- Kannada News Photo gallery Cricket photos Rashid Khan breaks Dwayne Bravo's All Time T20 World Record
ಬ್ರಾವೊ ವಿಶ್ವ ದಾಖಲೆ ಬೌಲ್ಡ್: ಹೊಸ ಇತಿಹಾಸ ನಿರ್ಮಿಸಿದ ರಶೀದ್ ಖಾನ್
Rashid Khan Record: ಟಿ20 ಕ್ರಿಕೆಟ್ನಲ್ಲಿ ಕೇವಲ ಇಬ್ಬರು ಬೌಲರ್ಗಳು ಮಾತ್ರ 600+ ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬೌಲರ್ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ. ಇದೀಗ ಬ್ರಾವೊ ಅವರ ವಿಶ್ವ ದಾಖಲೆಯನ್ನು ಮುರಿದು ರಶೀದ್ ಖಾನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ದಾಖಲೆಯ ಸಂಪೂರ್ಣ ವಿವರ ಈ ಕೆಳಗಿನಂತಿದೆ...
Updated on: Feb 05, 2025 | 9:04 AM

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ವಿಶ್ವ ದಾಖಲೆ ರಶೀದ್ ಖಾನ್ ಪಾಲಾಗಿದೆ. ಸೌತ್ ಆಫ್ರಿಕಾದಲ್ಲಿ ನಡೆದ SA20 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 2 ವಿಕೆಟ್ ಕಬಳಿಸುವುದರೊಂದಿಗೆ ರಶೀದ್ ಖಾನ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್ ಟೌನ್ ತಂಡವು 20 ಓವರುಗಳಲ್ಲಿ 199 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾರ್ಲ್ ರಾಯಲ್ಸ್ 19.4 ಓವರುಗಳಲ್ಲಿ 160 ರನ್ ಗಳಿಸಿ ಆಲೌಟ್ ಆಗಿದೆ. ಎಂಐ ಕೇಪ್ ಟೌನ್ ಪರ ನಾಯಕ ರಶೀದ್ ಖಾನ್ 4 ಓವರುಗಳಲ್ಲಿ 33 ರನ್ ನೀಡಿ 2 ವಿಕೆಟ್ ಕಬಳಿಸಿದರು.

ಈ ಎರಡು ವಿಕೆಟ್ ಗಳೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆ ರಶೀದ್ ಖಾನ್ ಪಾಲಾಯಿತು. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ವೆಸ್ಟ್ ಇಂಡೀಸ್ನ ಆಲ್ರೌಂಡರ್ ಡ್ವೇನ್ ಬ್ರಾವೊ ಹೆಸರಿನಲ್ಲಿತ್ತು.

2006 ರಿಂದ 2024 ರವರೆಗೆ 582 ಟಿ20 ಪಂದ್ಯಗಳನ್ನಾಡಿರುವ ಡ್ವೇನ್ ಬ್ರಾವೊ 546 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 11183 ಎಸೆತಗಳನ್ನು ಎಸೆದಿರುವ ಅವರು ಒಟ್ಟು 631 ವಿಕೆಟ್ ಪಡೆದಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಮುರಿದಿದ್ದಾರೆ.

2015 ರಿಂದ ಟಿ20 ಪಂದ್ಯಗಳನ್ನಾಡುತ್ತಿರುವ ರಶೀದ್ ಖಾನ್ ಈವರೆಗೆ 457 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 10564 ಎಸೆತಗಳನ್ನು ಎಸೆದಿರುವ ಅವರು ಒಟ್ಟು 633 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿದೆ. 2009 ರಿಂದ ಟಿ20 ಪಂದ್ಯಗಳನ್ನಾಡುತ್ತಿರುವ ಚಹಲ್ ಈವರೆಗೆ 309 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಈ ವೇಳೆ 6695 ಎಸೆತಗಳಲ್ಲಿ 364 ವಿಕೆಟ್ ಪಡೆದು ಈ ದಾಖಲೆ ನಿರ್ಮಿಸಿದ್ದಾರೆ.
