IND vs ENG: ವಿಚಿತ್ರ ಕಾರಣಕ್ಕೆ 45 ನಿಮಿಷ ತಡವಾಗಿ ನಡೆದ ಟಾಸ್

India England 5th T20: ಸೌತಾಂಪ್ಟನ್‌ನಲ್ಲಿ ಭಾರತ-ಇಂಗ್ಲೆಂಡ್ 5ನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬೌಲಿಂಗ್ ಆಯ್ದರು. ಟೀಂ ಇಂಡಿಯಾ ಬಸ್ ಟ್ರಾಫಿಕ್‌ನಲ್ಲಿ ಸಿಲುಕಿದ್ದರಿಂದ ಪಂದ್ಯ 45 ನಿಮಿಷ ತಡವಾಗಿ ಆರಂಭವಾಯಿತು. ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಸೂರ್ಯಾಂಶ್ ಶೆಡ್ಗೆ ಅವಕಾಶ ಪಡೆದಿದ್ದು, ಉಭಯ ತಂಡಗಳ ಪ್ಲೇಯಿಂಗ್ 11 ಪ್ರಕಟಿಸಲಾಗಿದೆ.

IND vs ENG: ವಿಚಿತ್ರ ಕಾರಣಕ್ಕೆ 45 ನಿಮಿಷ ತಡವಾಗಿ ನಡೆದ ಟಾಸ್
Ind Vs Eng

Updated on: Jul 11, 2026 | 7:48 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಸೌತಾಂಪ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಬೇಕಿತ್ತು. ಅಂದರೆ ಟಾಸ್ ಸಂಜೆ 6:30 ಕ್ಕೆ ನಡೆಯಬೇಕಿತ್ತು. ಆದರೆ ಈ ಪಂದ್ಯದ ಟಾಸ್ ಸಂಜೆ 7:15 ಕ್ಕೆ ನಡೆದರೆ, ಪಂದ್ಯ 7:30 ಕ್ಕೆ ಆರಂಭವಾಯಿತು. ಪಂದ್ಯದ ಟಾಸ್ ಇಷ್ಟು ವಿಳಂಬವಾಗಲು ಕಾರಣ ಏನು ಎಂಬುದನ್ನು ಕೇಳಿದರೆ ಎಲ್ಲರೂ ಅಚ್ಚರಿಗೊಳ್ಳುವುದರಲ್ಲಿ ಆಶ್ಚರ್ಯವಿಲ್ಲ.

ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿದ ಟೀಂ ಇಂಡಿಯಾ

ಯಾವುದೇ ಪಂದ್ಯ ತಡವಾಗಿ ಆರಂಭವಾಗಲು ಒಂದು ಹವಾಮಾನ ವೈಪರಿತ್ಯ ಕಾರಣವಾಗಬೇಕು ಅಥವಾ ಮೈದಾನದಲ್ಲಿನ ಸಿದ್ಧತೆಗಳಲ್ಲಿ ಲೋಪ ಉಂಟಾಗಿರಬೇಕು. ಆದರೆ ಈ ಐದನೇ ಟಿ20 ಪಂದ್ಯದ ಟಾಸ್ ವಿಳಂಬವಾಗಲು ಟೀಂ ಇಂಡಿಯಾ ತಡವಾಗಿ ಮೈದಾನಕ್ಕೆ ಆಗಮಿಸಿದ್ದು. ಟೀಂ ಇಂಡಿಯಾ ತಡವಾಗಿ ಕ್ರೀಡಾಂಗಣಕ್ಕೆ ಬರುವುದಕ್ಕೆ ಕಾರಣವೂ ಇದ್ದು, ತಂಡದ ಬಸ್ ಕ್ರೀಡಾಂಗಣಕ್ಕೆ ಬರುವ ಹಾದಿಯಲ್ಲಿ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿತು. ಹೀಗಾಗಿ ನಿಗದಿತ ಸಮಯಕ್ಕೆ ಆಟಗಾರರು ಕ್ರೀಡಾಂಗಣಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಟಾಸ್ ನಡೆಯುವ ಸಮಯಕ್ಕೆ ಆಟಗಾರರು ಕ್ರೀಡಾಂಗಣಕ್ಕೆ ಬಂದರು. ಹೀಗಾಗಿ ಪಂದ್ಯದ ಟಾಸ್ ಅನ್ನು 45 ನಿಮಿಷ ತಡವಾಗಿ ನಡೆಸಲಾಯಿತು.

ಟೀಂ ಇಂಡಿಯಾದಲ್ಲಿ 2 ಬದಲಾವಣೆ

ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ಅದರಂತೆ ವೈಭವ್ ಸೂರ್ಯವಂಶಿಯವರನ್ನು ಈ ಪಂದ್ಯದಿಂದ ಹೊರಗಿಡಲಾಗಿದ್ದು, ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್​ಗೆ ಮತ್ತೆ ಅವಕಾಶ ನೀಡಲಾಗಿದೆ. ಹಾಗೆಯೇ ವಾಷಿಂಗ್ಟನ್ ಸುಂದರ್ ಅವರನ್ನು ಈ ಪಂದ್ಯದಿಂದ ಹೊರಗಿಟ್ಟು, ಸೂರ್ಯಾಂಶ್ ಶೆಡ್ಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

IND vs ENG: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಸೂರ್ಯಾಂಶ್ ಶೆಡ್ಗೆ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ಧ್ ಕೃಷ್ಣ.

ಇಂಗ್ಲೆಂಡ್‌ ತಂಡ: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್ (ರೆಹಾನ್ ಅಹ್ಮದ್ ಬದಲಿಗೆ), ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Sat, 11 July 26

Follow Us