್ನು ಬಿಚ್ಚಿ, ಅದನ್ನು ಮತ್ತೆ ಹಾಕಿಕೊಂಡಿದ್ದಾರೆ. ಈ ವೇಳೆ ಬುಮ್ರಾ ಅವರ ಶೂನಿಂದ ಯಾವುದೋ ವಸ್ತು ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಆಸೀಸ್ ಅಭಿಮಾನಿಗಳು ಅದನ್ನು ಸ್ಯಾಂಡ್‌ಪೇಪರ್ (ಚೆಂಡನ್ನು ವಿರೂಪಗಳಿಸಲು ಬಳಸುವ ಸಾಧನ) ಎಂದು ಹೇಳುತ್ತಿದ್ದಾರೆ. ಈ ಮೂಲಕ ಬುಮ್ರಾ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ. ಆದರೆ ಆಸೀಸ್ ಅಭಿಮಾನಿಗಳ ಆರೋಪದಲ್ಲಿ ಹುರುಳಿಲ್ಲ ಎಂಬುದಕ್ಕೆ ವಿವರಣೆ ಇಲ್ಲಿದೆ.
View this post on Instagram
ಆರೋಪದ ಸತ್ಯಾಸತ್ಯತೆ ಇಲ್ಲಿದೆ
ಬುಮ್ರಾ ಅವರ ಶೂನಿಂದ ಹೊರಬಂದ ವಸ್ತುವು ಖಂಡಿತವಾಗಿಯೂ ಸ್ಯಾಂಡ್‌ಪೇಪರ್‌ನಂತೆ ಕಾಣುತ್ತದೆ. ಆದರೆ ಅದು ಸ್ಯಾಂಡ್‌ಪೇಪರ್ ಅಲ್ಲ. ಬದಲಿಗೆ ಅದು ಫಿಂಗರ್ ಕ್ಯಾಪ್. ಬೌಲರ್‌ಗಳು ತಮ್ಮ ಬೆರಳುಗಳನ್ನು ಗಾಯದಿಂದ ರಕ್ಷಿಸಿಕೊಳ್ಳಲು ಇದನ್ನು ಹೆಚ್ಚಾಗಿ ಧರಿಸುತ್ತಾರೆ. ಆಸ್ಟ್ರೇಲಿಯಾದ ಇನ್ನಿಂಗ್ಸ್‌ನಲ್ಲಿ ಬುಮ್ರಾ ಕೂಡ ಅದೇ ರೀತಿ ಮಾಡಿದ್ದಾರೆ. ಬೌಲಿಂಗ್ ಮಾಡಿದ ನಂತರ ಫೀಲ್ಡಿಂಗ್‌ಗೆ ಹೋಗುವ ವೇಳೆ ಬುಮ್ರಾ ತಮ್ಮ ಶೂನಿಂದ ಫಿಂಗರ್ ಕ್ಯಾಪ್ ಅನ್ನು ತೆಗೆದಿದ್ದಾರೆ. ಆದರೆ ಇದನ್ನೇ ದಾಳವಾಗಿ ಬಳಸಿಕೊಂಡಿರುವ ಆಸ್ಟ್ರೇಲಿಯಾದ ಅಭಿಮಾನಿಗಳು ಬುಮ್ರಾ ಸ್ಯಾಂಡ್‌ಪೇಪರ್ ಬಳಸಿ ಚೆಂಡನ್ನು ವಿರೂಪಗಳಿಸುವ ಮೂಲಕ ಸುಲಭವಾಗಿ ವಿಕೆಟ್ ಪಡೆಯುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ