IND vs ENG: ‘ಹಸಿದವರಿಗೆ ಅವಕಾಶ’; ಟೆಸ್ಟ್ ತೊರೆದು ಐಪಿಎಲ್‌ನತ್ತ ಗಮನಹರಿಸಿದವರಿಗೆ ರೋಹಿತ್ ಎಚ್ಚರಿಕೆ

|

Updated on: Feb 26, 2024 | 9:40 PM

Rohit Sharma: ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ಆಡಲು ಬಯಸದ ಮತ್ತು ಐಪಿಎಲ್​ನತ್ತ ಹೆಚ್ಚು ಗಮನ ಹರಿಸುತ್ತಿರುವವರಿಗೆ ಮಾತಿನಲ್ಲೇ ತಿವಿದಿದ್ದಾರೆ.

IND vs ENG: ‘ಹಸಿದವರಿಗೆ ಅವಕಾಶ’; ಟೆಸ್ಟ್ ತೊರೆದು ಐಪಿಎಲ್‌ನತ್ತ ಗಮನಹರಿಸಿದವರಿಗೆ ರೋಹಿತ್ ಎಚ್ಚರಿಕೆ
ರೋಹಿತ್ ಶರ್ಮಾ
Follow us on

ರಾಂಚಿ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಭಾರತ ತಂಡ (India vs England), ಇದರೊಂದಿಗೆ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಹಾಗೆಯೇ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಹಾಗೆಯೇ ತವರು ನೆಲದಲ್ಲಿ ಟೀಂ ಇಂಡಿಯಾಗೆ (Team India) ಸತತ 17ನೇ ಟೆಸ್ಟ್ ಸರಣಿ ಜಯವಾಗಿದ್ದು, ಈ ಗೆಲುವಿನೊಂದಿಗೆ ಭಾರತ ದಾಖಲೆ ಕೂಡ ಸೃಷ್ಟಿಸಿದೆ. ಈ ಗೆಲುವಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ರೋಹಿತ್ ಶರ್ಮಾ (Rohit Sharma), ಟೆಸ್ಟ್ ಕ್ರಿಕೆಟ್ ಆಡಲು ಬಯಸದ ಮತ್ತು ಐಪಿಎಲ್​ನತ್ತ (IPL 2024) ಹೆಚ್ಚು ಗಮನ ಹರಿಸುತ್ತಿರುವವರಿಗೆ ಮಾತಿನಲ್ಲೇ ತಿವಿದಿದ್ದಾರೆ. ಇದರರ್ಥ ಟೀಂ ಇಂಡಿಯಾದಿಂದ ದೂರ ಉಳಿದು ಐಪಿಎಲ್ ಮೇಲೆ ಗಮನ ಹರಿಸುತ್ತಿರುವ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಇಶಾನ್ ಕಿಶನ್​ಗೆ (Ishan Kishan) ರೋಹಿತ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ ಹೇಳಿದ್ದೇನು?

ಪಂದ್ಯದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ಅತ್ಯಂತ ಕಠಿಣ ಸ್ವರೂಪದ್ದಾಗಿದೆ. ಇದನ್ನು ಆಡಲು ನೀವು ಹಸಿದಿರಬೇಕು. ಯಾರು ಹಸಿದಿದ್ದಾರೆ ಮತ್ತು ಯಾರು ಈ ಮಾದರಿಯನ್ನು ಆಡಲು ಬಯಸುವುದಿಲ್ಲ ಎಂಬುದನ್ನು ತಿಳಿಯುವುದು ಬಹಳ ಸುಲಭ. ಟೆಸ್ಟ್ ಕ್ರಿಕೆಟ್‌ಗೆ ಸಾಕಷ್ಟು ಶ್ರಮ ಬೇಕಾಗುತ್ತದೆ ಎಂದಿದ್ದಾರೆ. ಅಂದರೆ ರೋಹಿತ್ ಶರ್ಮಾ ಈ ಸ್ವರೂಪದಿಂದ ದೂರವಿರುವ ಆಟಗಾರರನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂಬುದನ್ನು ಈ ಮಾತಿನಲ್ಲೇ ಅರಿಯಬಹುದಾಗಿದೆ.

IND vs ENG: ರಾಂಚಿ ಟೆಸ್ಟ್​ನಲ್ಲಿ ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ..!

ಹಾರ್ದಿಕ್-ಕಿಶನ್ ಟಾರ್ಗೆಟ್?

2018 ರಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರವಿರುವ ಹಾರ್ದಿಕ್ ಪಾಂಡ್ಯಗೆ ರೋಹಿತ್ ಅವರ ಈ ಹೇಳಿಕೆ ಸ್ಪಷ್ಟವಾಗಿ ಹೋಲಿಕೆಯಾಗುವಂತಿತ್ತು. ಹಾರ್ದಿಕ್ ಜೊತೆಗೆ ಯುವ ಆಟಗಾರ ಇಶಾನ್ ಕಿಶನ್ ಕೂಡ ಇದೇ ಹಾದಿಯನ್ನೇ ಅನುಸರಿಸಿದ್ದಾರೆ. ಹಾರ್ದಿಕ್ ಹೇಗೆ ರೆಡ್ ಬಾಲ್ ಕ್ರಿಕೆಟ್ ಆಡುವುದಿಲ್ಲವೋ ಅದೇ ರೀತಿ ಇಶಾನ್ ಕೂಡ ಮಾಡುತ್ತಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್, ಸರಣಿ ಆರಂಭಕ್ಕೂ ಮುನ್ನ ತಮ್ಮ ಹೆಸರನ್ನು ಹಿಂಪಡೆದು, ಭಾರತಕ್ಕೆ ವಾಪಸ್ಸಾಗಿದ್ದರು. ನಂತರ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಕೈಬಿಡಲಾಯಿತು.

ಮತ್ತೆ ತಂಡವನ್ನು ಸೇರಿಕೊಳ್ಳಬೇಕಾದರೆ ಕಿಶನ್, ರಣಜಿ ಆಡಬೇಕೆಂದು ತಂಡದ ಮ್ಯಾನೇಜ್‌ಮೆಂಟ್‌ ಸೂಚನೆ ನೀಡಿತ್ತು. ಆದರೆ ಕಿಶನ್ ಮಂಡಳಿಯ ಮಾತಿಗೆ ಸೊಪ್ಪು ಹಾಕಲಿಲ್ಲ. ಮಂಡಳಿ ಮಾತನ್ನು ತಿರಸ್ಕರಿಸಿದ್ದ ಇಶಾನ್ ಕಿಶನ್, ಹಾರ್ದಿಕ್ ಜೊತೆ ಸೇರಿ ಐಪಿಎಲ್‌ಗೆ ತಯಾರಿ ನಡೆಸಲಾರಂಭಿಸಿದ್ದಾರೆ. ಇದು ಆಯ್ಕೆ ಮಂಡಳಿಯ ಕೋಪವನ್ನು ಇಮ್ಮಡಿಗೊಳಿಸಿತ್ತು. ಇದೀಗ ಪಂದ್ಯ ಮುಗಿದ ಬಳಿಕ ಮಾತನಾಡಿರುವ ರೋಹಿತ್, ಟೆಸ್ಟ್ ಕ್ರಿಕೆಟ್​ ಹಾಗೂ ಮಂಡಳಿಯ ಮಾತನ್ನು ತಿರಸ್ಕರಿಸುತ್ತಿರುವ ಆಟಗಾರರಿಗೆ ಮಾತಿನ ಚಡಿ ಏಟು ನೀಡಿದ್ದಾರೆ.

ಯಂಗಿಸ್ತಾದ ಸೂಪರ್ ಶೋ

ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಕೆಎಲ್ ರಾಹುಲ್ ಇಲ್ಲದೆ ಟೀಂ ಇಂಡಿಯಾ ಸರಣಿ ಗೆದ್ದಿರುವುದು ಯುವ ಆಟಗಾರರ ಸಾಮಥ್ಯ್ರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಆದರೆ ಆ ಬಳಿಕ ಭಾರತದ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಸತತ ಮೂರು ಪಂದ್ಯಗಳನ್ನು ಗೆಲ್ಲುವಂತೆ ಮಾಡಿದರು. ಅಷ್ಟೇ ಅಲ್ಲ, ಇದರೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಇದು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಮತ್ತು ಬ್ರೆಂಡನ್ ಮೆಕಲಮ್ ಅವರ ಕೋಚಿಂಗ್‌ನಲ್ಲಿ ಇಂಗ್ಲೆಂಡ್‌ನ ಮೊದಲ ಸರಣಿ ಸೋಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 pm, Mon, 26 February 24