IND vs BAN: ಭಾರತ್ ಬಾಲ್ಗೆ ತತ್ತರಿಸಿದ ಬಾಂಗ್ಲಾ: ಟೀಮ್ ಇಂಡಿಯಾಗೆ ಭರ್ಜರಿ ಜಯ
ಗೆಲ್ಲುವ ತನಕ ಆಡು, ಗೆಲ್ಲಲು ಸಾಧ್ಯವಿಲ್ಲದಿದ್ದರೆ ಡ್ರಾ ಮಾಡು... ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ ಸ್ವರೂಪವನ್ನು ಈ ರೀತಿಯಾಗಿ ವರ್ಣಿಸಲಾಗುತ್ತದೆ. ಆದರೆ ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಅಲೆಯೆದ್ದಿದೆ. ಇಂಗ್ಲೆಂಡ್ ತಂಡ ಶುರು ಮಾಡಿದ ಆಕ್ರಮಣಕಾರಿ ಆಟವನ್ನು ಇದೀಗ ಟೀಮ್ ಇಂಡಿಯಾ ಕೂಡ ಆರಂಭಿಸಿದೆ. ಅತ್ತ ಇಂಗ್ಲೆಂಡ್ ಈ ಆಟಕ್ಕೆ ಬಾಝ್ ಬಾಲ್ ಎಂದು ಹೆಸರಿಟ್ಟರೆ, ಭಾರತೀಯ ಬ್ಯಾಟರ್ಗಳ ಆರ್ಭಟಕ್ಕೆ ಇದೀಗ ಭಾರತ್ ಬಾಲ್ ಎನ್ನಲಾಗುತ್ತಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಬಾಝ್ ಬಾಲ್ ಎಫೆಕ್ಟ್ ಗೊತ್ತೇ ಇದೆ. ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡಮ್ ಮೆಕಲಂ ಪರಿಚಯಿಸಿದ ಆಕ್ರಮಣಕಾರಿ ಟೆಸ್ಟ್ ಕ್ರಿಕೆಟ್ನತ್ತ ಭಾರತ ತಂಡ ಕೂಡ ಮುಖ ಮಾಡಿದೆ. ಆ ಆಕ್ರಮಣಕಾರಿ ಆಟದೊಂದಿಗೆ ಇದೀಗ ಡ್ರಾನಲ್ಲಿ ಮುಗಿಯಬೇಕಿದ್ದ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಖುದ್ದು ಬಾಂಗ್ಲಾದೇಶ್ ತಂಡ ಕೂಡ ಟೀಮ್ ಇಂಡಿಯಾ ವಿರುದ್ಧ ಡ್ರಾ ಸಾಧಿಸುವ ಖುಷಿಯಲ್ಲಿದ್ದರು. ಏಕೆಂದರೆ ಮಳೆಯ ಕಾರಣ ಈ ಪಂದ್ಯದ ಮೊದಲ ದಿನದಾಟದಲ್ಲಿ ನಡೆದಿದ್ದು ಕೇವಲ 35 ಓವರ್ಗಳು ಮಾತ್ರ.
ಇನ್ನು 2ನೇ ಮತ್ತು 3ನೇ ದಿನದಾಟಗಳು ಮಳೆಗೆ ಅಹುತಿಯಾಗಿದ್ದವು. ಇತ್ತ ನಾಲ್ಕನೇ ದಿನದಾಟದಲ್ಲಿ ಪ್ರಥಮ ಇನಿಂಗ್ಸ್ ಮುಂದುವರೆಸಿದ್ದ ಬಾಂಗ್ಲಾದೇಶ್ ತಂಡವು 233 ರನ್ಗಳಿಸಿ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ವಿಸ್ಪೋಟಕ ಬ್ಯಾಟಿಂಗ್ನೊಂದಿಗೆ ಟೆಸ್ಟ್ ಕ್ರಿಕೆಟ್ನ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿಬಿಟ್ಟರು.
ಗೆಲುವೊಂದೇ ಗುರಿ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಥಮ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ (23) ಹಾಗೂ ಯಶಸ್ವಿ ಜೈಸ್ವಾಲ್ ಸ್ಪೋಟಕ ಆರಂಭ ಒದಗಿಸಿದ್ದರು. ಪರಿಣಾಮ 18 ಎಸೆತಗಳಲ್ಲಿ 50 ರನ್ಗಳು ಮೂಡಿಬಂತು. ಈ ಆರಂಭಿಕ ಆರ್ಭಟವನ್ನು ಮುಂದುವರೆಸಿದ ಟೀಮ್ ಇಂಡಿಯಾದ ಯುವ ಬ್ಯಾಟರ್ಗಳು ಮುಂದುವರೆಸಿದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಹಾಗೂ ಜೈಸ್ವಾಲ್ ಕೇವಲ 10.1 ಓವರ್ಗಳಲ್ಲಿ ತಂಡದ ಸ್ಕೋರ್ ಅನ್ನು 100ರ ಗಡಿದಾಟಿಸಿದರು. ಇನ್ನು 150 ರನ್ ಪೂರೈಸಲು ಟೀಮ್ ಇಂಡಿಯಾ ತೆಗೆದುಕೊಂಡಿದ್ದು 18.2 ಓವರ್ಗಳು ಮಾತ್ರ. ಹಾಗೆಯೇ 24.2 ಓವರ್ಗಳಲ್ಲಿ 200 ರನ್ಗಳನ್ನು ಸಹ ಕಲೆಹಾಕಿದರು. ಇದರ ನಡುವೆ ಶುಭ್ಮನ್ ಗಿಲ್ 39 ರನ್ ಬಾರಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 51 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 72 ರನ್ ಚಚ್ಚಿದರು.
ಆ ಬಳಿಕ ಬಂದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಸಹ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ ಕೇವಲ 30.1 ಓವರ್ಗಳಲ್ಲಿ 250 ರನ್ ಮೂಡಿಬಂತು. ಈ ವೇಳೆ 47 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಔಟಾದರು. ಇನ್ನು ಕೆಎಲ್ ರಾಹುಲ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ 43 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 68 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ದಿನದಾಟದಲ್ಲೇ ಕೇವಲ 34.4 ಓವರ್ಗಳಲ್ಲಿ 285/9 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ಟೀಮ್ ಇಂಡಿಯಾ ಮಾಸ್ಟರ್ ಪ್ಲ್ಯಾನ್:
ಡ್ರಾನಲ್ಲಿ ಅಂತ್ಯವಾಗಬೇಕಿದ್ದ ಪಂದ್ಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ ಅತೀ ಕಡಿಮೆ ಓವರ್ಗಳಲ್ಲಿ 285 ರನ್ಗಳಿಸಿ 52 ರನ್ಗಳ ಮುನ್ನಡೆ ಪಡೆಯಿತು. ಅಲ್ಲದೆ ನಾಲ್ಕನೇ ದಿನದಾಟದಲ್ಲೇ ಬಾಂಗ್ಲಾದೇಶ್ ತಂಡವನ್ನು ದ್ವಿತೀಯ ಇನಿಂಗ್ಸ್ಗೆ ಆಹ್ವಾನಿಸಿದರು. ಈ ಮೂಲಕ ಕೊನೆಯ ದಿನದಾಟದೊಳಗೆ ಬಾಂಗ್ಲಾದೇಶ್ ತಂಡವನ್ನು ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು.
ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು. ತಮ್ಮ ಅನುಭವವನ್ನು ಧಾರೆಯೆರೆದ ಅಶ್ವಿನ್ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ಇಬ್ಬರು ಬಾಂಗ್ಲಾ ಬ್ಯಾಟರ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು.
ಇನ್ನು 26 ರನ್ಗಳೊಂದಿಗೆ ಐದನೇ ದಿನದಾಟ ಶುರು ಮಾಡಿದ ಬಾಂಗ್ಲಾದೇಶ್ ತಂಡಕ್ಕೆ ಮೂರನೇ ಆಘಾತ ನೀಡಿದ್ದು ಕೂಡ ಅಶ್ವಿನ್. ಮೊದಲ ಇನಿಂಗ್ಸ್ನಲ್ಲಿ ಅಜೇಯ ಶತಕ ಬಾರಿಸಿದ್ದ ಮೊಮಿನುಲ್ ಹಕ್ (7) ಅವರ ವಿಕೆಟ್ ಕಬಳಿಸಿ ಅಶ್ವಿನ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ನಾಯಕ ನಜ್ಮುಲ್ ಹೊಸೈನ್ ಶಾಂತೊ (19), ಲಿಟ್ಟನ್ ದಾಸ್ (1), ಶಕೀಬ್ ಅಲ್ ಹಸನ್ (0) ಪೆವಿಲಿಯನ್ ಪರೇಡ್ ನಡೆಸಿದರು.
ಬ್ಯಾಕ್ ಟು ಬ್ಯಾಕ್ ವಿಕೆಟ್ ಸಿಗುತ್ತಿದ್ದಂತೆ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಕೇವಲ 146 ರನ್ಗಳಿಗೆ ಬಾಂಗ್ಲಾದೇಶ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಅಂದರೆ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಬಾಂಗ್ಲಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 94 ರನ್ಗಳ ಮುನ್ನಡೆ ಪಡೆಯಿತು. ಟೀಮ್ ಇಂಡಿಯಾ ಪರ ಅಶ್ವಿನ್, ಬುಮ್ರಾ ಹಾಗೂ ಜಡೇಜಾ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
ಟೀಮ್ ಇಂಡಿಯಾಗೆ 95 ರನ್ಗಳ ಟಾರ್ಗೆಟ್:
ಮೊದಲ ಇನಿಂಗ್ಸ್ನಲ್ಲಿ 52 ರನ್ಗಳ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 95 ರನ್ಗಳ ಸುಲಭ ಗುರಿ ಪಡೆಯಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಬಿರುಸಿನ ಹೊಡೆತಕ್ಕೆ ಮುಂದಾಗಿ ನಾಯಕ ರೋಹಿತ್ ಶರ್ಮಾ (8) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶುಭ್ಮನ್ ಗಿಲ್ (6) ಎಲ್ಬಿಡಬ್ಲ್ಯೂ ಆದರು.
ಈ ವೇಳೆ ಜೊತೆಗೂಡಿದ ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ (29) ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ ಕೇವಲ 43 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಜೈಸ್ವಾಲ್ (51) ಗೆಲುವಿಗೆ 3 ರನ್ ಬೇಕಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.
ಇದನ್ನೂ ಓದಿ: IND vs BAN Test: ದಾಖಲೆಗಳ ಮೇಲೆ ದಾಖಲೆ ಬರೆದ ಟೀಮ್ ಇಂಡಿಯಾ
ಅಂತಿಮವಾಗಿ 17.2 ಓವರ್ಗಳಲ್ಲಿ 98 ರನ್ ಬಾರಿಸಿ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶ್ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.