ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟಿ20 ಪಂದ್ಯವು ಬುಧವಾರ (ಅಕ್ಟೋಬರ್ 9) ನಡೆಯಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಒಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಭಾರತದ ಪರ ಕಣಕ್ಕಿಳಿಯಲು ಹಲವು ಆಟಗಾರರು ಸರದಿಯಲ್ಲಿದ್ದು, ಹೀಗಾಗಿ ಮೊದಲ ಮ್ಯಾಚ್ನಲ್ಲಿ ಅವಕಾಶ ಪಡೆಯದ ಆಟಗಾರರೊಬ್ಬರಿಗೆ ಈ ಸಲ ಚಾನ್ಸ್ ನೀಡುವ ಸಾಧ್ಯತೆಯಿದೆ.
ಅದರಂತೆ ದ್ವಿತೀಯ ಪಂದ್ಯದಲ್ಲೂ ಟೀಮ್ ಇಂಡಿಯಾ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವುದು ಖಚಿತ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಆಡಬಹುದು.
ಇನ್ನು ಐದನೇ ಕ್ರಮಾಂಕವು ಹಾರ್ದಿಕ್ ಪಾಂಡ್ಯಗೆ ಸೀಮಿತ. ಆರನೇ ಕ್ರಮಾಂಕದಲ್ಲಿ ರಿಂಕು ಸಿಂಗ್ ಬ್ಯಾಟ್ ಬೀಸುವುದನ್ನು ಎದುರು ನೋಡಬಹುದು. ಹಾಗೆಯೇ ವಾಷಿಂಗ್ಟನ್ ಸುಂದರ್ ಹಾಗೂ ವರುಣ್ ಚಕ್ರವರ್ತಿ 7ನೇ ಮತ್ತು 8ನೇ ಸ್ಥಾನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನುಳಿದಂತೆ ವೇಗಿಗಳಾಗಿ ಅರ್ಷದೀಪ್ ಸಿಂಗ್ ಹಾಗೂ ಮಯಾಂಕ್ ಯಾದವ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಆದರೆ ಮೊದಲ ಪಂದ್ಯದಲ್ಲಿ ಆಡಿದ್ದ ಆಲ್ರೌಂಡರ್ ನಿತೀಶ್ ರೆಡ್ಡಿ ಅವರನ್ನು ಈ ಪಂದ್ಯದಿಂದ ಕೈ ಬಿಡುವ ಸಾಧ್ಯತೆಯಿದ್ದು, ಅವರ ಬದಲಿಗೆ ವೇಗಿ ಹರ್ಷಿತ್ ರಾಣಾಗೆ ಚಾನ್ಸ್ ನೀಡಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ಈ ಕೆಳಗಿನಂತಿದೆ….
ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲೇ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಗ್ವಾಲಿಯರ್ನಲ್ಲಿ ನಡೆದ ಈ ಪಂದ್ಯವನ್ನು ಭಾರತ ತಂಡವು 7 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಇದೀಗ ಉಭಯ ತಂಡಗಳು ಎರಡನೇ ಪಂದ್ಯಕ್ಕಾಗಿ ಸಜ್ಜಾಗಿದೆ. ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು. ಅತ್ತ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ ಬಾಂಗ್ಲಾದೇಶ್ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕು.
ಇದನ್ನೂ ಓದಿ: ಕುಸ್ತಿಯಲ್ಲಿ ಸೋತು, ರಾಜಕೀಯದಲ್ಲಿ ಗೆದ್ದ ವಿನೇಶ್ ಫೋಗಟ್
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್(ನಾಯಕ) ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್, ತಿಲಕ್ ವರ್ಮಾ.