IND vs ENG: ಟೀಮ್ ಇಂಡಿಯಾ…ಇದುವೇ ಬಾಝ್​ಬಾಲ್ ಎಫೆಕ್ಟ್..!

| Updated By: ಮದನ್​ ಕುಮಾರ್​

Updated on: Jan 29, 2024 | 3:35 PM

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಶುಕ್ರವಾರದಿಂದ ಶುರುವಾಗಲಿದೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.

IND vs ENG: ಟೀಮ್ ಇಂಡಿಯಾ...ಇದುವೇ ಬಾಝ್​ಬಾಲ್ ಎಫೆಕ್ಟ್..!
England
Follow us on

190 ರನ್​ಗಳ ಮೊದಲ ಇನಿಂಗ್ಸ್​ ಮುನ್ನಡೆ…163 ರನ್​ಗಳಿಗೆ 5 ವಿಕೆಟ್​….ಸ್ಕೋರ್​ ಬೋರ್ಡ್​ನಲ್ಲಿ ಈ ಎರಡು ಅಂಕಿಗಳನ್ನು ನೋಡಿದವರೆಲ್ಲರೂ ಈ ಪಂದ್ಯದಲ್ಲಿ ಭಾರತ ಗೆಲ್ಲುವುದು ಖಚಿತ ಎಂದು ಷರಾ ಬರೆದಿದ್ದರು. ಏಕೆಂದರೆ ಈ ಹಂತದಲ್ಲಿ ಇಡೀ ಪಂದ್ಯ ಟೀಮ್ ಇಂಡಿಯಾ (Team India) ಹಿಡಿತದಲ್ಲಿತ್ತು. ಹೀಗಾಗಿಯೇ ಇಂಗ್ಲೆಂಡ್ ತಂಡದ ಸೋಲನ್ನು ನಿರೀಕ್ಷಿಸಲಾಗಿತ್ತು.

ಆದರೆ ಸಂಕಷ್ಟಕ್ಕೆ ಸಿಲುಕಿದರೂ ಇಂಗ್ಲೆಂಡ್ ತನ್ನ ರಣತಂತ್ರವನ್ನು ಮಾತ್ರ ಬದಲಿಸಿರಲಿಲ್ಲ. ಆ ರಣತಂತ್ರದಿಂದಲೇ ಇದೀಗ ಸೋಲುವ ಪಂದ್ಯದಲ್ಲೂ ಇಂಗ್ಲೆಂಡ್ ಗೆದ್ದಿದೆ. ಅದರಲ್ಲೂ ತವರಿನಲ್ಲಿ 190 ರನ್​ಗಳ ಮುನ್ನಡೆ ಸಾಧಿಸಿ ಟೀಮ್ ಇಂಡಿಯಾ ಸೋತಿರುವುದು ಇದೇ ಮೊದಲ ಬಾರಿಗೆ…ಅಲ್ಲಿಗೆ ಟೀಮ್ ಇಂಡಿಯಾ ಪಾಲಿಗೂ ಬಾಝ್​ಬಾಲ್ ಎಫೆಕ್ಟ್​ ಅರ್ಥವಾದಂತಾಗಿದೆ.

ಏಕೆಂದರೆ ಮೊದಲ ಇನಿಂಗ್ಸ್​ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ಗೆ ಮುಂದಾಗಿದ್ದ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ ಬೌಲರ್​ಗಳು 246 ರನ್​ಗಳಿಗೆ ಆಲೌಟ್ ಮಾಡಿದ್ದರು. ಇದರ ಬೆನ್ನಲ್ಲೇ ಆಂಗ್ಲರ ಬಾಝ್​ಬಾಲ್ ತಂತ್ರಗಾರಿಕೆ ಭಾರತದಲ್ಲಿ ನಡೆಯಲ್ಲ ಎಂದು ಮೂದಲಿಸಲಾಗಿತ್ತು. ಅಷ್ಟೇ ಅಲ್ಲದೆ, ಭಾರತ ತಂಡವು ಪ್ರಥಮ ಇನಿಂಗ್ಸ್​ನಲ್ಲಿ ಬರೋಬ್ಬರಿ 436 ರನ್​ ಕಲೆಹಾಕಿತು. ಈ ಮೂಲಕ 190 ರನ್​ಗಳ ಮುನ್ನಡೆ ಸಾಧಿಸಿ ಅರ್ಧ ಪಂದ್ಯ ಗೆದ್ದಾಗಿತ್ತು.

ಆದರೆ ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಎರಡು ಆಯ್ಕೆಗಳಿದ್ದವು. ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು. ಎರಡನೇಯದು ಸೋಲೊಪ್ಪಿಕೊಳ್ಳುವುದು. ಇಂತಹ ಸಂದಿಗ್ಥ ಸಂದರ್ಭದಲ್ಲೂ ಇಂಗ್ಲೆಂಡ್ ತನ್ನ ರಣತಂತ್ರ ಬದಲಿಸಲಿಲ್ಲ.

ಮತ್ತದೇ ಬಾಝ್​ಬಾಲ್ ಆಟ…ದ್ವಿತೀಯ ಇನಿಂಗ್ಸ್​ನಲ್ಲೂ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿತು. ಆರಂಭಿಕರಾದ ಝಾಕ್ ಕ್ರಾಲಿ, ಬೆನ್ ಡಕೆಟ್ ಹಾಗೂ ಒಲೀ ಪೋಪ್ ಜೊತೆಗೂಡಿ ಕೇವಲ 18 ಓವರ್​ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದ್ದರು.

ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ 113 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡವು 50 ರನ್​ ಕಲೆಹಾಕುವಷ್ಟರಲ್ಲಿ ಮತ್ತೆ 3 ವಿಕೆಟ್ ಕಳೆದುಕೊಂಡಿತು.

163 ರನ್​ಗಳಿಗೆ 5 ವಿಕೆಟ್…ಈ ಸ್ಕೋರ್​ ಬೋರ್ಡ್ ನೋಡಿದವರೆಲ್ಲರೂ ಇಂಗ್ಲೆಂಡ್​ಗೆ ಸೋಲು ಖಚಿತ ಎಂದಿದ್ದರು. ಆದರೆ ಈ ಹಂತದಲ್ಲೂ ಆಂಗ್ಲರು ಕುಗ್ಗಲಿಲ್ಲ. ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನೇ ಮುಂದುವರೆಸಿತು.

ಬಿರುಸಿನ ಬ್ಯಾಟಿಂಗ್​ನೊಂದಿಗೆ ಒಲೀ ಪೋಪ್ 154 ಎಸೆತಗಳಲ್ಲಿ ಶತಕ ಪೂರೈಸಿದರು. ಇಂಗ್ಲೆಂಡ್ ತಂಡದ ಉಪನಾಯಕನಿಗೆ ಉತ್ತಮ ಸಾಥ್ ನೀಡಿದ ಕೆಳ ಕ್ರಮಾಂಕದ ಬ್ಯಾಟರ್​ಗಳು ಕೂಡ ಟೀಮ್ ಇಂಡಿಯಾ ಬೌಲರ್​ಗಳ ವಿರುದ್ಧ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ಪರಿಣಾಮ ಸ್ಪಿನ್ನರ್ ರೆಹಾನ್ ಅಹ್ಮದ್ ಬ್ಯಾಟ್​ನಿಂದ 53 ಎಸೆತಗಳಲ್ಲಿ 28 ರನ್ ಮೂಡಿಬಂತು. ಮತ್ತೋರ್ವ ಸ್ಪಿನ್ನರ್ ಟಾಮ್ ಹಾರ್ಟ್ಲೆ 52 ಎಸೆತಗಳಲ್ಲಿ 34 ರನ್ ಬಾರಿಸಿದರು. ಇನ್ನು 278 ಎಸೆತಗಳನ್ನು ಎದುರಿಸಿದ ಒಲೀ ಪೋಪ್ 21 ಫೋರ್​ಗಳೊಂದಿಗೆ 196 ರನ್ ಸಿಡಿಸಿದರು. ಈ ಮೂಲಕ ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ 420 ರನ್ ಕಲೆಹಾಕಿತು. ಅಂದರೆ ಸೋಲಿನ ಸುಳಿಯಲ್ಲಿದ್ದ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಪ್ರತಿ ಓವರ್​ಗೆ 4.11 ಸರಾಸರಿಯಲ್ಲಿ ರನ್ ಪೇರಿಸಿದ್ದರು.

ಇದು ಕೂಡ ದಾಖಲೆ:

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತದಲ್ಲಿ ಯಾವುದೇ ತಂಡ 4 ರನ್​ಗಳ ಸರಾಸರಿಯಲ್ಲಿ 400 ರನ್ ಕಲೆಹಾಕಿಲ್ಲ. ಈ ಹಿಂದೆ 1958 ರಲ್ಲಿ ವೆಸ್ಟ್ ಇಂಡೀಸ್ 3.78 ಸರಾಸರಿಯಲ್ಲಿ ರನ್​ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಬಾಝ್​ಬಾಲ್ ಎಫೆಕ್ಟ್​ಗೆ 66 ವರ್ಷಗಳ ಹಳೆಯ ದಾಖಲೆ ಇದೀಗ ಛಿದ್ರವಾಗಿದೆ.

ಅಲ್ಲದೆ ಕೇವಲ ಒಂದುವರೆ ದಿನದಾಟದಲ್ಲಿ 420 ರನ್ ಪೇರಿಸುವ ಮೂಲಕ ಭಾರತ ತಂಡದ ತೆಕ್ಕೆಯಲ್ಲಿದ್ದ ಪಂದ್ಯವನ್ನು ಇಂಗ್ಲೆಂಡ್ ತನ್ನತ್ತ ವಾಲುವಂತೆ ಮಾಡಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ 231 ರನ್​ಗಳ ಗುರಿ ನೀಡುವ ಮೂಲಕ ಪೈಪೋಟಿಗೆ ಇಳಿಯಿತು.

ಮೊದಲೇ ಬಾಝ್​ಬಾಲ್ ಪರಾಕ್ರಮದಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಆಟಗಾರರು ಯಾವುದೇ ಹಂತದಲ್ಲೂ ಇಂಗ್ಲೆಂಡ್​ಗೆ ಸರಿಸಾಟಿಯಾಗಿ ನಿಲ್ಲಲಿಲ್ಲ. ಪರಿಣಾಮ ಐದನೇ ದಿನದಾಟಕ್ಕೆ ಸಾಗಬೇಕಿದ್ದ ಪಂದ್ಯವನ್ನು ಭಾರತ ತಂಡವು ನಾಲ್ಕನೇ ದಿನದಾಟದಲ್ಲೇ ಕೈಚೆಲ್ಲಿಕೊಂಡಿತು.

ಇತ್ತ ಗೆದ್ದೇ ಗೆಲ್ಲುವೆವು ಎಂದುಕೊಂಡಿದ್ದ ಟೀಮ್ ಇಂಡಿಯಾಗೆ ಬಾಝ್​ಬಾಲ್ ಎಫೆಕ್ಟ್​ ತೋರಿಸಿ ಇಂಗ್ಲೆಂಡ್ ತಂಡ 28 ರನ್​ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಸೋಲುವ ಪಂದ್ಯವನ್ನು ಗೆದ್ದು ಇಂಗ್ಲೆಂಡ್ ಮತ್ತೊಮ್ಮೆ ವಿಶ್ವ ಕ್ರಿಕೆಟ್​ಗೆ ಬಾಝ್​ಬಾಲ್ ಎಫೆಕ್ಟ್ ಹೇಗಿರುತ್ತೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಏನಿದು ಬಾಝ್​ಬಾಲ್?

ನ್ಯೂಝಿಲೆಂಡ್​ನ ಮಾಜಿ ಆಟಗಾರ, ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಂ ಅವರ ಅಡ್ಡ ಹೆಸರು ಬಾಝ್. ಕ್ರಿಕೆಟ್​ ಅಂಗಳದಲ್ಲಿ ಬಾಝ್​ ಎಂದೇ ಗುರುತಿಸಿಕೊಂಡಿರುವ ಮೆಕಲಂ ಅವರ ಆಕ್ರಮಣಕಾರಿ ಆಟದ ವಿಧಾನವನ್ನು ಇದೀಗ ಬಾಝ್​ಬಾಲ್ (BazBall) ಕ್ರಿಕೆಟ್ ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ: IND vs ENG: ರವೀಂದ್ರ ಜಡೇಜಾ ಬದಲಿ ಆಟಗಾರ ಯಾರು?

ವಿಶೇಷ ಎಂದರೆ ಬಾಝ್​ಬಾಲ್ ಆಟ ಶುರು ಮಾಡಿದ ಬಳಿಕ ಇಂಗ್ಲೆಂಡ್ 20 ಟೆಸ್ಟ್ ಪಂದ್ಯಗಳನ್ನಾಡಿದೆ. ಇದರಲ್ಲಿ 14 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು  5 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. ಹಾಗೆಯೇ ಕೇವಲ 1 ಮ್ಯಾಚ್ ಅನ್ನು ಡ್ರಾ ಮಾಡಿಕೊಂಡಿದೆ. ಅಂದರೆ ಬಾಝ್​ಬಾಲ್ ಕ್ರಿಕೆಟ್​ನೊಂದಿಗೆ ಇಂಗ್ಲೆಂಡ್ ಡ್ರಾ ಮಾಡಿಕೊಳ್ಳುವುದಕ್ಕಿಂತ ಪಂದ್ಯವನ್ನು ಗೆಲ್ಲಲು ಹೋರಾಡುತ್ತಿರುವುದು ಸ್ಪಷ್ಟ.

 

 

Published On - 3:28 pm, Mon, 29 January 24