IND vs BAN: ಹಾರ್ದಿಕ್ ಪಾಂಡ್ಯ ಬಾರಿಸಿದ ನೋ ಲೂಕ್​ ಶಾಟ್​ಗೆ ಸೆಲ್ಯೂಟ್ ಹೊಡೆದ ಕ್ರಿಕೆಟ್ ಜಗತ್ತು..! ವಿಡಿಯೋ ನೋಡಿ

Hardik Pandya: ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಪಾಂಡ್ಯ ಟೀಂ ಇಂಡಿಯಾಗೆ ಸುಲಭ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳನ್ನು ಎದುರಿಸಿ, 243.75 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 39 ರನ್ ಗಳಿಸಿದರು. ಪಾಂಡ್ಯ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

IND vs BAN: ಹಾರ್ದಿಕ್ ಪಾಂಡ್ಯ ಬಾರಿಸಿದ ನೋ ಲೂಕ್​ ಶಾಟ್​ಗೆ ಸೆಲ್ಯೂಟ್ ಹೊಡೆದ ಕ್ರಿಕೆಟ್ ಜಗತ್ತು..! ವಿಡಿಯೋ ನೋಡಿ
ಹಾರ್ದಿಕ್ ಪಾಂಡ್ಯ

Updated on: Oct 07, 2024 | 4:18 PM

ಭಾರತ ಮತ್ತು ಬಾಂಗ್ಲಾದೇಶ ನಡುವೆ ಗ್ವಾಲಿಯರ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಬಾಂಗ್ಲಾ ನೀಡಿದ 128 ರನ್​ಗಳ ಗುರಿಯನ್ನು ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ಮುಟ್ಟಿತು. ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 39 ರನ್ ಸಿಡಿಸಿ ಸ್ಫೋಟಕ ಆಟವಾಡಿದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಪಾಂಡ್ಯ ಸಿಡಿಸಿದ ಈ 5 ಬೌಂಡರಿಗಳಲ್ಲಿ ಒಂದು ಬೌಂಡರಿ ಮಾತ್ರ ಕ್ರೀಡಾಂಗಣದಲ್ಲಿ ನೆರೆದಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ತಸ್ಕಿನ್ ಅಹ್ಮದ್ ಓವರ್​ನಲ್ಲಿ ನೋ ಲೂಕ್ ರ್ಯಾಂಪ್ ಶಾಟ್ ಆಡಿದ ಹಾರ್ದಿಕ್ ಪಾಂಡ್ಯ ವಿಕೆಟ್ ಕೀಪರ್ ಹಿಂದೆ ಭರ್ಜರಿ ಬೌಂಡರಿ ಬಾರಿಸಿದರು. ಇದೀಗ ಪಾಂಡ್ಯ ಸಿಡಿಸಿದ ಈ ಅಪರೂಪದ ಬೌಂಡರಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ನೋ ಲೂಕ್ ಶಾಟ್

ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅಧಿಕ ರನ್​ಗಳ ಇನ್ನಿಂಗ್ಸ್‌ ಆಡಿದ ಹಾರ್ದಿಕ್ ಪಾಂಡ್ಯ 12ನೇ ಓವರ್‌ನಲ್ಲಿ ಅದ್ಭುತ ಶಾಟ್ ಆಡಿದರು. ಬಾಂಗ್ಲಾದೇಶದ ಅನುಭವಿ ಬೌಲರ್ ತಸ್ಕಿನ್ ಅಹ್ಮದ್ ಬೌಲ್ ಮಾಡಿದ ಓವರ್‌ನ ಮೂರನೇ ಎಸೆತವನ್ನು ಪಾಂಡ್ಯ ವಿಕೆಟ್ ಕೀಪರ್ ಹಿಂದೆ ಬಾರಿಸಿ ಬೌಂಡರಿಗಟ್ಟುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ ಆರಂಭದಲ್ಲಿ ಪಾಂಡ್ಯ ಈ ಚೆಂಡನ್ನು ಆಡದೆ ಬಿಟ್ಟಿದ್ದಾರೆ ಎಂದು ಕಾಣುತ್ತಿತ್ತು. ಆದರೆ ನಂತರ ಯಾರೂ ನಂಬಲು ಸಾಧ್ಯವಾಗದ ಘಟನೆಯೊಂದು ನಡೆಯಿತು.

ಹಾರ್ದಿಕ್ ಹಿಂದೆ ಸರಿದು ತನ್ನ ಬ್ಯಾಟ್‌ನ ಮುಖ ತೆರೆದು, ಚೆಂಡಿಗೆ ಚುಂಬಿಸುವ ಕೆಲಸ ಮಾಡಿದರು. ಇದಾದ ನಂತರವೂ ಚೆಂಡು ವಿಕೆಟ್‌ಕೀಪರ್‌ನ ಗ್ಲೌಸ್‌ಗೆ ಹೋಗಿದೆಯೇ ಅಥವಾ ಬೌಂಡರಿ ದಾಟಿದೆಯೇ ಎಂದು ನೋಡಲು ಹಾರ್ದಿಕ್ ಒಮ್ಮೆಯೂ ಹಿಂತಿರುಗಿ ನೋಡಲಿಲ್ಲ. ಪಾಂಡ್ಯ ಅವರ ಈ ವರ್ತನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಬಾಂಗ್ಲಾ ಬೌಲರ್​ಗಳ ಬೆವರಿಳಿಸಿದ ಪಾಂಡ್ಯ

ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಪಾಂಡ್ಯ ಟೀಂ ಇಂಡಿಯಾಗೆ ಸುಲಭ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳನ್ನು ಎದುರಿಸಿ, 243.75 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 39 ರನ್ ಗಳಿಸಿದರು. ಪಾಂಡ್ಯ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹಾರ್ದಿಕ್ ಪಂದ್ಯವನ್ನು ಸಿಕ್ಸರ್‌ನೊಂದಿಗೆ ಅಂತ್ಯಗೊಳಿಸಿದ್ದು ಇದು ಐದನೇ ಬಾರಿ. ಪಾಂಡ್ಯ ಬಿಟ್ಟರೆ ಬೇರೆ ಯಾವ ಭಾರತೀಯ ಬ್ಯಾಟ್ಸ್​ಮನ್​ಗೂ ಇಷ್ಟು ಬಾರಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ.

ಟೀಂ ಇಂಡಿಯಾಗೆ ಏಕಪಕ್ಷೀಯ ಗೆಲುವು

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 19.4 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ ತಲಾ 3 ವಿಕೆಟ್ ಪಡೆದರು. ಉಳಿದಂತೆ ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು. ಅದೇ ಹೊತ್ತಿಗೆ 128 ರನ್‌ಗಳ ಗುರಿಯನ್ನು ಟೀಂ ಇಂಡಿಯಾ 11.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು ಸಾಧಿಸಿತು. ಪಾಂಡ್ಯ ಅಲ್ಲದೆ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ತಲಾ 29 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಸಹಕರಿಸಿದರು.

Published On - 4:17 pm, Mon, 7 October 24