IND vs ENG: ಸರ್ಫರಾಜ್ ಮಾತು ಕೇಳದೆ ಸುವರ್ಣಾವಕಾಶ ಕೈಚೆಲ್ಲಿದ ರೋಹಿತ್; ನೀವೇ ನೋಡಿ

IND vs ENG: ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್​ನ27ನೇ ಓವರ್‌ ಬೌಲ್ ಮಾಡುವ ಜವಬ್ದಾರಿ ಜಸ್ಪ್ರೀತ್ ಬುಮ್ರಾಗೆ ನೀಡಲಾಗಿತ್ತು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಕ್ರೌಲಿ ಮೊದಲ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಮೊದಲು ಬ್ಯಾಟಿಗೆ ತಾಗಿ ಆ ನಂತರ ಪ್ಯಾಡ್​ಗೆ ಬಡಿದು, ಶಾರ್ಟ್ ಲೆಗ್ ಹತ್ತಿರ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್‌ ಕೈಸೇರಿತು. ಕೂಡಲೇ ಸರ್ಫರಾಜ್ ಔಟ್​ಗಾಗಿ ಮನವಿ ಮಾಡಿದರು.

IND vs ENG: ಸರ್ಫರಾಜ್ ಮಾತು ಕೇಳದೆ ಸುವರ್ಣಾವಕಾಶ ಕೈಚೆಲ್ಲಿದ ರೋಹಿತ್; ನೀವೇ ನೋಡಿ
ಟೀಂ ಇಂಡಿಯಾ

Updated on: Mar 07, 2024 | 4:10 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಟೆಸ್ಟ್ ಸರಣಿಯ ಐದನೇ ಪಂದ್ಯ ಧರ್ಮಶಾಲಾದಲ್ಲಿ (Dharamshala) ನಡೆಯುತ್ತಿದೆ. ಈ ಪಂದ್ಯದಲ್ಲಿ ಈಗಾಗಲೇ ಮೊದಲ ಇನ್ನಿಂಗ್ಸ್ ಮುಗಿಸಿರುವ ಇಂಗ್ಲೆಂಡ್ ತಂಡವು ಕುಲ್ದೀಪ್ ಯಾದವ್ ಹಾಗೂ ಅಶ್ವಿನ್ ದಾಳಿಗೆ ತತ್ತರಿಸಿ ಕೇವಲ 218 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇಂಗ್ಲೆಂಡ್ ಪರ ಆರಂಭಿಕ ಝಾಕ್ ಕ್ರೌಲಿ (Zak Crawley) ಬಾರಿಸಿದ 79 ರನ್​ಗಳ ತಂಡದ ಪರ ದಾಖಲಾದ ಅತ್ಯಧಿಕ ಮೊತ್ತವಾಯಿತು. ವಾಸ್ತವವಾಗಿ ಸರ್ಫರಾಜ್ (Sarfaraz Khan) ಮನವಿಯನ್ನು ಪುರಸ್ಕರಿಸಿ ನಾಯಕ ರೋಹಿತ್ ಶರ್ಮಾ (Rohit Sharma) ಡಿಆರ್​ಎಸ್ ತೆಗೆದುಕೊಂಡಿದ್ದರೆ, ಕ್ರೌಲಿ ಇಷ್ಟು ರನ್ ಕಲೆಹಾಕುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಯುವ ಆಟಗಾರನ ಮನವಿಗೆ ಕಿವಿಗೊಡದ ರೋಹಿತ್ ದೊಡ್ಡ ತಪ್ಪನ್ನು ಮಾಡಿದರು.

ಏನಿದು ಇಡೀ ಪ್ರಸಂಗ?

ವಾಸ್ತವವಾಗಿ ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್​ನ27ನೇ ಓವರ್‌ ಬೌಲ್ ಮಾಡುವ ಜವಬ್ದಾರಿ ಜಸ್ಪ್ರೀತ್ ಬುಮ್ರಾಗೆ ನೀಡಲಾಗಿತ್ತು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಕ್ರೌಲಿ ಮೊದಲ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಮೊದಲು ಬ್ಯಾಟಿಗೆ ತಾಗಿ ಆ ನಂತರ ಪ್ಯಾಡ್​ಗೆ ಬಡಿದು, ಶಾರ್ಟ್ ಲೆಗ್ ಹತ್ತಿರ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್‌ ಕೈಸೇರಿತು. ಕೂಡಲೇ ಸರ್ಫರಾಜ್ ಔಟ್​ಗಾಗಿ ಮನವಿ ಮಾಡಿದರು. ಅಂಪೈರ್ ಔಟ್ ನೀಡಲಿಲ್ಲ. ನಂತರ ಸರ್ಫರಾಜ್ ರೋಹಿತ್ ಬಳಿ ಡಿಆರ್​ಎಸ್ ತೆಗೆದುಕೊಳ್ಳುವಂತೆ ಸಾಕಷ್ಟು ಮನವಿ ಮಾಡಿದರು. ಅಲ್ಲದೆ ಚೆಂಡು ಬ್ಯಾಟ್‌ಗೆ ಬಡಿದಿದೆ ಎಂಬುದನ್ನು ರೋಹಿತ್​ಗೆ ಅರ್ಥ ಮಾಡಿಸಲು ಪ್ರಯತ್ನಿಸಿದರು. ಆದರೆ ಕ್ಯಾಪ್ಟನ್ ರೋಹಿತ್, ಸರ್ಫರಾಜ್ ಮಾತನ್ನು ಕೇಳಲಿಲ್ಲ.

IND vs ENG: ಕಿಂಗ್ ಕೊಹ್ಲಿಯ ಅತಿ ದೊಡ್ಡ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್..!

ಆ ನಂತರ ಅಲ್ಟ್ರಾ ಎಡ್ಜ್ ತೋರಿಸಿದಾಗ ಕ್ರೌಲಿ ಬ್ಯಾಟ್‌ಗೆ ಚೆಂಡು ತಾಗಿದೆ ಎಂಬುದು ಸ್ಪಷ್ಟವಾಯಿತು. ಇದಾದ ನಂತರ ರೋಹಿತ್ ಶರ್ಮಾ ನಿರಾಸೆ ವ್ಯಕ್ತಪಡಿಸಿದ್ದು ಕಂಡುಬಂತು. ರೋಹಿತ್ ಇಲ್ಲಿ ಡಿಆರ್​ಎಸ್ ತೆಗೆದುಕೊಂಡಿದ್ದರೆ ಅದು ಭಾರತದ ಪರವಾಗಿ ಹೋಗುತ್ತಿತ್ತು. ಇಲ್ಲಿಂದ ಭಾರತಕ್ಕೆ ಮೂರನೇ ಯಶಸ್ಸು ಸಿಗಬಹುದಿತ್ತು. ಆದರೆ ರೋಹಿತ್ ಡಿಆರ್‌ಎಸ್ ತೆಗೆದುಕೊಳ್ಳದೆ ದೊಡ್ಡ ತಪ್ಪು ಮಾಡಿದರು. ಇತ್ತ ರೋಹಿತ್ ಮನವೊಲಿಸಲು ಪ್ರಯತ್ನಿಸಿ ವಿಫಲರಾಗಿದ್ದ ಸರ್ಫರಾಜ್ ಖಾನ್ ಕೂಡ ನಿರಾಶೆಗೊಂಡರು.

ಮಿಂಚಿದ ಸ್ಪಿನ್ನರ್ಸ್​

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್​ಗೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಿಬ್ಬರು ಮೊದಲ ವಿಕೆಟ್​ಗೆ 64 ರನ್​ಗಳ ಜೊತೆಯಾಟ ಹಂಚಿಕೊಂಡರು. ಆ ನಂತರ ತಂಡದ ಮೊತ್ತ 100 ರನ್​ಗಳಿರುವಾಗ ಎರಡನೇ ವಿಕೆಟ್ ಪತನವಾಯಿತು. 175 ರನ್​ಗಳಿಗೆ 4ನೇ ವಿಕೆಟ್ ಪತನವಾದ ಬಳಿಕ ಇಂಗ್ಲೆಂಡ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಆಂಗ್ಲ ತಂಡ ಕೇವಲ 43 ರನ್​ಗಳ ಅಂತರದಲ್ಲಿ ಉಳಿದ 6 ವಿಕೆಟ್​ಳನ್ನು ಕಳೆದುಕೊಂಡಿತು. ಭಾರತದ ಪರ ಮಿಂಚಿದ ಸ್ಪಿನ್ನರ್​ಗಳಾದ ಕುಲ್ದೀಪ್ ಯಾದವ್ ಪ್ರಮುಖ 5 ವಿಕೆಟ್ ಪಡೆದರೆ, 100 ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆರ್​ ಅಶ್ವಿನ್ 4 ವಿಕೆಟ್ ಉರುಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ