IND vs BAN: ನಾವು ಹೊಡಿಬೇಕು ಅಂತಾನೆ ಡಿಸೈಡ್ ಆಗಿದ್ದೆವು: ಗೆದ್ದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು?

|

Updated on: Oct 01, 2024 | 3:25 PM

India vs Bangladesh 2nd Test: ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಬಾಂಗ್ಲಾದೇಶ್ 233 ರನ್​ಗಳಿಸಿದರೆ, ಟೀಮ್ ಇಂಡಿಯಾ 285 ರನ್​ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಬಾಂಗ್ಲಾದೇಶ್ ತಂಡವನ್ನು 146 ರನ್​ಗಳಿಗೆ ಭಾರತೀಯ ಬೌಲರ್​ಗಳು ಆಲೌಟ್ ಮಾಡಿದ್ದರು. ಈ ಮೂಲಕ 95 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಏಳು ವಿಕೆಟ್​ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

IND vs BAN: ನಾವು ಹೊಡಿಬೇಕು ಅಂತಾನೆ ಡಿಸೈಡ್ ಆಗಿದ್ದೆವು: ಗೆದ್ದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು?
Rohit Sharma
Follow us on

ಐದು ದಿನಗಳ ಟೆಸ್ಟ್ ಪಂದ್ಯ… ಅದರರಲ್ಲಿ ಎರಡುವರೆ ದಿನದಾಟಗಳು ಮಳೆಗೆ ಆಹುತಿ. 4ನೇ ದಿನದಾಟದಲ್ಲೂ ಮೊದಲ ಇನಿಂಗ್ಸ್​ ಮುಂದುವರೆಸಿದ್ದ ಎದುರಾಳಿ ತಂಡ… ಇಂತಹದೊಂದು ಸನ್ನಿವೇಶ ಕಂಡು ಬಂದರೆ ಈ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವುದು ಸಾಮಾನ್ಯ. ಆದರೆ ಭಾರತ ತಂಡ ಅಂತಹ ಡ್ರಾಗೆ ಸಿದ್ಧವಾಗಿರಲಿಲ್ಲ. ಸಿಕ್ಕ ಕೆಲವೇ ಕೆಲವು ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ನಾಲ್ಕನೇ ದಿನದಾಟದಲ್ಲಿ ಮೊದಲ ಇನಿಂಗ್ಸ್ ಆಡುತ್ತಿದ್ದ ಬಾಂಗ್ಲಾದೇಶ್ ತಂಡವನ್ನು ಕೇವಲ 233 ರನ್​ಗಳಿಗೆ ಆಲೌಟ್ ಮಾಡಿದ ಟೀಮ್ ಇಂಡಿಯಾ ಅದೇ ದಿನ ಕೇವಲ 33.4 ಓವರ್​ಗಳಲ್ಲಿ 285/9 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವನ್ನು ಐದನೇ ದಿನದಾಟದಲ್ಲಿ 146 ರನ್​ಗಳಿಗೆ ಆಲೌಟ್ ಮಾಡಿತು. ಈ ಮೂಲಕ 95 ರನ್​ಗಳ ಗುರಿ ಪಡೆದು ಟೀಮ್ ಇಂಡಿಯಾ ಅಂತಿಮ ದಿನದಾಟದಲ್ಲಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿತು.

ಇಂತಹದೊಂದು ಅಮೋಘ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಈ ಫಲಿತಾಂಶಕ್ಕಾಗಿ ಮಾಡಿಕೊಂಡ ಸಿದ್ಧತೆಗಳನ್ನು ಬಹಿರಂಗಪಡಿಸಿದ್ದಾರೆ. ನಮ್ಮ ಮೊದಲ ಪ್ಲ್ಯಾನ್ ಬಾಂಗ್ಲಾದೇಶ್ ತಂಡವನ್ನು ನಾಲ್ಕನೇ ದಿನದಾಟದಲ್ಲೇ ಆಲೌಟ್ ಮಾಡುವುದಾಗಿತ್ತು. ಇದಕ್ಕಾಗಿ ನಾವು ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು.

ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ನಾನು ಸಹ ಕ್ರಿಕೆಟ್ ಆಡಿದ್ದೇನೆ. ಹೀಗಾಗಿ ಅವರ ಮನಸ್ಥಿತಿ ಏನು? ಏನು ಮಾಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ನಾಲ್ಕನೇ ದಿನದಾಟದಲ್ಲಿ ಬಾಂಗ್ಲಾ ತಂಡವನ್ನು ಆಲೌಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ಲ್ಯಾನ್ ರೂಪಿಸಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಬಾಂಗ್ಲಾದೇಶ್ ತಂಡವನ್ನು 233 ರನ್​ಗಳಿಗೆ ಆಲೌಟ್ ಆದಾಗ ನಾವು ಈ ಸ್ಕೋರ್​ ಬಗ್ಗೆ ಯೋಚಿಸಿರಲಿಲ್ಲ. ಬದಲಾಗಿ ನಮಗೆ ಎಷ್ಟು ಓವರ್​ಗಳನ್ನು ಆಡಲು ಸಿಗಲಿದೆ ಎಂಬುದರ ಲೆಕ್ಕಾಚಾರವನ್ನು ಹಾಕಲಾಗಿತ್ತು. ಹೀಗಾಗಿ ತ್ವರಿತ ಗತಿಯಲ್ಲಿ ರನ್​ಗಳಿಸಲು ಪ್ಲ್ಯಾನ್ ರೂಪಿಸಿದ್ದೆವು. ಆದರೆ ಈ ಪಿಚ್​​ನಲ್ಲಿ ಬ್ಯಾಟ್ ಮಾಡುವುದು ಕೂಡ ಸುಲಭವಾಗಿರಲಿಲ್ಲ. ಹೀಗಾಗಿ ಏನು ಬೇಕಾದರೂ ಆಗಬಹುದು ಎಂಬ ಎಚ್ಚರಿಕೆ ನಮ್ಮಲ್ಲಿತ್ತು ಎಂದು ರೋಹಿತ್ ಶರ್ಮಾ ಹೇಳಿದರು.

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಆರ್ಭಟಕ್ಕೆ ಸೆಹ್ವಾಗ್ ದಾಖಲೆಯೇ ಧ್ವಂಸ..!

ಪಿಚ್​ ಬ್ಯಾಟಿಂಗ್​ಗೆ ಸಹಕಾರಿಯಲ್ಲದಿದ್ದರೂ ನಾವು ರಿಸ್ಕ್​ ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಈ ಪ್ರಯತ್ನದಲ್ಲಿ ನಾವು 100-150ಕ್ಕೆ ಔಟಾದರೂ ಅದಕ್ಕೆ ಸಿದ್ಧರಿದ್ದೆವು. ಒಟ್ಟಿನಲ್ಲಿ ಡ್ರಾ ಆಗುವ ಪಂದ್ಯದಲ್ಲಿ ಗೆಲ್ಲುವ ಪ್ರಯತ್ನ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಈ ಪ್ರಯತ್ನದಲ್ಲಿ ಇದೀಗ ನಾವು ಸಫಲರಾಗಿದ್ದೇವೆ ಎಂದು ರೋಹಿತ್ ಶರ್ಮಾ ಖುಷಿ ವ್ಯಕ್ತಪಡಿಸಿದ್ದಾರೆ.