ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಇನಿಂಗ್ಸ್ನಲ್ಲಿ ಕೇವಲ 34.4 ಓವರ್ಗಳವರೆಗೆ ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 9 ವಿಕೆಟ್ ಕಳೆದುಕೊಂಡು 285 ರನ್ ಕಲೆಹಾಕಿತು.
ಈ 285 ರನ್ಗಳನ್ನು ಕಲೆಹಾಕುವುದರ ನಡುವೆ ಭಾರತೀಯ ಬ್ಯಾಟರ್ಗಳು ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದರು. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ವಿವರ ಈ ಕೆಳಗಿನಂತಿದೆ...
1- ಅತೀ ವೇಗದ ಅರ್ಧಶತಕ/ಶತಕ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 50 ರನ್ ಕಲೆಹಾಕಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು ಕೇವಲ 3 ಓವರ್ಗಳಲ್ಲಿ 50 ರನ್ ಬಾರಿಸಿದ್ದರು. ಇದಾದ ಬಳಿಕ 10.1 ಓವರ್ಗಳಲ್ಲಿ ಶತಕ ಪೂರೈಸುವ ಮೂಲಕ ಮತ್ತೊಂದು ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದರು.
2- ಅತೀ ವೇಗದ 150/200: ಅತೀ ವೇಗದ ಶತಕ ಪೂರೈಸಿದ ಟೀಮ್ ಇಂಡಿಯಾ 150 ರನ್ ಕಲೆಹಾಕಲು ತೆಗೆದುಕೊಂಡಿದ್ದು ಕೇವಲ 21.1 ಓವರ್ಗಳು. ಇದು ಸಹ ವಿಶ್ವ ದಾಖಲೆಯಾಗಿದೆ. ಹಾಗೆಯೇ 24.2 ಓವರ್ಗಳಲ್ಲಿ 200 ರನ್ ಪೂರೈಸಿ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಇನ್ನೂರು ರನ್ ಕಲೆಹಾಕಿದ ವಿಶ್ವ ದಾಖಲೆಯನ್ನೂ ಬರೆದರು.
3- ಅತೀ ವೇಗದ 250: ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 250 ರನ್ ಕಲೆಹಾಕಿದ ವಿಶ್ವ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿತ್ತು. 2022 ರಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ 33.6 ಓವರ್ಗಳಲ್ಲಿ 250 ರನ್ ಬಾರಿಸಿದ್ದರು. ಆದರೆ ಇದೀಗ ಈ ದಾಖಲೆಯನ್ನು ಟೀಮ್ ಇಂಡಿಯಾ ಮುರಿದಿದೆ. ಭಾರತೀಯ ಬ್ಯಾಟರ್ಗಳು ಕೇವಲ 30.1 ಓವರ್ಗಳಲ್ಲಿ 250 ರನ್ ಕಲೆಹಾಕಿ ಹೊಸ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.
4- ಅತ್ಯಧಿಕ ಸಿಕ್ಸರ್: ಬಾಂಗ್ಲಾದೇಶ್ ವಿರುದ್ಧದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಒಟ್ಟು 11 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಹನ್ನೊಂದು ಸಿಕ್ಸ್ಗಳೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ವರ್ಷ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿತ್ತು. 2022 ರಲ್ಲಿ ಆಂಗ್ಲರು 89 ಸಿಕ್ಸ್ ಸಿಡಿಸಿ ಈ ದಾಖಲೆ ಬರೆದಿದ್ದರು. ಇದೀಗ 2024 ರಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು 96 ಸಿಕ್ಸ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
5- ಅತ್ಯಧಿಕ ರನ್ ರೇಟ್: ಈ ಪಂದ್ಯದಲ್ಲಿ ಟೀಮ್ ಇಂಡಿಯಾ 285 ರನ್ಗಳನ್ನು ಕಲೆಹಾಕಿರುವುದು 8.22 ರನ್ ರೇಟ್ನಲ್ಲಿ ಎಂಬುದು ವಿಶೇಷ. ಇದು ಸಹ ವಿಶ್ವ ದಾಖಲೆಯಾಗಿದೆ. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ರೇಟ್ನಲ್ಲಿ 200ಕ್ಕಿಂತ ಹೆಚ್ಚು ರನ್ಗಳಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲ್ಲಿತ್ತು. ಆಸೀಸ್ ಪಡೆ 2017 ರಲ್ಲಿ ಪಾಕ್ ವಿರುದ್ಧ 7.53 ರನ್ ರೇಟ್ನಲ್ಲಿ 241 ರನ್ ಬಾರಿಸಿದ್ದರು. ಇದೀಗ ಟೀಮ್ ಇಂಡಿಯಾ 8.22 ರನ್ ರೇಟ್ನಲ್ಲಿ 285 ರನ್ ಕಲೆಹಾಕಿ ಹೊಸ ವಿಶ್ವ ದಾಖಲೆ ಬರೆದಿದೆ.
6- ಅತೀ ವೇಗದ ಜೊತೆಯಾಟ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಜೊತೆಯಾಟವಾಡಿದ ಆರಂಭಿಕ ಜೋಡಿ ಎಂಬ ದಾಖಲೆ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಈ ಜೋಡಿಯು 14.34 ರನ್ ರೇಟ್ನಲ್ಲಿ 55 ರನ್ಗಳ ಜೊತೆಯಾಟವಾಡಿದ್ದಾರೆ. ಅಂದರೆ ಕೇವಲ 23 ಎಸೆತಗಳಲ್ಲಿ 55 ರನ್ ಚಚ್ಚಿದ್ದರು. ಇದಕ್ಕೂ ಮುನ್ನ ಈ ದಾಖಲೆ ಬೆನ್ ಸ್ಟೋಕ್ಸ್ ಮತ್ತು ಬೆನ್ ಡಕೆಟ್ ಹೆಸರಿನಲ್ಲಿತ್ತು. ಈ ಜೋಡಿಯು 44 ಎಸೆತಗಳಲ್ಲಿ ಅಜೇಯ 87 ರನ್ (11.86 ರನ್ ರೇಟ್) ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಹಿಟ್ಮ್ಯಾನ್-ಜೈಸ್ವಾಲ್ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
Published On - 10:53 am, Tue, 1 October 24