ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರ ಒಂದೇ ಓವರ್ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 28 ರನ್ ಚಚ್ಚಿದ್ದರು. ಅಲ್ಲದೆ ಇದರ ಜೊತೆಗೆ ಒಂದು ವೈಡ್ ಎಸೆಯುವ ಮೂಲಕ ಆಸೀಸ್ ವೇಗಿ 29 ರನ್ ನೀಡಿದ್ದರು. ಇದೀಗ ಇಂಗ್ಲೆಂಡ್ನ ಸ್ಪೋಟಕ ದಾಂಡಿಗ ಲಿಯಾಮ್ ಲಿವಿಂಗ್ಸ್ಟೋನ್ ಕೂಡ ಸ್ಟಾರ್ಕ್ ಅವರ ಒಂದೇ ಓವರ್ನಲ್ಲಿ 4 ಸಿಕ್ಸ್ ಹಾಗೂ 1 ಫೋರ್ ಬಾರಿಸಿದ್ದಾರೆ.
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಲಿವಿಂಗ್ಸ್ಟೋನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 27 ಎಸೆತಗಳನ್ನು ಎದುರಿಸಿದ ಲಿವಿಂಗ್ಸ್ಟೋನ್ 7 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 62 ರನ್ ಚಚ್ಚಿದ್ದರು. ಈ 62 ರನ್ಗಳಲ್ಲಿ 28 ರನ್ ಮೂಡಿಬಂದಿರುವುದು ಸ್ಟಾರ್ಕ್ ಎಸೆದ ಓವರ್ನಲ್ಲಿ ಎಂಬುದು ವಿಶೇಷ.
ಮಿಚೆಲ್ ಸ್ಟಾರ್ಕ್ ಎಸೆದ ಈ ಪಂದ್ಯದ 39ನೇ ಓವರ್ನ ಮೊದಲ ಎಸೆತದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಭರ್ಜರಿ ಸಿಕ್ಸ್ ಬಾರಿಸಿದ್ದರು. 2ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಇದಾದ ಬಳಿಕ ಲಿವಿಂಗ್ಸ್ಟೋನ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು. ಈ ಮೂಲಕ ಮಿಚೆಲ್ ಸ್ಟಾರ್ಕ್ ಒಂದೇ ಓವರ್ನಲ್ಲಿ 28 ರನ್ ಬಿಟ್ಟು ಕೊಟ್ಟರು.
ಇದರೊಂದಿಗೆ ಮಿಚೆಲ್ ಸ್ಟಾರ್ಕ್ ಹೆಸರಿಗೆ ಅನಗತ್ಯ ದಾಖಲೆಯೊಂದು ಸೇರ್ಪಡೆಯಾಯಿತು. ಅಂದರೆ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಹಣೆಪಟ್ಟಿ ಇದೀಗ ಸ್ಟಾರ್ಕ್ ಪಾಲಾಗಿದೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಆ್ಯಡಂ ಝಂಪಾ ಹಾಗೂ ಕ್ಯಾಮರೋನ್ ಗ್ರೀನ್ ಹೆಸರಿನಲ್ಲಿತ್ತು.
2023 ರಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಒಂದೇ ಓವರ್ನಲ್ಲಿ 26 ರನ್ ನೀಡಿದ್ದರು. ಇದಾದ ಬಳಿಕ 2023 ರಲ್ಲೇ ಕ್ಯಾಮರೋನ್ ಗೀನ್ ಭಾರತದ ವಿರುದ್ಧ ಪಂದ್ಯದಲ್ಲಿ 26 ರನ್ ಬಿಟ್ಟು ಕೊಟ್ಟು ಈ ಅನಗತ್ಯ ದಾಖಲೆಯನ್ನು ಸರಿಗಟ್ಟಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧ 28 ರನ್ ಚಚ್ಚಿಸಿಕೊಳ್ಳುವ ಮೂಲಕ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ಕಳಪೆ ದಾಖಲೆ ಬರೆದಿದ್ದಾರೆ. ಈ ಮೂಲಕ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ 28 ಅಥವಾ ಅದಕ್ಕಿಂತ ಹೆಚ್ಚು ರನ್ ನೀಡಿದ ಆಸ್ಟ್ರೇಲಿಯಾದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಮಳೆಯ ಕಾರಣ 39 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 312 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 24.4 ಓವರ್ಗಳಲ್ಲಿ 126 ರನ್ಗಳಿಸಿ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ 4 ವಿಕೆಟ್ ಕಬಳಿಸಿದರೆ, ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರು. ಇನ್ನು ಬ್ರೈಡನ್ ಕಾರ್ಸ್ 3 ವಿಕೆಟ್ ಕಬಳಿಸಿ ಮಿಂಚಿದರು.
Published On - 11:05 am, Sat, 28 September 24