ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಇದೀಗ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಹೀಗೆ ವಿವಾದ ಹುಟ್ಟಿಕೊಳ್ಳಲು ಮುಖ್ಯ ಕಾರಣ ಕನ್ಕ್ಯುಶನ್ ಸಬ್ ಆಯ್ಕೆ. ಈ ಪಂದ್ಯದ ಮೊದಲ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಶಿವಂ ದುಬೆ ಅವರ ಹೆಲ್ಮೆಟ್ಗೆ ಚೆಂಡು ಬಡಿದಿತ್ತು. ಇದಾಗ್ಯೂ ದುಬೆ 20ನೇ ಓವರ್ನ ಕೊನೆಯ ಎಸೆತವನ್ನು ಎದುರಿಸಿದ್ದರು. ಆದರೆ ಹೆಲ್ಮೆಟ್ಗೆ ಚೆಂಡು ಬಡಿದ ಕಾರಣ ಅವರು ಫೀಲ್ಡಿಂಗ್ಗೆ ಇಳಿದಿರಲಿಲ್ಲ.
ಅತ್ತ ದುಬೆ ಗಾಯಕ್ಕೆ ತುತ್ತಾಗಿದ್ದರಿಂದ ಟೀಮ್ ಇಂಡಿಯಾ ಕನ್ಕಶನ್ ಸಬ್ ಆಯ್ಕೆಯ ಮೊರೆ ಹೋಗಲಾಯಿತು. ಇಲ್ಲಿ ಕನ್ಕ್ಯುಶನ್ ಸಬ್ ಆಯ್ಕೆ ಎಂದರೆ ಗಾಯಗೊಂಡ ಅಥವಾ ಇತರೆ ಕಾರಣಗಳಿಂದ ಹೊರಗುಳಿದಿರುವ ಆಟಗಾರನ ಬದಲಿ ಪ್ಲೇಯರ್ನನ್ನು ಕಣಕ್ಕಿಳಿಸುವುದು.
2019 ರಲ್ಲಿ ಐಸಿಸಿ ಪರಿಚಯಿಸಿದ ಈ ನಿಯಮದ ಪ್ರಕಾರ, ಟೀಮ್ ಇಂಡಿಯಾ ಶಿವಂ ದುಬೆ ಅವರ ಬದಲಿಗೆ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿತು. ಈ ನಿಯಮದ ಪ್ರಕಾರ ಲೈಕ್ ಟು ಲೈಕ್ ಆಟಗಾರ ಕಣಕ್ಕಿಳಿಯಬೇಕು. ಅಂದರೆ ಬ್ಯಾಟರ್ ಗಾಯಗೊಂಡು ಹೊರಗುಳಿದರೆ ಬ್ಯಾಟರ್ನನ್ನೇ ಕಣಕ್ಕಿಳಿಸಬೇಕು. ಅಥವಾ ಬೌಲರ್ ಗಾಯಗೊಂಡರೆ, ಬದಲಿಯಾಗಿ ಬರುವವರು ಬೌಲರ್ ಆಗಿರಬೇಕು. ಇನ್ನು ಆಲ್ರೌಂಡರ್ಗೆ ಬದಲಿಯಾಗಿ ಆಲ್ರೌಂಡರ್ ಆಡಬೇಕೆಂದು ನಿಯಮವಿದೆ.
ಆದರೆ ಟೀಮ್ ಇಂಡಿಯಾ ಆಲ್ರೌಂಡರ್ ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿರುವುದೇ ಈಗ ವಿವಾದಕ್ಕೆ ಕಾರಣವಾಗಿದೆ. ಶಿವಂ ದುಬೆ ಬೌಲಿಂಗ್ ಕೂಡ ಮಾಡಬಲ್ಲವರಾಗಿರುವ ಟೀಮ್ ಇಂಡಿಯಾ ಬೌಲರ್ ಆಗಿ ಹರ್ಷಿತ್ ಅವರನ್ನು ಕಣಕ್ಕಿಳಿಸಿದೆ.
ಆದರೆ ಇದು ಲೈಕ್ ಟು ಲೈಕ್ ಆಟಗಾರನ ಪಟ್ಟಿಗೆ ಬರುವುದಿಲ್ಲ ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ. ದುಬೆ ಆಲ್ರೌಂಡರ್ ಆಗಿದ್ದರೂ, ಟೀಮ್ ಇಂಡಿಯಾ ಪರಿಪೂರ್ಣ ಬೌಲರ್ನನ್ನು ಬದಲಿಯಾಗಿ ಕಣಕ್ಕಿಳಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಬಟ್ಲರ್ ಹೇಳಿದ್ದಾರೆ.
ಶಿವಂ ದುಬೆ 25 mph ವೇಗದಲ್ಲಿ ಚೆಂಡೆಸೆಯಬಲ್ಲರು. ಅದೇ ವೇಳೆ ಹರ್ಷಿತ್ ರಾಣಾ ಬ್ಯಾಟಿಂಗ್ ಮಾಡಬಲ್ಲರು ಎಂದೇಳುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಕನ್ಕಶನ್ ಸಬ್ ಅನ್ನು ಅನುಮತಿಸುವ ಮುನ್ನ ಮ್ಯಾಚ್ ರೆಫರಿಗೆ ಹೆಚ್ಚಿನ ಸ್ಪಷ್ಟತೆ ಇರಬೇಕು ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.
ಒಟ್ಟಿನಲ್ಲಿ ಶಿವಂ ದುಬೆ ಅವರ ಬದಲಿಯಾಗಿ ಮತ್ತೋರ್ವ ಆಲ್ರೌಂಡರ್ ರಮಣ್ದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಲು ಅವಕಾಶ ಹೊಂದಿದ್ದರೂ, ಟೀಮ್ ಇಂಡಿಯಾ ಪರಿಪೂರ್ಣ ಬೌಲರ್ ಹರ್ಷಿತ್ ರಾಣಾ ಅವರನ್ನು ಕನ್ಕ್ಯುಶನ್ ಸಬ್ಗೆ ಆಡಿಸಿದೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಪವರ್ಗೆ ವಿರಾಟ್ ಕೊಹ್ಲಿಯ ದಾಖಲೆ ಉಡೀಸ್
ಹೀಗೆ ಬದಲಿಯಾಗಿ ಬಂದ ಹರ್ಷಿತ್ ರಾಣಾ 4 ಓವರ್ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕನ್ಕಶನ್ ಸಬ್ ಆಯ್ಕೆಯ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದು, ಭಾರತ ತಂಡವು ಮೋಸದಿಂದ ಗೆಲುವು ದಾಖಲಿಸಿದೆ ಎಂದು ಇಂಗ್ಲೆಂಡ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Published On - 8:36 am, Sat, 1 February 25