ಬಾಂಗ್ಲಾದೇಶವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಹೈದರಾಬಾದ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 133 ರನ್‌ಗಳ ಜಯ ಸಾಧಿಸಿದೆ. ಭಾರತ ಪರ ಸಂಜು ಸ್ಯಾಮ್ಸನ್ 111 ರನ್ ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಸೂರ್ಯಕುಮಾರ್ ಬಿರುಸಿನ 75 ರನ್ ಗಳಿಸಿದರು. ಈ ಮೂಲಕ ಭಾರತ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 297 ರನ್ ಗಳಿಸಿತು. ಉತ್ತರವಾಗಿ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 164 ರನ್ ಗಳಿಸಲಷ್ಟೇ ಶಕ್ತವಾಯಿತು. ಇಡೀ ಸರಣಿಯಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಆದರೆ ಹಾರ್ದಿಕ್ ಈ ಪ್ರಶಸ್ತಿ ಪಡೆದಿದ್ದಕ್ಕೆ ಹೆಚ್ಚು ಸುದ್ದಿಯಾಗುವ ಬದಲು ಅದೊಂದು ಮಾನವೀಯ ಕೆಲಸ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರರಾಗಿದ್ದಾರೆ.
ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ನಲ್ಲಿ ಸಿಡಿಲಬ್ಬರ ಸೃಷ್ಟಿಸಿದ ಹಾರ್ದಿಕ್ ಕೇವಲ 18 ಎಸೆತಗಳನ್ನು ಎದುರಿಸಿ 47 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಹಾರ್ದಿಕ್ ಅವರ ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು ನಾಲ್ಕು ಗಗನಚುಂಬಿ ಸಿಕ್ಸರ್‌ಗಳು ಸೇರಿದ್ದವು. ಮೊದಲು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದ ಹಾರ್ದಿಕ್, ಆ ಬಳಿಕ ಫೀಲ್ಡಿಂಗ್ ಮಾಡುವ ಸಮಯದಲ್ಲಿ ಬಾಲ್ ಬಾಯ್ ಜೊತೆಗೆ ಸೆಲ್ಫಿಗೆ ಪೋಸ್ ನೀಡಿ ಸರಳತೆ ಮೆರೆದರು.
ಬಾಂಗ್ಲಾದೇಶದ ಇನ್ನಿಂಗ್ಸ್ ವೇಳೆ ಹಾರ್ದಿಕ್ ಪಾಂಡ್ಯ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಅಲ್ಲೆ ಕುಳಿತಿದ್ದ ಬಾಲ್ ಬಾಯ್, ಹಾರ್ದಿಕ್ ಜೊತೆ ಫೋಟೋ ತೆಗೆಸಿಕೊಳ್ಳಲು ವಿನಂತಿಸುತ್ತಾನೆ. ಕೂಡಲೇ ಹಾರ್ದಿಕ್ ಆ ಪುಟ್ಟ ಅಭಿಮಾನಿಯ ಆಸೆಯನ್ನು ಪೂರೈಸಿ ಬೌಂಡರಿ ಹತ್ತಿರ ಹೋಗಿ ಬಾಲ್ ಬಾಯ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಹಾರ್ದಿಕ್ ಅವರ ಔದಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
What a kind hearted guy he is❤️
Hardik Pandya took selfies with ball-boys in the ground🫡 pic.twitter.com/jQqOJ9mumz— Rohan Gangta (@rohan_gangta) October 12, 2024
ಭಾರತದ ಪರ ಎಲ್ಲಾ ಮೂರು ಟಿ20 ಪಂದ್ಯಗಳನ್ನು ಆಡಿದ ಹಾರ್ದಿಕ್ 222.64 ರ ಸ್ಟ್ರೈಕ್ ರೇಟ್ನಲ್ಲಿ 11 ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ ಒಟ್ಟು 118 ರನ್ ಗಳಿಸಿದರು. ಈ ಮೂಲಕ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಬೌಲಿಂಗ್ನಲ್ಲೂ ಮ್ಯಾಜಿಕ್ ಮಾಡಿದ ಹಾರ್ದಿಕ್, ಮೂರು ಪಂದ್ಯಗಳಲ್ಲಿ ಏಳು ಓವರ್ ಬೌಲ್ ಮಾಡಿ 58 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಸಹ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Sun, 13 October 24