ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟವು ಮಳೆಯ ಕಾರಣ ವಿಳಂಬವಾಗಲಿದೆ. ಬೆಳಿಗ್ಗೆ 9.30 ರಿಂದ ಶುರುವಾಗಬೇಕಿದ್ದ ಪಂದ್ಯವು ಮಳೆಯಿಂದಾಗಿ ತಡವಾಗಿ ಆರಂಭವಾಗುವ ಸಾಧ್ಯತೆಯಿದೆ. ಏಕೆಂದರೆ ಕಾನ್ಪುರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹೀಗಾಗಿ ಮೈದಾನವನ್ನು ಕವರ್ಗಳಿಂದ ಮುಚ್ಚಲಾಗಿದ್ದು, ಸಂಪೂರ್ಣವಾಗಿ ಮಳೆ ನಿಂತ ಬಳಿಕವಷ್ಟೇ ಪಂದ್ಯ ಶುರುವಾಗಲಿದೆ.
ಇನ್ನು ಮೊದಲ ದಿನದಾಟ ಕೂಡ ಮಳೆಯ ಕಾರಣ ತಡವಾಗಿ ಶುರುವಾಗಿತ್ತು. ಈ ವೇಳೆ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು 35 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿತು. ಈ ವೇಳೆ ಕಾರ್ಮೋಡ ಆವರಿಸಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಇದೀಗ ದ್ವಿತೀಯ ದಿನದಾಟದ ಆರಂಭಕ್ಕೂ ವರುಣ ಅಡ್ಡಿಪಡಿಸಿದ್ದಾನೆ. ಹೀಗಾಗಿ ಮೊದಲ ಸೆಷನ್ ಶುರುವಾಗುವುದು ಮತ್ತಷ್ಟು ವಿಳಂಬವಾಗಲಿದೆ.
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಟೀಮ್ ಇಂಡಿಯಾ 280 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯವು ಮಳೆಯಿಂದಾಗಿ ರದ್ದಾದರೂ ಸರಣಿ ಭಾರತದ ಪಾಲಾಗಲಿದೆ. ಅತ್ತ ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕಿದ್ದರೆ ಬಾಂಗ್ಲಾದೇಶ್ ತಂಡವು ಈ ಪಂದ್ಯದಲ್ಲಿ ಗೆಲ್ಲಬೇಕು. ಇತ್ತ ಭಾರತ ತಂಡವು ಈ ಮ್ಯಾಚ್ನಲ್ಲಿ ಡ್ರಾ ಸಾಧಿಸಿ ಸರಣಿಯನ್ನು ವಶಪಡಿಸಿಕೊಳ್ಳಬಹುದು. ಹೀಗಾಗಿ ಕಾನ್ಪುರ್ ಟೆಸ್ಟ್ ಪಂದ್ಯವು ಮಳೆಯಿಂದಾಗಿ ರದ್ದಾದರೂ ಟೀಮ್ ಇಂಡಿಯಾಗೆ ಯಾವುದೇ ಚಿಂತೆಯಿಲ್ಲ.
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: IPL 2025 ರಲ್ಲಿ ಎಷ್ಟು ಪಂದ್ಯಗಳನ್ನಾಡಲಾಗುತ್ತದೆ? ಇಲ್ಲಿದೆ ಮಾಹಿತಿ
ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮಾನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟನ್ ದಾಸ್ (ವಿಕೆಟ್ ಕೀಪರ್), ಮೆಹದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ, ಹಸನ್ ಮಹಮೂದ್, ಖಾಲಿದ್ ಅಹ್ಮದ್.