
ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲೋದು ನಾವು. ಐದನೇ ದಿನದಾಟವನ್ನು ಕೇವಲ ಒಂದು ಗಂಟೆಯೊಳಗೆ ಮುಗಿಸುತ್ತೇವೆ. ಹೀಗಂದಿರುವುದು ಮತ್ಯಾರೂ ಅಲ್ಲ. ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಮಾರ್ಕಸ್ ಟ್ರೆಸ್ಕೊಥಿಕ್. ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಐದನೇ ದಿನದಾಟಕ್ಕೆ ಕಾಲಿಟ್ಟಿದೆ. ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾ ಮುಂದೆ 135 ರನ್ಗಳ ಗುರಿ ಇದೆ. ಅತ್ತ ಇಂಗ್ಲೆಂಡ್ ತಂಡವು ಈ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ 6 ವಿಕೆಟ್ಗಳನ್ನು ಕಬಳಿಸಬೇಕು.
ಈ ಆರು ವಿಕೆಟ್ಗಳನ್ನು ನಾವು ಐದನೇ ದಿನದಾಟದ ಮೊದಲ ಒಂದು ಗಂಟೆಯೊಳಗೆ ಕಬಳಿಸಲಿದ್ದೇವೆ ಎಂದು ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಮಾರ್ಕಸ್ ಟ್ರೆಸ್ಕೊಥಿಕ್ ಹೇಳಿದ್ದಾರೆ. ನಾಲ್ಕನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟ್ರೆಸ್ಕೊಥಿಕ್, ಕೊನೆಯ ದಿನದಾಟವು ಬೌಲರ್ಗಳಿಗೆ ಸಹಕಾರಿಯಾಗಲಿದೆ. ಅದರಂತೆ ಸೋಮವಾರವು ಲಾರ್ಡ್ಸ್ ಪಿಚ್ನಲ್ಲಿ ಬೌನ್ಸ್ ಕಂಡು ಬರುವುದು ಖಚಿತ.
ನಮ್ಮಲ್ಲಿ ಬೌನ್ಸರ್ ಎಸೆಯಬಲ್ಲ ಬೌಲರ್ಗಳಿರುವುದರಿಂದ ಇದರ ಸಂಪೂರ್ಣ ಲಾಭ ಪಡೆಯಲಿದ್ದಾರೆ. ಈ ಮೂಲಕ ಮೊದಲ ಒಂದು ಗಂಟೆಯೊಳಗೆ 6 ವಿಕೆಟ್ಗಳನ್ನು ಕಬಳಿಸುವ ವಿಶ್ವಾಸವಿದೆ. ಅಲ್ಲದೆ ಐದನೇ ದಿನದಾಟದ ಮೊದಲ ಸೆಷನ್ನಲ್ಲೇ ಪಂದ್ಯವನ್ನು ಮುಗಿಸಲಿದ್ದೇವೆ ಎಂದು ಮಾರ್ಕಸ್ ಟ್ರೆಸ್ಕೊಥಿಕ್ ಹೇಳಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೋ ರೂಟ್ 104 ರನ್ಗಳ ಭರ್ಜರಿ ಶತಕ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 387 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿ ಮಿಂಚಿದರು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100) ಭರ್ಜರಿ ಶತಕ ಬಾರಿಸಿದರು. ಈ ಶತಕದ ಸಹಾಯದೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 387 ರನ್ಗಳಿಸಲು ಶಕ್ತರಾದರು.
ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಜೋ ರೂಟ್ 40 ರನ್ ಗಳಿಸಿದರೆ, ಬೆನ್ ಸ್ಟೋಕ್ಸ್ 33 ರನ್ ಬಾರಿಸಿದರು. ಇನ್ನುಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 192 ರನ್ಗಳಿ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಇದೀಗ 193 ರನ್ಗಳ ಗುರಿ ಬೆನ್ನತ್ತುತ್ತಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಶಸ್ವಿ ಜೈಸ್ವಾಲ್ (0), ಕರುಣ್ ನಾಯರ್ (14), ಶುಭ್ಮನ್ ಗಿಲ್ (6) ಹಾಗೂ ಆಕಾಶ್ ದೀಪ್ (1) ವಿಕೆಟ್ ಕಳೆದುಕೊಂಡು 58 ರನ್ ಕಲೆಹಾಕಿದೆ.
ಇದನ್ನೂ ಓದಿ: ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್ ಮುಡಿಗೆ 13ನೇ ಟ್ರೋಫಿ
ಸದ್ಯ ಕ್ರೀಸ್ನಲ್ಲಿ 33 ರನ್ಗಳಿಸಿರುವ ಕೆಎಲ್ ರಾಹುಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ರಿಷಭ್ ಪಂತ್ ಜೊತೆ ಐದನೇ ದಿನದಾಟದಲ್ಲಿ ಇನಿಂಗ್ಸ್ ಮುಂದುವರೆಸಲಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 135 ರನ್ಗಳಿಸಿದರೆ ಲಾರ್ಡ್ಸ್ ಮೈದಾನದಲ್ಲಿ ಯತಿಹಾಸಿಕ ಗೆಲುವವನ್ನು ತನ್ನದಾಗಿಸಿಕೊಳ್ಳಬಹುದು.