ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಜಟಾಪಟಿ ನಡೆದಿದೆ. ಇಬ್ಬರು ಅನುಭವಿ ಆಟಗಾರರು ಪರಸ್ಪರ ಮಾತಿನ ದಾಳಿಯನ್ನು ಮಾಡುತ್ತಿರುವುದು ಕಂಡುಬಂದಿದೆ. ಎರಡನೇ ಟೆಸ್ಟ್ ಪಂದ್ಯದ ನಾಲ್ಕನೆಯ ದಿನದ ಮೊದಲ ಸೆಷನ್ನಲ್ಲಿ ಈ ಘಟನೆ ಸಂಭವಿಸಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ನಡುವಿನ ಮಾತಿನ ಚಕಮಕಿ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತದ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ, ವಿರಾಟ್ ಕೊಹ್ಲಿ ಜೇಮ್ಸ್ ಆಂಡರ್‌ಸನ್‌ಗೆ ಏನನ್ನೋ ಹೇಳುತ್ತಿರುವ ವಿಡಿಯೋ ಹೊರಬಿದ್ದಿದೆ. ನಾನ್ ಸ್ಟ್ರೈಕ್ ಕೊನೆಯಲ್ಲಿ ಕೊಹ್ಲಿಯ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿವೆ. ಬೌಲಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ಆಂಡರ್‌ಸನ್‌ಗೆ ವಿರಾಟ್ ಕೊಹ್ಲಿ, ನೀವು ನನ್ನ ರೇಗಿಸುತ್ತಿದ್ದೀರಾ? ಇದು ನಿಮ್ಮ ಮನೆಯ ಹಿತ್ತಲಲ್ಲ ಎಂದಿದ್ದಾರೆ. ಇದರ ನಂತರ ಜೇಮ್ಸ್ ಆಂಡರ್ಸನ್ ಕೊಹ್ಲಿಯ ಸನಿಹ ಬಂದು ಏನ್ನನ್ನೋ ಹೇಳುತ್ತಾರೆ. ಆದರೆ ಅದು ಏನೆಂಬುದು ದಾಖಲಾಗಿಲ್ಲ.
ನಿಂದನಾತ್ಮಕ ಪದಗಳು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ನಿಂದನಾತ್ಮಕ ಪದಗಳನ್ನು ಬಳಸುತ್ತಿರುವುದು ಕೂಡ ಕೇಳಿಬರುತ್ತಿದೆ. ಆದಾಗ್ಯೂ, ಇದರಲ್ಲಿ ಅವರು ಮುಂದೆ ಏನು ಹೇಳುತ್ತಾರೆಂದು ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ಆದರೆ ಈ ಸಮಯದಲ್ಲಿ ಕೊಹ್ಲಿ ಮತ್ತು ಆಂಡರ್ಸನ್ ನಡುವೆ ಜಗಳ ತೀವ್ರಸ್ವರೂಪ ಪಡೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಕೊಹ್ಲಿ ನಿಂದನೀಯ ಮಾತುಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಐಸಿಸಿ ನೀತಿ ಸಂಹಿತೆಯ ಪ್ರಕಾರ, ಅಂತರಾಷ್ಟ್ರೀಯ ಪಂದ್ಯದ ಸಮಯದಲ್ಲಿ ನಿಂದನೀಯ ಪದಗಳನ್ನು ಬಳಸುವುದು ಒಂದು ಮಟ್ಟದ ಅಪರಾಧ.
The verbal battle between Virat Kohli and James Anderson.#ENGvIND pic.twitter.com/NolXUD5nmr
— Neelabh (@CricNeelabh) August 15, 2021
2014 ರ ಸರಣಿಯಿಂದ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಕಠಿಣ ಸ್ಪರ್ಧೆ ಇದೆ. 2014 ರಲ್ಲಿ ಭಾರತವು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ, ಕೊಹ್ಲಿ ಜೇಮ್ಸ್ ಆಂಡರ್ಸನ್ ಎದುರು ಹೀನಾಯವಾಗಿ ವಿಫಲರಾದರು. ಆದರೆ 2018 ರ ಪ್ರವಾಸದಲ್ಲಿ ಕೊಹ್ಲಿ ಬಲವಾದ ಪುನರಾಗಮನ ಮಾಡಿ ಎರಡು ಶತಕಗಳನ್ನು ಗಳಿಸಿದ್ದರು. ಅಲ್ಲದೆ, ಆಂಡರ್‌ಸನ್‌ಗೆ ಒಮ್ಮೆ ಕೂಡ ಔಟಾಗಲಿಲ್ಲ. ಆದರೆ ಇತ್ತೀಚಿನ ಪ್ರವಾಸದಲ್ಲಿ, ಆಂಡರ್ಸನ್ ಈಗಾಗಲೇ ವಿರಾಟ್ ಕೊಹ್ಲಿಯನ್ನು ಮೊದಲ ಟೆಸ್ಟ್‌ನಲ್ಲಿ ಗೋಲ್ಡನ್ ಡಕ್ (ಮೊದಲ ಚೆಂಡಿನಲ್ಲೇ ಔಟಾಗುವಂತೆ) ಮಾಡಿದ್ದರು.
ಕೊಹ್ಲಿಯ ಕಳಪೆ ಫಾರ್ಮ್
ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಮುಂದುವರಿಯುತ್ತಿದೆ. ಲಾರ್ಡ್ಸ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿಯೂ ಕೂಡ ಅವರು ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 20 ರನ್ ಗಳಿಸಿದ ನಂತರ, ಸ್ಯಾಮ್ ಕುರ್ರನ್ಗೆ ಕೊಹ್ಲಿ ಬಲಿಯಾದರು. ಈ ಸರಣಿಯಲ್ಲಿ, ಅವರು ಅರ್ಧಶತಕ ಗಳಿಸಲು ಸಹ ಸಾಧ್ಯವಾಗಲಿಲ್ಲ. ಲಾರ್ಡ್ಸ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಅವರು 42 ರನ್ ಗಳಿಸಿದರು. ಇದೀಗ ಮೂರು ಟೆಸ್ಟ್‌ಗಳು ಅಂದರೆ ಸರಣಿಯಲ್ಲಿ ಆರು ಇನ್ನಿಂಗ್ಸ್‌ಗಳು ಉಳಿದಿವೆ. ಭಾರತದ ನಾಯಕ ಹೇಗೆ ಪುಟಿದ್ದೇಳುತ್ತಾರೆ ಎಂಬುದನ್ನು ಕಾದು ನೋಡಬೇಕು.