IND vs ENG: ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದ ಕನ್ನಡಿಗ ದೇವದತ್ ಪಡಿಕ್ಕಲ್..!

Devdutt Padikkal: ರಜತ್ ಪಾಟಿದರ್ ಬದಲಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿರುವ ಕನ್ನಡಿಗ ದೇವದತ್ ಪಡಿಕಲ್ ಧರ್ಮಶಾಲಾ ಟೆಸ್ಟ್​ನ ಎರಡನೇ ದಿನದಾಟದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 83 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಡಿಕ್ಕಲ್ 8 ಅದ್ಭುತ ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಸಹ ಬಾರಿಸಿದ್ದಾರೆ.

IND vs ENG: ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದ ಕನ್ನಡಿಗ ದೇವದತ್ ಪಡಿಕ್ಕಲ್..!
ದೇವದತ್ ಪಡಿಕ್ಕಲ್

Updated on: Mar 08, 2024 | 3:30 PM

ರಜತ್ ಪಾಟಿದರ್ ಬದಲಿಗೆ ಟೀಂ ಇಂಡಿಯಾದಲ್ಲಿ (Team India) ಆಡುವ ಅವಕಾಶ ಗಿಟ್ಟಿಸಿಕೊಂಡಿರುವ ಕನ್ನಡಿಗ ದೇವದತ್ ಪಡಿಕಲ್ (Devdutt Padikkal) ಧರ್ಮಶಾಲಾ ಟೆಸ್ಟ್​ನ ಎರಡನೇ ದಿನದಾಟದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 83 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಡಿಕ್ಕಲ್ 8 ಅದ್ಭುತ ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಸಹ ಬಾರಿಸಿದ್ದಾರೆ. ಅಲ್ಲದೆ ಸರ್ಫರಾಜ್ ಖಾನ್ (Sarfaraz Khan) ಅವರೊಂದಿಗೆ ಪಡಿಕ್ಕಲ್ ಶತಕದ ಜೊತೆಯಾಟವನ್ನೂ ನಡೆಸಿ ತಂಡದ ಮುನ್ನಡೆಯನ್ನು ದ್ವಿಶತಕದತ್ತ ಕೊಂಡೊಯ್ದರು. ಶತಕ ಸಿಡಿಸಿದ್ದ ರೋಹಿತ್ ಮತ್ತು ಗಿಲ್ ಅವರ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ ಆಸರೆಯಾದ ಪಡಿಕ್ಕಲ್ ಮತ್ತು ಸರ್ಫರಾಜ್ ಖಾನ್ ತಲಾ ಅರ್ಧಶತಕ ಸಿಡಿಸಿ ತಂಡವನ್ನು ಮತ್ತೊಮ್ಮೆ ಟ್ರ್ಯಾಕ್‌ಗೆ ತಂದರು. ಅಂತಿಮವಾಗಿ ಎರಡನೇ ದಿನದಾಟದ ಮೂರನೇ ಸೆಷನ್​ನಲ್ಲಿ ಶೊಯೇಬ್ ಬಶೀರ್​ಗೆ ಬಲಿಯಾದ ಪಡಿಕ್ಕಲ್ ತಮ್ಮ ಇನ್ನಿಂಗ್ಸ್​ನಲ್ಲಿ 103 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 65 ರನ್ ಕಲೆಹಾಕಿದರು.

ರಜತ್ ಔಟ್, ಪಡಿಕ್ಕಲ್ ಇನ್

ವಾಸ್ತವವಾಗಿ ಕನ್ನಡಿಗ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದ ನಂತರ ರಜತ್ ಪಾಟಿದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ರಜತ್‌ಗೆ ಸತತ 3 ಪಂದ್ಯಗಳಲ್ಲಿ ಆಡುವ ಅವಕಾಶವನ್ನೂ ನೀಡಲಾಯಿತು. ಆದರೆ 3 ಪಂದ್ಯಗಳ 5 ಇನ್ನಿಂಗ್ಸ್‌ಗಳಲ್ಲಿ ರಜತ್ ಒಂದು ಅರ್ಧಶತಕವನ್ನೂ ಗಳಿಸಲಿಲ್ಲ. ಇದರಿಂದಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಪಾಟಿದಾರ್ ಅವರನ್ನು ಕೈಬಿಟ್ಟು ದೇವದತ್ ಪಡಿಕ್ಕಲ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಲಾಯಿತು. ಅವಕಾಶ ಸಿಕ್ಕ ತಕ್ಷಣ ಅರ್ಧಶತಕ ಬಾರಿಸುವ ಮೂಲಕ ಪಡಿಕ್ಕಲ್ ಕೋಟ್ಯಂತರ ಅಭಿಮಾನಿಗಳಿಗೆ ಹಾಗೂ ನಾಯಕನಿಗೆ ನಾನೇ ಈ ಸ್ಥಾನದ ನಿಜವಾದ ಒಡೆಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ರಣಜಿಯಲ್ಲಿ ಪಡಿಕ್ಕಲ್ ದಾಖಲೆ

ದೇವದತ್ ಪಡಿಕ್ಕಲ್ ರಣಜಿ ಟ್ರೋಫಿಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ರಣಜಿಯಲ್ಲಿ ತಮ್ಮ ಬ್ಯಾಟ್‌ನಿಂದ ಸಾಕಷ್ಟು ರನ್ ಗಳಿಸಿರುವ ಪಡಿಕ್ಕಲ್ 2023-24ರ ರಣಜಿ ಟ್ರೋಫಿಯಲ್ಲಿ ಆಡಿದ ಕೊನೆಯ 4 ಪಂದ್ಯಗಳಲ್ಲಿ 3 ಶತಕಗಳೊಂದಿಗೆ 556 ರನ್ ಗಳಿಸಿದ್ದಾರೆ. ಈ ಅದ್ಭುತ ಪ್ರದರ್ಶನದ ನಂತರ ಅವರಿಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿದ್ದು, ಇಲ್ಲಿಯೂ ಅವರು ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿ ಅರ್ಧಶತಕ ಸಿಡಿಸಿದ್ದಾರೆ.

IND vs ENG: ಭರ್ಜರಿ ಶತಕ ಸಿಡಿಸಿ ಬಾಬರ್, ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ..!

ಭಾರತ ಸತತ ನಾಲ್ಕನೇ ಗೆಲುವಿನ ಸಮೀಪದಲ್ಲಿದೆ

ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿಯ 5ನೇ ಮತ್ತು ಕೊನೆಯ ಪಂದ್ಯ ನಡೆಯುತ್ತಿದೆ. ಭಾರತ ಈಗಾಗಲೇ ಈ ಸರಣಿಯನ್ನು ಗೆದ್ದುಕೊಂಡಿದೆ. ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿತು, ನಂತರ ಟೀಂ ಇಂಡಿಯಾ ಅದ್ಭುತ ಪುನರಾಗಮನವನ್ನು ಮಾಡಿ, ಸತತ 3 ಪಂದ್ಯಗಳನ್ನು ಗೆದ್ದಿತು. ಇದೀಗ ಭಾರತ ತಂಡ ಮತ್ತೊಂದು ಗೆಲುವಿನ ಸನಿಹದಲ್ಲಿದೆ. ಧರ್ಮಶಾಲಾ ಟೆಸ್ಟ್‌ನಲ್ಲೂ ಭಾರತದ ಗೆಲುವು ಖಚಿತವಾದಂತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Fri, 8 March 24