
90 ಓವರ್ಗಳು… ಮೂರು ಸೆಷನ್… 536 ರನ್ಗಳ ಟಾರ್ಗೆಟ್. ಇದು ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮುಂದಿರುವ ಗುರಿ. ಇತ್ತ ಅದೇ ಮೂರು ಸೆಷನ್ ಮೂಲಕ 7 ವಿಕೆಟ್ ಕಬಳಿಸಿದರೆ ಟೀಮ್ ಇಂಡಿಯಾ ಐತಿಹಾಸಿಕ ಗೆಲುವನ್ನು ತನ್ನದಾಗಿಸಿಕೊಳ್ಳಬಹುದು. ಇಲ್ಲಿ ಐತಿಹಾಸಿಕ ಗೆಲುವು ಎನ್ನಲು ಮುಖ್ಯ ಕಾರಣ, ಭಾರತ ತಂಡವು ಈವರೆಗೆ ಎಡ್ಜ್ಬಾಸ್ಟನ್ ಮೈದಾನದಲ್ಲೇ ಒಂದೇ ಒಂದು ಟೆಸ್ಟ್ ಪಂದ್ಯ ಗೆದ್ದಿಲ್ಲ. ಆಡಿರುವ 8 ಮ್ಯಾಚ್ಗಳಲ್ಲಿ ಒಂದು ಡ್ರಾ ಸಾಧಿಸಿದ್ದು ಬಿಟ್ಟರೆ ಉಳಿದ 7 ಪಂದ್ಯಗಳಲ್ಲೂ ಪರಾಜಯಗೊಂಡ ಇತಿಹಾಸವಿದೆ.
ಆದರೆ ಈ ಬಾರಿ ಟೀಮ್ ಇಂಡಿಯಾ ಪಾಲಿಗೆ ಗೆಲುವೆಂಬುದು ನಿಶ್ಚಿತ. ಏಕೆಂದರೆ ಇಂಗ್ಲೆಂಡ್ ಮುಂದಿರುವ ಗುರಿ 536 ರನ್ ಆಗಿದ್ದರೆ, ಟೀಮ್ ಇಂಡಿಯಾಗೆ ಬೇಕಿರುವುದು ಕೇವಲ 7 ವಿಕೆಟ್ಗಳು ಮಾತ್ರ. ಈ ಏಳು ವಿಕೆಟ್ಗಳಲ್ಲಿ ಭಾರತೀಯ ಬೌಲರ್ಗಳು ಟಾರ್ಗೆಟ್ ಮಾಡಬೇಕಿರುವುದು ಒಲೀ ಪೋಪ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ ಹಾಗೂ ಜೇಮಿ ಸ್ಮಿತ್ ಅವರನ್ನು ಮಾತ್ರ.
ಈ ನಾಲ್ವರಲ್ಲಿ ಮೂವರ ವಿಕೆಟ್ ಸಿಕ್ಕರೆ ಭಾರತ ತಂಡದ ಗೆಲುವು ಖಚಿತವಾಗಲಿದೆ. ಅದರಲ್ಲೂ ಪೋಪ್ ಹಾಗೂ ಸ್ಟೋಕ್ಸ್ ವಿಕೆಟ್ ಪಡೆದರೆ ಇಂಗ್ಲೆಂಡ್ ಡ್ರಾ ಸಾಧಿಸುವ ಸಾಧ್ಯತೆಯನ್ನು ಕೂಡ ದೂರ ತಳ್ಳಬಹುದು. ಏಕೆಂದರೆ ಪ್ರಸ್ತುತ ತಂಡದಲ್ಲಿರುವ ಬ್ಯಾಟರ್ಗಳಲ್ಲಿ ಕ್ರೀಸ್ ಕಚ್ಚಿ ನಿಲ್ಲುವ ಸಾಮರ್ಥ್ಯ ಇರುವುದು ಬೆನ್ ಸ್ಟೋಕ್ಸ್ ಹಾಗೂ ಒಲೀ ಪೋಪ್ಗೆ ಮಾತ್ರ.
ಇತ್ತ ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ ಸಿಡಿಲಬ್ಬರದ ಬ್ಯಾಟಿಂಗ್ಗೆ ಹೆಸರುವಾಸಿ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಫೀಲ್ಡಿಂಗ್ನಲ್ಲಿ ಚಾಣಾಕ್ಷತನ ಮೆರೆದರೆ ಇವರಿಬ್ಬರ ವಿಕೆಟ್ ಪಡೆಯುವುದು ಕಷ್ಟವೇನಲ್ಲ. ಹಾಗಾಗಿ ಭಾರತೀಯ ಬೌಲರ್ಗಳು ಇನ್ನುಳಿದ ನಾಲ್ವರಲ್ಲಿ ಮೂವರನ್ನು ಬೇಗನೆ ಔಟ್ ಮಾಡಿದರೆ ಗೆಲುವನ್ನು ಖಚಿತಪಡಿಸಿಕೊಳ್ಳಬಹುದು.
ಟೆಸ್ಟ್ ಕ್ರಿಕೆಟ್ ಇತಿಹಾಸದ ಅಂಕಿ ಅಂಶಗಳನ್ನು ಗಮನಿಸಿದರೂ ಭಾರತ ತಂಡದ ಗೆಲುವು ಬಹುತೇಕ ಖಚಿತ ಎನ್ನಬಹುದು. ಏಕೆಂದರೆ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾವುದೇ ತಂಡ ನಾಲ್ಕನೇ ಇನಿಂಗ್ಸ್ನಲ್ಲಿ 450+ ಸ್ಕೋರ್ ಚೇಸ್ ಮಾಡಿ ಗೆದ್ದ ದಾಖಲೆಗಳೇ ಇಲ್ಲ.
ಅತ್ತ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 407 ರನ್ಗಳು ಮಾತ್ರ. ಹೀಗಾಗಿ ಅಂತಿಮ ದಿನದಾಟದಲ್ಲಿ ಆಂಗ್ಲರ ಬ್ಯಾಟ್ನಿಂದ 536 ರನ್ ಮೂಡಿಬರುವುದು ಕಷ್ಟಸಾಧ್ಯ. ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಭಾರತ ತಂಡದಿಂದ ಗೆಲುವನ್ನು ಎದುರು ನೋಡಬಹುದು.
ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಈವರೆಗೆ 34 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ 21 ಪಂದ್ಯಗಳಲ್ಲಿ ಇಂಗ್ಲೆಂಡ್ ಜಯ ಸಾಧಿಸಿದೆ. ಇನ್ನು 12 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದರ ನಡುವೆ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಿದ್ದು ಕೇವಲ ಒಂದು ಬಾರಿ ಮಾತ್ರ.
ಅಂದರೆ ಬ್ರೆಂಡನ್ ಮೆಕಲಂ ಕೋಚಿಂಗ್ನಲ್ಲಿ ಇಂಗ್ಲೆಂಡ್ ತಂಡವು ಟೆಸ್ಟ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದೆ. ಈ ಮೂಲಕ ಆಂಗ್ಲರು ಗೆಲುವು ಇಲ್ಲ ಸೋಲು ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.
ಇತ್ತ ಆಕ್ರಮಣಕಾರಿ ಆಟದಿಂದಾಗಿ ಇಂಗ್ಲೆಂಡ್ ಬ್ಯಾಟರ್ಗಳು ಕ್ರೀಸ್ ಕಚ್ಚಿ ನಿಂತು ಪಂದ್ಯವನ್ನು ಡ್ರಾಗೊಳಿಸುವ ಚಾಕಚಕ್ಯತೆಯನ್ನು ಮರೆತಿರುವುದು ಸುಳ್ಳಲ್ಲ. ಹೀಗಾಗಿ ಎಡ್ಜ್ಬಾಸ್ಟನ್ ಪಿಚ್ನಲ್ಲಿ 90 ಓವರ್ಗಳವರೆಗೆ ಕ್ರೀಸ್ ಕಚ್ಚಿ ನಿಲ್ಲುವ ಸಾಧ್ಯತೆ ತುಂಬಾ ಕಡಿಮೆ. ಇದೇ ಕಾರಣದಿಂದಾಗಿ ಇಂದಿನ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳುವುದು ಸಹ ಡೌಟ್ ಎನ್ನಬಹುದು.
ಟೆಸ್ಟ್ ಕ್ರಿಕೆಟ್ ಇತಿಹಾಸದ ದಾಖಲೆ ಚೇಸಿಂಗ್ 418 ರನ್ಗಳು. 2003 ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 418 ರನ್ಗಳ ಗುರಿಯನ್ನು ಬೆನ್ನತ್ತುವ ಮೂಲಕ ವೆಸ್ಟ್ ಇಂಡೀಸ್ ಪಡೆ ಈ ವಿಶ್ವ ದಾಖಲೆ ನಿರ್ಮಿಸಿದೆ. ಇದುವೇ ಟೆಸ್ಟ್ ಕ್ರಿಕೆಟ್ನ ನಾಲ್ಕನೇ ಇನಿಂಗ್ಸ್ನ ಯಶಸ್ವಿ ಚೇಸಿಂಗ್.
ಇನ್ನು ಟೀಮ್ ಇಂಡಿಯಾ ವಿರುದ್ಧ 378 ರನ್ ಚೇಸ್ ಮಾಡಿದ್ದು ಇಂಗ್ಲೆಂಡ್ ತಂಡದ ಇದುವರೆಗಿನ ಯಶಸ್ವಿ ಚೇಸಿಂಗ್ ಆಗಿದೆ. ವಿಶೇಷ ಎಂದರೆ ಇಂತಹದೊಂದು ಚೇಸಿಂಗ್ಗೆ ಸಾಕ್ಷಿಯಾಗಿದ್ದು ಇದೇ ಎಡ್ಜ್ಬಾಸ್ಟನ್ ಮೈದಾನ.
ಇದನ್ನೂ ಓದಿ: Shubman Gill: ಗಿಲ್ ಗಿಲಕ್ಗೆ ಕಿಂಗ್ ಕೊಹ್ಲಿಯ ದಾಖಲೆಗಳು ಉಡೀಸ್..!
ಇದೀಗ ಇದೇ ಮೈದಾನದಲ್ಲಿ ಇಂಗ್ಲೆಂಡ್ ಮುಂದೆ 536 ರನ್ಗಳ ಕಠಿಣ ಸವಾಲಿದೆ. ಆದರೆ ಇತ್ತ ಟೀಮ್ ಇಂಡಿಯಾ ಮುಂದಿರುವುದು ಕೇವಲ 7 ವಿಕೆಟ್ಗಳ ಅಗತ್ಯತೆ. ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಭಾರತ ತಂಡದ ಗೆಲುವನ್ನು ನಿರೀಕ್ಷಿಸಬಹುದು.