- Kannada News Photo gallery Cricket photos TEAM INDIA WINS THEIR 17TH CONSECUTIVE T20I SERIES AT HOME
ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ವಿಶ್ವ ದಾಖಲೆಯ ಗೆಲುವಿನ ನಾಗಾಲೋಟ
India vs England, 4th T20I: ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 19.4 ಓವರ್ಗಳಲ್ಲಿ 166 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 15 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಸರಣಿಯನ್ನು ವಶಪಡಿಸಿಕೊಂಡಿದೆ.
Updated on: Feb 01, 2025 | 9:53 AM

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡವು 3-1 ಅಂತರದಿಂದ ವಶಪಡಿಸಿಕೊಂಡಿದೆ. ಇದರೊಂದಿಗೆ ತವರಿನಲ್ಲಿ ಟೀಮ್ ಇಂಡಿಯಾದ ಸರಣಿ ಗೆಲುವಿನ ನಾಗಾಲೋಟ ಮುಂದುವರೆದಿದೆ. ಅಂದರೆ ಭಾರತ ತಂಡವು ತವರಿನಲ್ಲಿ ಕೊನೆಯ ಬಾರಿ ಟಿ20 ಸರಣಿ ಸೋತಿದ್ದು 2018 ರಲ್ಲಿ.

2018-19 ರಲ್ಲಿ ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಿಂದ ಟಿ20 ಸರಣಿ ಸೋತಿತ್ತು. ಇದಾದ ಬಳಿಕ ಟೀಮ್ ಇಂಡಿಯಾ ಹಿಂತಿರುಗಿ ನೋಡಿಲ್ಲ. 2019 ರಿಂದ ಗೆಲುವಿನ ನಾಗಾಲೋಟ ಆರಂಭಿಸಿರುವ ಟೀಮ್ ಇಂಡಿಯಾ ಇದೀಗ ತವರಿನಲ್ಲಿ ಸತತ 17 ಸರಣಿಗಳನ್ನು ಗೆದ್ದುಕೊಂಡಿದೆ.

ಇದು ಕೂಡ ವಿಶ್ವ ದಾಖಲೆಯಾಗಿದೆ. ಅಂದರೆ ತವರಿನಲ್ಲಿ ಸತತವಾಗಿ ಅತ್ಯಧಿಕ ಟಿ20 ಸರಣಿಗಳನ್ನು ಗೆದ್ದ ವರ್ಲ್ಡ್ ರೆಕಾರ್ಡ್ ಪಟ್ಟಿಯಲ್ಲಿ ಭಾರತ ತಂಡವು ಅಗ್ರಸ್ಥಾನದಲ್ಲಿದೆ. ವಿಶೇಷ ಎಂದರೆ ಭಾರತ ತಂಡವನ್ನು ಹೊರತುಪಡಿಸಿ ವಿಶ್ವದ ಯಾವುದೇ ತಂಡ ತವರಿನಲ್ಲಿ ಸತತ 10 ಸರಣಿಗಳನ್ನು ಗೆದ್ದಿಲ್ಲ.

2019 ರಿಂದ ಈವರೆಗೆ ಟೀಮ್ ಇಂಡಿಯಾ ತವರಿನಲ್ಲಿ 17 ಟಿ20 ಸರಣಿಗಳನ್ನು ಗೆದ್ದುಕೊಂಡಿದೆ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ತಂಡ. 2006 ರಿಂದ 2010 ರ ನಡುವೆ ಆಸೀಸ್ ಪಡೆ ತವರಿನಲ್ಲಿ ಸತತವಾಗಿ 8 ಟಿ20 ಸರಣಿಗಳನ್ನು ಗೆದ್ದುಕೊಂಡಿತ್ತು. ಇನ್ನು ಸೌತ್ ಆಫ್ರಿಕಾ 2007 ರಿಂದ 2010ವರೆಗೆ ಸತತ 7 ಸರಣಿಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

ಆದರೆ ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳ ದಾಖಲೆಗಳನ್ನು ಮುರಿದಿರುವ ಟೀಮ್ ಇಂಡಿಯಾ ಇದೀಗ ತವರಿನಲ್ಲಿ 17 ಸರಣಿ ಜಯದೊಂದಿಗೆ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಸತತವಾಗಿ 15+ ಸರಣಿಗಳನ್ನು ಗೆದ್ದ ವಿಶ್ವದ ಏಕೈಕ ತಂಡ ಎನಿಸಿಕೊಂಡಿದೆ.



















