ತನ್ನ ಬದುಕನ್ನು ಬದಲಿಸಿದ ಘಳಿಗೆಯನ್ನು ನೆನೆದ ರಿಂಕು ಸಿಂಗ್; ವಿಡಿಯೋ ನೋಡಿ

|

Updated on: Aug 23, 2023 | 1:32 PM

Rinku Singh: ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ರಿಂಕು ತಮ್ಮದೇ ಶೈಲಿಯಲ್ಲಿ ಬ್ಯಾಟ್ ಬೀಸಿ, ಕೇವಲ 21 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 38 ರನ್ ಚಚ್ಚಿದ್ದರು. ಪಂದ್ಯದ ನಂತರ, ತಮ್ಮ ಸಹ ಆಟಗಾರ ರವಿ ಬಿಷ್ಣೋಯ್ ಅವರೊಂದಿಗೆ ಮಾತನಾಡಿರುವ ರಿಂಕು ಆ ಐದು ಸಿಕ್ಸರ್‌ಗಳು ತಮ್ಮ ಜೀವನವನ್ನು ಬದಲಾಯಿಸಿದವು ಎಂದಿದ್ದಾರೆ.

ತನ್ನ ಬದುಕನ್ನು ಬದಲಿಸಿದ ಘಳಿಗೆಯನ್ನು ನೆನೆದ ರಿಂಕು ಸಿಂಗ್; ವಿಡಿಯೋ ನೋಡಿ
ರಿಂಕು ಸಿಂಗ್
Follow us on

ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಟೀಂ ಇಂಡಿಯಾಕ್ಕೆ (India vs Ireland) ಪದಾರ್ಪಣೆ ಮಾಡಿರುವ ಗೇಮ್ ಫಿನಿಶರ್ ಖ್ಯಾತಿಯ ರಿಂಕು ಸಿಂಗ್ (Rinku Singh), ತಮ್ಮ ಬದುಕನ್ನು ಬದಲಿಸಿದ ಅದೊಂದು ಘಟನೆಯನ್ನು ನೆನೆದಿದ್ದಾರೆ. ವಾಸ್ತವವಾಗಿ ಐರ್ಲೆಂಡ್ ವಿರುದ್ಧ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದ ರಿಂಕುಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡ ರಿಂಕು 38 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿ, ಬ್ಯಾಟ್ ಬೀಸಿದ ಮೊದಲ ಪಂದ್ಯದಲ್ಲಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.

ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ರಿಂಕು ತಮ್ಮದೇ ಶೈಲಿಯಲ್ಲಿ ಬ್ಯಾಟ್ ಬೀಸಿ, ಕೇವಲ 21 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 38 ರನ್ ಚಚ್ಚಿದ್ದರು. ಪಂದ್ಯದ ನಂತರ, ತಮ್ಮ ಸಹ ಆಟಗಾರ ರವಿ ಬಿಷ್ಣೋಯ್ ಅವರೊಂದಿಗೆ ಮಾತನಾಡಿರುವ ರಿಂಕು ಆ ಐದು ಸಿಕ್ಸರ್‌ಗಳು ತಮ್ಮ ಜೀವನವನ್ನು ಬದಲಾಯಿಸಿದವು ಎಂದಿದ್ದಾರೆ.

IND vs IRE: ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ರಿಂಕು ಸಿಂಗ್ ಹೇಳಿದ್ದೇನು ಗೊತ್ತಾ?

ಕೊನೆಯ ಓವರ್‌ನಲ್ಲಿ 28 ರನ್‌

ವಾಸ್ತವವಾಗಿ ಐಪಿಎಲ್-2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದಿದ್ದ ರಿಂಕು ಸಿಂಗ್, ಅದೊಂದು ಪಂದ್ಯದಲ್ಲಿ ಕೊನೆಯ ಓವರ್​ನ ಮೊದಲ ಐದು ಎಸೆತಗಳಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿ ತಂಡಕ್ಕೆ ರೋಚಕ ತಂದುಕೊಟ್ಟಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಆ ಪಂದ್ಯದಲ್ಲಿ ಕೊಲ್ಕತ್ತಾಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ 28 ರನ್‌ಗಳ ಅಗತ್ಯವಿತ್ತು. ಗುಜರಾತ್ ಪರ ವೇಗಿ ಯಶ್ ದಯಾಲ್‌ ದಾಳಿಗಿಳಿದಿದ್ದರು.

ಮೊದಲ ಐದೂ ಎಸೆತಗಳಲ್ಲಿ ಸತತ ಐದು ಸಿಕ್ಸರ್‌

ಆ ಪಂದ್ಯ ಬಾಗಶಃ ಗುಜರಾತ್ ಪರ ವಾಲಿತ್ತು. ಎಲ್ಲರೂ ಈ ಪಂದ್ಯದಲ್ಲಿ ಗುಜರಾತ್​ಗೆ ಗೆಲುವು ಖಚಿತ ಎಂದೇ ಭಾವಿಸಿದ್ದರು. ಆದರೆ ಕೊನೆಯ ಓವರ್​ನಲ್ಲಿ ಕೆಕೆಆರ್ ಪರ ಮ್ಯಾಜಿಕ್ ಮಾಡಿದ್ದ ರಿಂಕು. ಓವರ್​ನ ಮೊದಲ ಐದೂ ಎಸೆತಗಳಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇದೀಗ ಆ ಘಟನೆಯನ್ನು ನೆನೆದಿರುವ ರಿಂಕು ಅಂದಿನಿಂದ ತನ್ನ ಜೀವನ ಬದಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಇನ್ನು ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ರಿಂಕು ಬ್ಯಾಟಿಂಗ್​ಗೆ ಇಳಿದಾಗ ಇಡೀ ಮೈದಾನ ರಿಂಕು ರಿಂಕು ಎಂಬ ಘೋಷಣೆಯಿಂದ ತುಂಬಿ ಹೋಗಿತ್ತು. ಈ ಬಗ್ಗೆ ರವಿ ಬಿಷ್ಣೋಯಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಂಕು, ‘ಐಪಿಎಲ್‌ನಲ್ಲಿ ನಾನು ಬಾರಿಸಿದ ಐದು ಸಿಕ್ಸರ್‌ಗಳಿಂದಾಗಿ ಇದೆಲ್ಲ ಆಗುತ್ತಿದೆ. ಆ ಐದು ಸಿಕ್ಸರ್‌ಗಳಿಂದಾಗಿ ತನ್ನ ಜೀವನವೇ ಬದಲಾಗಿದೆ. ಮೈದಾನದಲ್ಲಿ ಜನರು ತಮ್ಮ ಹೆಸರನ್ನು ಕೂಗಿದರೆ ಅದು ನನಗೆ ತುಂಬಾ ಇಷ್ಟವಾಗುತ್ತದೆ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ