IND vs BAN: ‘180 ರನ್ ಗಳಿಸುವುದು ಹೇಗೆಂದು ಗೊತ್ತಿಲ್ಲ’; ಬ್ಯಾಟ್ಸ್‌ಮನ್‌ಗಳ ಮಾನ ಕಳೆದ ಬಾಂಗ್ಲಾ ನಾಯಕ

|

Updated on: Oct 07, 2024 | 3:20 PM

IND vs BAN: ತವರಿನಲ್ಲಿ ನಾವು 140 ರಿಂದ 150 ರನ್ ಕಲೆಹಾಕಬಹುದಾದಂತಹ ವಿಕೆಟ್‌ಗಳ ಮೇಲೆ ಆಡುತ್ತೇವೆ. ಹೀಗಾಗಿ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ 180 ರನ್ ಗಳಿಸುವುದು ಹೇಗೆ ಎಂದು ತಿಳಿದಿಲ್ಲ. ನಾನು ಕೇವಲ ವಿಕೆಟ್‌ ಅನ್ನು ದೂಷಿಸುವುದಿಲ್ಲ. ಬದಲಿಗೆ ನಾವು ನಮ್ಮ ಕೌಶಲ್ಯ ಮತ್ತು ಮನಸ್ಥಿತಿಯ ಮೇಲೂ ಕೆಲಸ ಮಾಡಬೇಕು ಎಂದು ಶಾಂಟೊ ಹೇಳಿದರು.

IND vs BAN: ‘180 ರನ್ ಗಳಿಸುವುದು ಹೇಗೆಂದು ಗೊತ್ತಿಲ್ಲ’; ಬ್ಯಾಟ್ಸ್‌ಮನ್‌ಗಳ ಮಾನ ಕಳೆದ ಬಾಂಗ್ಲಾ ನಾಯಕ
ನಜ್ಮುಲ್ ಹೊಸೈನ್ ಶಾಂಟೊ
Follow us on

ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನ ಶುಭಾರಂಭ ಮಾಡಿದೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯವು ಗ್ವಾಲಿಯರ್‌ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ, ಪ್ರವಾಸಿ ಬಾಂಗ್ಲಾದೇಶ ತಂಡವನ್ನು  7 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ತಂಡ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಒಂದೆಡೆ 128 ರನ್​ಗಳ ಗುರಿಯನ್ನು ಕೇವಲ 11.5 ಓವರ್​ಗಳಲ್ಲಿ ಸಾಧಿಸಿದ ಖುಷಿಯಲ್ಲಿ ಟೀಂ ಇಂಡಿಯಾ ಇದ್ದರೆ, ಇತ್ತ ಬ್ಯಾಟಿಂಗ್ ಸ್ನೇಹಿ ಪಿಚ್​ನಲ್ಲೂ ತಂಡದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದ್ದಕ್ಕೆ ಎದುರಾಳಿ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಅಸಮಾಧಾನ ಹೊರಹಾಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನಿಯಮಿತವಾಗಿ 180 ಪ್ಲಸ್ ಸ್ಕೋರ್ ಮಾಡುವುದು ಹೇಗೆ ಎಂದು ತಮ್ಮ ತಂಡಕ್ಕೆ ತಿಳಿದಿಲ್ಲ ಎಂದು ಶಾಂಟೊ ಬಹಿರಂಗವಾಗಿ ತಂಡದ ನ್ಯೂನತೆಯನ್ನು ಎತ್ತಿಹಿಡಿದಿದ್ದಾರೆ.

ಟಾಪ್ ಆರ್ಡರ್ ಫೇಲ್

ವಾಸ್ತವವಾಗಿ ಕೆಲವು ಸಮಯದಿಂದ ಬಾಂಗ್ಲಾದೇಶದ ಬ್ಯಾಟಿಂಗ್ ದುರ್ಬಲವಾಗಿ ಕಾಣುತ್ತಿದೆ. ತಂಡದ ಬ್ಯಾಟ್ಸ್‌ಮನ್‌ಗಳು ವಿಶೇಷವಾಗಿ ಪವರ್ ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿಯೂ ಸಹ, ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಮೊದಲ ಆರು ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಕೇವಲ 39 ರನ್ ಕಲೆಹಾಕಲಷ್ಟೇ ಶಕ್ತರಾದರು. ಹೀಗಾಗಿ ತಂಡ 127 ರನ್ ಗಳಿಸಲಷ್ಟೇ ಶಕ್ತವಾಯಿತು.

ಬದಲಾವಣೆಗಳನ್ನು ಮಾಡಬೇಕಾಗಿದೆ

ಇನ್ನು ಈ ಪಂದ್ಯದಲ್ಲಿ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಬಾಂಗ್ಲಾ ನಾಯಕ ಶಾಂಟೊ, ‘ನಮಗೆ ಸಾಮರ್ಥ್ಯವಿದೆ, ಆದರೆ ನಮ್ಮ ಕೌಶಲ್ಯಗಳಲ್ಲಿ ಸುಧಾರಣೆಗೆ ಅವಕಾಶವಿದೆ. ಕಳೆದ 10 ವರ್ಷಗಳಿಂದ ಇದೇ ರೀತಿ ಬ್ಯಾಟಿಂಗ್ ಮಾಡುತ್ತಿದ್ದೇವೆ. ಕೆಲವೊಮ್ಮೆ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ. ನಾವು ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ. ತವರಿನಲ್ಲಿ ನಾವು ಆಡುವ ವಿಕೆಟ್‌ಗಳಲ್ಲಿ ದೊಡ್ಡ ಸ್ಕೋರ್‌ಗಳನ್ನು ಮಾಡಲಾಗುವುದಿಲ್ಲ. ಇದು ನಮ್ಮ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ.

ತವರಿನಲ್ಲಿ ನಾವು 140 ರಿಂದ 150 ರನ್ ಕಲೆಹಾಕಬಹುದಾದಂತಹ ವಿಕೆಟ್‌ಗಳ ಮೇಲೆ ಆಡುತ್ತೇವೆ. ಹೀಗಾಗಿ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ 180 ರನ್ ಗಳಿಸುವುದು ಹೇಗೆ ಎಂದು ತಿಳಿದಿಲ್ಲ. ನಾನು ಕೇವಲ ವಿಕೆಟ್‌ ಅನ್ನು ದೂಷಿಸುವುದಿಲ್ಲ. ಬದಲಿಗೆ ನಾವು ನಮ್ಮ ಕೌಶಲ್ಯ ಮತ್ತು ಮನಸ್ಥಿತಿಯ ಮೇಲೂ ಕೆಲಸ ಮಾಡಬೇಕು. ನಾವು ಕೆಟ್ಟ ಆಟ ಆಡಿದ್ದೇವೆ ಎಂದು ನಾನು ಹೇಳುವುದಿಲ್ಲ. ನಮ್ಮ ತಂಡ ಇದಕ್ಕಿಂತ ಉತ್ತಮವಾಗಿದೆ ಆದರೆ ದೀರ್ಘಕಾಲದವರೆಗೆ ಈ ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡಲು ನಮಗೆ ಸಾಧ್ಯವಾಗಲಿಲ್ಲ. ನಮ್ಮ ತಂಡ ಅಷ್ಟು ಕೆಟ್ಟದಾಗಿದೆ ಎಂದು ನಾನು ಭಾವಿಸುವುದಿಲ್ಲ. ನಮ್ಮ ಬ್ಯಾಟ್ಸ್‌ಮನ್‌ಗಳಲ್ಲದೇ ಇಡೀ ಬ್ಯಾಟಿಂಗ್ ಯೂನಿಟ್ ಉತ್ತಮ ಪ್ರದರ್ಶನ ನೀಡಲಿಲ್ಲ.

ಪವರ್ ಪ್ಲೇ ಕಳವಳಕಾರಿಯಾಗಿದೆ

ಪವರ್ ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವುದು ನಮ್ಮ ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. ಪವರ್ ಪ್ಲೇ ಖಂಡಿತವಾಗಿಯೂ ನಮಗೆ ಕಳವಳಕಾರಿಯಾಗಿದೆ. ಮೊದಲ ಆರು ಓವರ್‌ಗಳಲ್ಲಿ ವಿಕೆಟ್‌ಗಳನ್ನು ಉಳಿಸಿಕೊಂಡು ನಾವು ರನ್ ಗಳಿಸಬೇಕಾಗಿದೆ. ಇದು ಸಂಭವಿಸದಿದ್ದರೆ, ನಂತರದ ಬ್ಯಾಟ್ಸ್‌ಮನ್‌ಗಳಿಗೆ ಪರಿಸ್ಥಿತಿ ಸವಾಲಾಗುತ್ತದೆ. ಪವರ್ ಪ್ಲೇನಲ್ಲಿ ಬ್ಯಾಟಿಂಗ್ ಮಾಡುವ ನಮ್ಮ ಆಟಗಾರರು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Mon, 7 October 24