ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿ ಫೆಬ್ರವರಿ 6 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕಾಗಿ ಟೀಮ್ ಇಂಡಿಯಾ ನಾಗ್ಪುರಕ್ಕೆ ಬಂದಿಳಿದಿದೆ. ಹೀಗೆ ಬಂದಿಳಿದ ಭಾರತ ತಂಡದ ಜತೆ ಥ್ರೋಡೌನ್ ಸ್ಪೆಷಲಿಸ್ಟ್ ರಘು ಕೂಡ ಇದ್ದರು. ಆದರೆ ರಘುವನ್ನು ಟೀಮ್ ಇಂಡಿಯಾ ಜತೆ ಹೊಟೇಲ್ಗೆ ತೆರಳಲು ನಾಗ್ಪುರ ಪೊಲೀಸರು ಅನುಮತಿಸಿರಲಿಲ್ಲ.
ಅಭಿಮಾನಿ ಯಾರೋ ಟೀಮ್ ಇಂಡಿಯಾ ಜೊತೆ ಹೋಗಲು ಯತ್ನಿಸುತ್ತಿದ್ದಾರೆ ಎಂದು ಭಾವಿಸಿ ಹೊಟೇಲ್ ಬಳಿಯಿದ್ದ ಭದ್ರತಾ ಪೊಲೀಸ್ ಸಿಬ್ಬಂದಿಗಳು ಮೊದಲಿಗೆ ರಘು ಅವರನ್ನು ತಡೆದಿದ್ದಾರೆ. ಈ ವೇಳೆ ಅವರು ತಾನು ಕೂಡ ಟೀಮ್ ಇಂಡಿಯಾ ಸದಸ್ಯ ಎಂದು ಪೊಲೀಸರಿಗೆ ಮನವರಿಕೆ ಮಾಡಲು ಯತ್ನಿಸಿದರು.
ಇದೇ ವೇಳೆ ಅಲ್ಲಿದ್ದ ಕೆಲವರು ರಘು ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ ಬಳಿಕ ಅವರನ್ನು ಹೊಟೇಲ್ ಒಳಗೆ ಬಿಟ್ಟಿದ್ದಾರೆ. ಇದೀಗ ಟೀಮ್ ಇಂಡಿಯಾ ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
GOAT Raghu of Indian cricket team was denied entry by Nagpur police 😂
Nagpur police guarding Rohit Sharma’s boys too strictly 😎 pic.twitter.com/iko9TTD0hP
— Ctrl C Ctrl Memes (@Ctrlmemes_) February 4, 2025
ಡಿ ರಾಘವೇಂದ್ರ ಅಲಿಯಾಸ್ ರಘು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮುಟದವರು. ಇದೀಗ ಟೀಮ್ ಇಂಡಿಯಾದ ಸೈಡ್ ಆರ್ಮ್ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ಬ್ಯಾಟಿಂಗ್ ಅಭ್ಯಾಸದ ವೇಳೆ ಅತ್ಯಂತ ವೇಗವಾಗಿ ಚೆಂಡೆಸೆಯುವ ಕೆಲಸ.
2012 ರಿಂದ ಟೀಮ್ ಇಂಡಿಯಾ ಥ್ರೋ ಸ್ಪೆಷಲಿಸ್ಟ್ ಆಗಿ ಕಾಣಿಸಿಕೊಂಡಿರುವ ರಘು, ಕಳೆದ 13 ವರ್ಷಗಳಿಂದ ಭಾರತೀಯ ಬ್ಯಾಟರ್ಗಳ ಪ್ರದರ್ಶನಕ್ಕಾಗಿ ತಮ್ಮ ರಕ್ತವನ್ನೇ ಬೆವರಾಗಿ ಪರಿವರ್ತಿಸಿದ್ದಾರೆ. ಅಲ್ಲದೆ ತಲೆಯ ಎತ್ತರಕ್ಕೆ ಪುಟಿದೆಳುವಂತೆ ಚೆಂಡುಗಳನ್ನು ಥ್ರೋ ಮಾಡಿ ಟೀಮ್ ಇಂಡಿಯಾ ಬ್ಯಾಟರ್ಗಳು ಲೀಲಾಜಾಲವಾಗಿ ಬ್ಯಾಟ್ ಬೀಸಲು ನೆರವಾಗಿದ್ದಾರೆ.
ಈ ಮೂಲಕ ಭಾರತ ತಂಡದ ಗೆಲುವಿನಲ್ಲಿ ತೆರೆಮರೆಯ ಕೊಡುಗೆ ನೀಡಿದ್ದಾರೆ. ಹೀಗೆ ತೆರೆಮರೆಯಲ್ಲೇ ಕೊಡುಗೆ ನೀಡುತ್ತಾ ಸಾಗಿರುವ ರಾಘವೇಂದ್ರ ಅವರ ಪರಿಚಯ ಹೆಚ್ಚಿನ ಜನರಿಗಿಲ್ಲ. ಇದೇ ಕಾರಣದಿಂದ ನಾಗ್ಪುರ ಪೊಲೀಸರು ಕೂಡ ಪ್ರಮಾದ ಎಸೆಗಿದ್ದಾರೆ.
ಥ್ರೋಡೌನ್ ಸ್ಪೆಷಲಿಸ್ಟ್ ಎಂದರೆ ಬ್ಯಾಟಿಂಗ್ ಅಭ್ಯಾಸದ ವೇಳೆ ಚೆಂಡೆಸೆಯುವುದು. ಇದಕ್ಕಾಗಿ ಸೈಡ್ ಆರ್ಮ್ ಸಾಧನವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಚೆಂಡನ್ನು ಥ್ರೋ ಮಾಡುವುದರಲ್ಲಿ ಕಷ್ಟ ಏನಿದೆ ಎಂದು ನಿಮಗೂ ಅನಿಸಬಹುದು. ಆದರೆ ಈ ಕೆಲಸ ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ಒಬ್ಬ ಕ್ರಿಕೆಟಿಗ ಹೇಗೆ ತಯಾರಾಗಬೇಕೊ, ಅದೇ ಮಾದರಿಯಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಕೂಡ ಫಿಟ್ ಆಗಿರಬೇಕು.
ಪ್ರತಿ ಕ್ರೀಡಾಪಟುಗಳಂತೆ ಜಿಮ್ನಲ್ಲಿ ಬೆವರಿಳಿಸಬೇಕಾಗುತ್ತದೆ. ತಮ್ಮ ಥ್ರೋನಲ್ಲಿ ವ್ಯತ್ಯಾಸಗಳಾದಂತೆ ಎಚ್ಚರವಹಿಸಬೇಕು. ಮುಖ್ಯವಾಗಿ ಒಂದೇ ಮಾದರಿಯಲ್ಲಿ ಥ್ರೋಗಳನ್ನು ಎಸೆಯುವ ಸಾಮರ್ಥ್ಯ ರೂಪಿಸಬೇಕು. ಉದಾಹರಣೆಗೆ ವಿರಾಟ್ ಕೊಹ್ಲಿಗೆ ಬೌನ್ಸರ್ ಥ್ರೋಗಳನ್ನು ಎಸೆಯಬೇಕಾಗಿ ಬರಬಹುದು, ಮತ್ತೊಂದೆಡೆ ರೋಹಿತ್ ಶರ್ಮಾ ಯಾರ್ಕರ್ ಥ್ರೋಗಳಿಗೆ ಡಿಮ್ಯಾಂಡ್ ಮಾಡಬಹುದು. ಇಲ್ಲಿ ಬ್ಯಾಟ್ಸ್ಮನ್ಗಳ ಆಗ್ರಹಕ್ಕೆ ಅನುಗುಣವಾಗಿ ಸತತವಾಗಿ ಚೆಂಡೆಸೆಯಬೇಕಾಗುತ್ತದೆ.
ಇದನ್ನೂ ಓದಿ: ಆ್ಯಂಡ್ರೆ ರಸೆಲ್ ಆರ್ಭಟಕ್ಕೆ ಮ್ಯಾಕ್ಸ್ವೆಲ್ ವಿಶ್ವ ದಾಖಲೆ ಉಡೀಸ್
ಹಾಗೆಯೇ ಎದುರಾಳಿ ತಂಡಗಳ ಬೌಲರ್ಗಳ ತಂತ್ರಗಳ ಬಗ್ಗೆ ಜ್ಞಾನ ಹೊಂದಿರಬೇಕು. ಪ್ರತಿ ಪಂದ್ಯಕ್ಕೂ ಮುನ್ನ ಎದುರಾಳಿ ಬೌಲರ್ಗಳನ್ನು ಸಾಮರ್ಥ್ಯವನ್ನು ವಿಶ್ಲೇಷಿಸಿ ಅದೇ ರೀತಿಯಲ್ಲಿ ಬ್ಯಾಟರ್ಗಳಿಗೆ ಚೆಂಡೆಸೆಯಬೇಕಾಗುತ್ತದೆ. ಈ ಮೂಲಕ ಟೀಮ್ ಇಂಡಿಯಾ ಬ್ಯಾಟರ್ಗಳನ್ನು ಸಜ್ಜಗೊಳಿಸುವ ಕೆಲಸ ಮಾಡುತ್ತಿದ್ದಾರೆ ಕನ್ನಡಿಗ ರಾಘವೇಂದ್ರ.