ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಡಬಲ್ ಶಾಕ್
Champions Trophy 2025: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 9 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರರು ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ.

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ಆಸೀಸ್ ಪಡೆಯ ನಾಯಕ ಪ್ಯಾಟ್ ಕಮಿನ್ಸ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಇದರ ಜೊತೆಗೆ ಜೋಶ್ ಹ್ಯಾಝಲ್‌ವುಡ್ ಕೂಡ ಈ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮ ವರದಿ ಮಾಡಿದೆ.
ಕೋಡ್ ಸ್ಪೋರ್ಟ್ಸ್ ವರದಿ ಪ್ರಕಾರ, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹ್ಯಾಝಲ್‌ವುಡ್ ಕಾಣಿಸಿಕೊಳ್ಳುವುದಿಲ್ಲ. ಪಾದದ ನೋವಿನಿಂದ ಬಳಲುತ್ತಿರುವ ಕಮಿನ್ಸ್ ಐಸಿಸಿ ಟೂರ್ನಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ದೃಢಪಡಿಸಿದ್ದಾರೆ.
ಇನ್ನು ಕಣಕಾಲಿನ ಹಿ೦ಭಾಗದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜೋಶ್ ಹ್ಯಾಝಲ್‌ವುಡ್ ಕೂಡ ಸಂಪೂರ್ಣ ಫಿಟ್ನೆಸ್ ಸಾಧಿಸಿಲ್ಲ. ಅಲ್ಲದೆ ಅವರು ಸಹ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಕೋಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ಇಬ್ಬರು ವೇಗಿಗಳು ಕಣಕ್ಕಿಳಿಯುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಅದರಲ್ಲೂ ನಾಯಕ ಪ್ಯಾಟ್ ಕಮಿನ್ಸ್ ಹೊರಗುಳಿದರೆ ಆಸ್ಟ್ರೇಲಿಯಾ ಬದಲಿ ಆಟಗಾರನೊಂದಿಗೆ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹೊಸ ನಾಯಕ ಮುನ್ನಡೆಸುವುದನ್ನು ಎದುರು ನೋಡಬಹುದು.
ಆಸ್ಟ್ರೇಲಿಯಾಗೆ ಹಿನ್ನಡೆ:
ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡವು ಎಲ್ಲಾ ಟೂರ್ನಿಗಳಲ್ಲೂ ಯಶಸ್ಸು ಸಾಧಿಸಿದೆ. ಅದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಗಿರಬಹುದು ಅಥವಾ ಏಕದಿನ ವಿಶ್ವಕಪ್ ಆಗಿರಬಹುದು. ಇದಲ್ಲದೆ ಇತ್ತೀಚೆಗೆ ಮುಗಿದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಗಿರಬಹುದು.
ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಗೆ ಪ್ಯಾಟ್ ಕಮಿನ್ಸ್ ಅಲಭ್ಯರಾಗುತ್ತಿರುವುದು ಆಸ್ಟ್ರೇಲಿಯಾ ಪಾಲಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಲಿದೆ.
ಇದನ್ನೂ ಓದಿ: ಬ್ರಾವೊ ವಿಶ್ವ ದಾಖಲೆ ಬೌಲ್ಡ್: ಹೊಸ ಇತಿಹಾಸ ನಿರ್ಮಿಸಿದ ರಶೀದ್ ಖಾನ್