Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಡೌಟ್: ವರದಿ
Champions Trophy 2025: ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿ ಫೆಬ್ರವರಿ 6 ರಿಂದ ಶುರುವಾಗಲಿದೆ. ಮೂರು ಮ್ಯಾಚ್ಗಳ ಈ ಸರಣಿ ಮುಗಿಯೋದು ಫೆಬ್ರವರಿ 12 ರಂದು. ಇದಾದ ಬಳಿಕ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗಾಗಿ ತೆರಳಲಿದೆ. ಫೆಬ್ರವರಿ 19 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರು ತಂಡದೊಂದಿಗೆ ಪ್ರಯಾಣಿಸಲಿದ್ದಾರೆ.

ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕೊನೆ ಕ್ಷಣದಲ್ಲಿ ವರುಣ್ ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಆಯ್ಕೆಯೊಂದಿಗೆ ಬಿಸಿಸಿಐ ಪರಿಷ್ಕೃತ ಭಾರತ ಏಕದಿನ ತಂಡವನ್ನು ಪ್ರಕಟಿಸಿದೆ. ಆದರೆ ಈ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಎಲ್ಲೂ ಕೂಡ ಪ್ರಸ್ತಾಪಿಸಿಲ್ಲ.
ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯಕ್ಕೆ ಬುಮ್ರಾ ಅವರನ್ನು ಹೆಸರಿಸಲಾಗಿತ್ತು. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದ ಮೂಲಕ ಅವರು ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿತ್ತು.
ಆದರೀಗ ವರುಣ್ ಚಕ್ರವರ್ತಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಗೂ ಡೌಟ್:
ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯದಿದ್ದರೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಕಾಣಿಸಿಕೊಳ್ಳುವುದು ಅನುಮಾನ. ಏಕೆಂದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ.
ಅದಕ್ಕೂ ಮುನ್ನ ಬುಮ್ರಾ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಪರಿಗಣಿಸಲಾಗುತ್ತದೆ. ಪ್ರಸ್ತುತ ಮಾಹಿತಿ ಪ್ರಕಾರ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ನೆಸ್ ಸಾಧಿಸಲು ಮಾರ್ಚ್ ಮೊದಲ ವಾರದ ತನಕ ಕಾಯಬೇಕಾಗಿ ಬರಬಹುದು.
ಹೀಗಾದಲ್ಲಿ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿಯುವ ಸಾಧ್ಯತೆಯಿದೆ. ಇದರಿಂದ ಭಾರತ-ಪಾಕಿಸ್ತಾನ್ ನಡುವಣ ಪಂದ್ಯಕ್ಕೂ ಅವರು ಅಲಭ್ಯರಾಗಲಿದ್ದಾರೆ.
ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬುಮ್ರಾ ರಿಹ್ಯಾಬ್ನಲ್ಲಿ ತೊಡಗಿಸಿಕೊಂಡಿದ್ದು, ಶೀಘ್ರದಲ್ಲೇ ಅವರ ಫಿಟ್ನೆಸ್ ವರದಿ ಬಿಸಿಸಿಐ ಆಯ್ಕೆ ಸಮಿತಿ ಕೈ ಸೇರಲಿದೆ. ಇದಾದ ಬಳಿಕವಷ್ಟೇ ಬುಮ್ರಾ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಉಳಿಸಿಕೊಳ್ಳಬೇಕಾ ಅಥವಾ ಕೈ ಬಿಡಬೇಕಾ ಎಂಬುದು ನಿರ್ಧಾರವಾಗಲಿದೆ.
ಅಂದರೆ ಚಾಂಪಿಯನ್ಸ್ ಟ್ರೋಫಿ ನಡುವೆ ಅವರು ಫಿಟ್ನೆಸ್ ಸಾಧಿಸಲಿದ್ದಾರೆ ಎಂಬುದು ಕಂಡು ಬಂದರೆ, ಅವರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು. ಇದಾಗ್ಯೂ ಟೂರ್ನಿಯ ನಡುವೆ ಬೆನ್ನು ನೋವಿನ ಸಮಸ್ಯೆಯಿಂದ ಪಾರಾಗುವುದಿಲ್ಲ ಎಂದು ಕಂಡು ಬಂದರೆ ಬುಮ್ರಾ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಬ್ರಾವೊ ವಿಶ್ವ ದಾಖಲೆ ಬೌಲ್ಡ್: ಹೊಸ ಇತಿಹಾಸ ನಿರ್ಮಿಸಿದ ರಶೀದ್ ಖಾನ್
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
Published On - 9:30 am, Wed, 5 February 25