ಹಾರ್ದಿಕ್ ಪಾಂಡ್ಯ ಪವರ್ಗೆ ವಿರಾಟ್ ಕೊಹ್ಲಿಯ ದಾಖಲೆ ಉಡೀಸ್
India vs England, 4th T20I: ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ (53) ಹಾಗೂ ಶಿವಂ ದುಬೆ (53) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 19.4 ಓವರ್ಗಳಲ್ಲಿ 166 ರನ್ಗಳಿಸಿ ಆಲೌಟ್ ಆಗಿದೆ.
Updated on: Feb 01, 2025 | 7:53 AM

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ 15 ರನ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಕೇವಲ 12 ರನ್ಗಳಿಸುವಷ್ಟರಲ್ಲಿ ಭಾರತ ತಂಡದ ಟಾಪ್-3 ಬ್ಯಾಟರ್ಗಳು ಪೆವಿಲಿಯನ್ಗೆ ಮರಳಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಅದರಲ್ಲೂ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಇಂಗ್ಲೆಂಡ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಪಾಂಡ್ಯ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 53 ರನ್ ಬಾರಿಸಿ 18ನೇ ಓವರ್ನಲ್ಲಿ ಔಟಾದರು.

ಹೀಗೆ ಔಟಾಗುವ ಮುನ್ನ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಂದರೆ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಡೆತ್ ಓವರ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಇದೀಗ ಪಾಂಡ್ಯ ಪಾಲಾಗಿದೆ.

ಇದಕ್ಕೂ ಮುನ್ನ ಈ ವಿಶೇಷ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 16 ರಿಂದ 20 ಓವರ್ಗಳ ನಡುವೆ ಒಟ್ಟು 1032 ರನ್ ಕಲೆಹಾಕಿ, ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಡೆತ್ ಓವರ್ಗಳಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಇಂಗ್ಲೆಂಡ್ ವಿರುದ್ಧ ಡೆತ್ ಓವರ್ಗಳಲ್ಲಿ ಅಬ್ಬರಿಸುವ ಮೂಲಕ ಹಾರ್ದಿಕ್ ಪಾಂಡ್ಯ ಈ ದಾಖಲೆಯನ್ನು ಮುರಿದಿದ್ದಾರೆ. ಪಾಂಡ್ಯ 16 ರಿಂದ 20 ಓವರ್ಗಳ ನಡುವೆ ಈವರೆಗೆ 1068 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಡೆತ್ ಓವರ್ಗಳಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 5 ಅರ್ಧಶತಕ, 1500+ ರನ್ಸ್, 90+ ವಿಕೆಟ್ ಪಡೆದ ಭಾರತದ ಮೊದಲ ಆಲ್ರೌಂಡರ್ ಎಂಬ ಹೆಗ್ಗಳಿಕೆಗೂ ಹಾರ್ದಿಕ್ ಪಾಂಡ್ಯ ಪಾತ್ರರಾಗಿದ್ದಾರೆ. ಅಲ್ಲದೆ ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್), ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್) ಹಾಗೂ ಸಿಕಂದರ್ ರಾಝ (ಝಿಂಬಾಬ್ವೆ) ನಂತರ ಈ ಸಾಧನೆ ಮಾಡಿದ ವಿಶ್ವದ 4ನೇ ಆಲ್ರೌಂಡರ್ ಎನಿಸಿಕೊಂಡಿದ್ದಾರೆ.
























