ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವಕಪ್ (ICC ODI World Cup 2023) ಪಂದ್ಯದಲ್ಲಿ ಭಾರತ ತಂಡ, ಹಾಲಿ ಚಾಂಪಿಯನ್ ಇಂಗ್ಲೆಂಡ್ (India vs England) ತಂಡವನ್ನು 100 ರನ್‌ಗಳಿಂದ ಸೋಲಿಸಿತು. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ನಾಯಕ ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ಆಂಗ್ಲರ ವಿರುದ್ಧ ನಾಯಕನ ಜವಬ್ದಾರಿಯುತ ಇನ್ನಿಂಗ್ಸ್ ಆಡಿದ ರೋಹಿತ್, 101 ಎಸೆತಗಳಲ್ಲಿ 10 ಅದ್ಭುತ ಬೌಂಡರಿ ಹಾಗೂ 3 ಗಗನಚುಂಬಿ ಸಿಕ್ಸರ್ ಸಹಿತ 87 ರನ್ ಸಿಡಿಸಿ 13 ರನ್‌ಗಳಿಂದ ಶತಕ ವಂಚಿತರಾದರು. ಪಂದ್ಯದ ನಂತರ ಈ ಅದ್ಭುತ ಇನ್ನಿಂಗ್ಸ್‌ಗಾಗಿ ರೋಹಿತ್ ಶರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ನೀಡಲಾಯಿತು.
ರೋಹಿತ್ ಶರ್ಮಾ ಈಗ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಪಂದ್ಯದ ಆಟಗಾರ ಪ್ರಶಸ್ತಿಗಳನ್ನು ಗೆದ್ದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಪ್ರಸ್ತುತ ರೋಹಿತ್ ಖಾತೆಗೆ ಒಟ್ಟು 7 ಪಂದ್ಯ ಶ್ರೇಷ್ಠ ಪ್ರಶಸ್ತಿ ಸೇರಿವೆ. ಈ ಪಟ್ಟಿಯಲ್ಲಿ ಭಾರತ ತಂಡದ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಕ್ರಿಕೆಟ್ ದೇವರು ಏಕದಿನ ವಿಶ್ವಕಪ್‌ನಲ್ಲಿ 9 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೆಕ್‌ಗ್ರಾತ್ ವಿಶ್ವಕಪ್‌ನಲ್ಲಿ 6 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇಂಗ್ಲೆಂಡ್ ತಂಡವನ್ನು ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಭಾರತ..!
ಮತ್ತೊಂದೆಡೆ, ಇಂಗ್ಲೆಂಡ್ ವಿರುದ್ಧದ ಪಂದ್ಯದ ಆಟಗಾರ ಪ್ರಶಸ್ತಿಯನ್ನು ಗೆದ್ದ ನಂತರ, ರೋಹಿತ್ ಶರ್ಮಾ ಐಸಿಸಿ ಪಂದ್ಯಾವಳಿಗಳಲ್ಲಿ ಹೆಚ್ಚು ಬಾರಿ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಸಚಿನ್ ತೆಂಡೂಲ್ಕರ್, ಮಹೇಲಾ ಜಯವರ್ಧನೆ ಮತ್ತು ಶೇನ್ ವ್ಯಾಟ್ಸನ್ ಈ ಪ್ರಶಸ್ತಿಯನ್ನು 10 ಬಾರಿ ಸ್ವೀಕರಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ 11 ಬಾರಿ ಈ ಪ್ರಶಸ್ತಿಯನ್ನು ಪಡೆದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇನ್ನು 2023ರ ವಿಶ್ವಕಪ್ ಆವೃತ್ತಿಯಲ್ಲಿ ನಡೆದಿರುವ 6 ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಯಾರ್ಯಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ ಎಂಬುದನ್ನು ನೋಡುವುದಾದರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯ 97 ರನ್ ಹಾಗೂ 1 ಕ್ಯಾಚ್ ಪಡೆದಿದ್ದ ಕೆಎಲ್ ರಾಹುಲ್ ಈ ಪ್ರಶಸ್ತಿ ಪಡೆದಿದ್ದರು. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 84 ಎಸೆತಗಳಲ್ಲಿ 131 ರನ್ ಸಿಡಿಸಿದ್ದ ನಾಯಕ ರೋಹಿತ್ಗೆ ಈ ಪಶಸ್ತಿ ಸಿಕ್ಕಿತ್ತು. ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 19 ರನ್ಗಳಿಗೆ 2 ವಿಕೆಟ್ ಉರುಳಿಸಿದ್ದ ಬುಮ್ರಾ ಈ ಪ್ರಶಸ್ತಿ ಗೆದ್ದಿದ್ದರು. ಬಾಂಗ್ಲಾದೇಶ ವಿರುದ್ಧ 97 ಎಸೆತಗಳಲ್ಲಿ ಅಜೇಯ 103 ರನ್ ಸಿಡಿಸಿದ್ದ ಕೊಹ್ಲಿಗೆ ಈ ಪ್ರಶಸ್ತಿ ಲಭಿಸಿದ್ದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 54 ರನ್ ನೀಡಿ 5 ವಿಕೆಟ್ ಉರುಳಿಸಿದ್ದ ಶಮಿ ಈ ಪ್ರಶಸ್ತಿಯನ್ನು ಎತ್ತಿ ಹಿಡಿದರು. ಇದೀಗ ಇಂಗ್ಲೆಂಡ್ ವಿರುದ್ಧ ಸ್ಮರಣೀಯ ಇನ್ನಿಂಗ್ಸ್ ಆಡಿದ ರೋಹಿತ್ಗೆ ಈ ಆವೃತ್ತಿಯಲ್ಲಿ ಎರಡನೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ