
ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಏಕದಿನ ಪಂದ್ಯಕ್ಕಾಗಿ ವೇದಿಕೆ ಸಜ್ಜಾಗಿದೆ. ಭಾನುವಾರ (ಫೆ.9) ನಡೆಯಲಿರುವ ಈ ಪಂದ್ಯಕ್ಕೆ ಕಟಕ್‌ನ ಬಾರಾಬತಿ ಕ್ರೀಡಾಂಗಣದ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದ ವೇಳೆ ಮೊಣಕಾಲಿನ ನೋವಿನ ಕಾರಣ ಕೊಹ್ಲಿ ಕಣಕ್ಕಿಳಿದಿರಲಿಲ್ಲ.
ಇದಾಗ್ಯೂ ವಿರಾಟ್ ಕೊಹ್ಲಿಯ ಮೊಣಕಾಲಿಗೆ ಗಂಭೀರ ಗಾಯವಾಗಿಲ್ಲ. ಅಲ್ಲದೆ ದ್ವಿತೀಯ ಪಂದ್ಯದ ವೇಳೆಗೆ ಅವರು ಫಿಟ್ನೆಸ್ ಸಾಧಿಸಲಿದ್ದಾರೆ ಎಂದು ಶುಭ್ಮನ್ ಗಿಲ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಕಟಕ್‌ನಲ್ಲಿ ಕಿಂಗ್ ಕೊಹ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.
ಆದರೆ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಕೊಹ್ಲಿ ಕಣಕ್ಕಿಳಿದರೂ ಭರ್ಜರಿ ಪ್ರದರ್ಶನ ನೀಡುವ ಸಾಧ್ಯತೆಯಿಲ್ಲ. ಏಕೆಂದರೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಕಡೆಯಿಂದ ನಿರೀಕ್ಷಿತ ಆಟ ಈವರೆಗೆ ಮೂಡಿಬಂದಿಲ್ಲ.
ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ ವಿರಾಟ್ ಕೊಹ್ಲಿ. ಈವರೆಗೆ ಆಡಿದ 295 ಏಕದಿನ ಪಂದ್ಯಗಳ 283 ಇನ್ನಿಂಗ್ಸ್‌ಗಳಲ್ಲಿ ಅವರು 13,906 ರನ್ ಗಳಿಸಿದ್ದಾರೆ. ಅಂದರೆ ಕಿಂಗ್ ಕೊಹ್ಲಿ 58 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಇದರ ನಡುವೆ 50 ಶತಕ ಹಾಗೂ 72 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಆದರೆ ಈ 50 ಸೆಂಚುರಿಗಳಲ್ಲಿ ಕಟಕ್‌ನಲ್ಲಿ ಒಂದೇ ಒಂದು ಶತಕ ಮೂಡಿಬಂದಿಲ್ಲ ಎಂಬುದೇ ಅಚ್ಚರಿ.
ವಿರಾಟ್ ಕೊಹ್ಲಿ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಈ ನಾಲ್ಕು ಮ್ಯಾಚ್ಗಳಲ್ಲಿ ಕಲೆಹಾಕಿದ ಒಟ್ಟು ಸ್ಕೋರ್ 118 ರನ್ಗಳು. ಅಂದರೆ ಕೇವಲ 29.5 ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದಾರೆ.
ಈ ಮೈದಾನದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅವರು 10 ಏಕದಿನ ಪಂದ್ಯಗಳಲ್ಲಿ 84.81 ಸರಾಸರಿಯಲ್ಲಿ ಒಟ್ಟು 469 ರನ್ ಗಳಿಸಿದ್ದಾರೆ. ಆದರೆ ಬಾರಾಬತಿ ಕ್ರೀಡಾಂಗಣದಲ್ಲಿ ಕೊಹ್ಲಿ ಬ್ಯಾಟ್ ಸದ್ದು ಮಾಡಿದ್ದೇ ವಿರಳ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಕಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸುವಂತಿಲ್ಲ.
ಇದನ್ನೂ ಓದಿ: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಬೆಥೆಲ್
ಇದಾಗ್ಯೂ ಈ ಮೈದಾನದಲ್ಲಿ ಟೀಮ್ ಇಂಡಿಯಾದ ಗೆಲುವಿನ ದಾಖಲೆ ಉತ್ತಮವಾಗಿದೆ. ಭಾರತ ತಂಡವು ಬಾರಾಬಾತಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ 17 ಏಕದಿನ ಪಂದ್ಯಗಳನ್ನು ಆಡಿದೆ. ಈ ವೇಳೆ 13 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ನಾಲ್ಕು ಮ್ಯಾಚ್ಗಳಲ್ಲಿ ಮಾತ್ರ ಸೋಲನುಭವಿಸಿದೆ.