ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 235 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಡೇರೆಲ್ ಮಿಚೆಲ್ ಅತ್ಯಧಿಕ 82 ರನ್ಗಳ ಇನ್ನಿಂಗ್ಸ್ ಆಡಿದರೆ, ವಿಲ್ ಯುಂಗ್ 71 ರನ್ಗಳ ಕಾಣಿಕೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ಮತ್ತ್ಯಾರಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜಾ ಅತ್ಯಧಿಕ 5 ವಿಕೆಟ್ ಉರುಳಿಸಿದರೆ, ಅವರಿಗೆ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದರು. ಉಳಿದ 1 ವಿಕೆಟ್ ಆಕಾಶ್ ದೀಪ್ ಪಾಲಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕಳಪೆ ಆರಂಭ ಪಡೆದಿತ್ತು. ತಂಡದ ಮೊತ್ತ 15ರನ್ಗಳಿರುವಾಗ ಆಕಾಶ್ ದೀಪ್ ಬೌಲಿಂಗ್‌ನಲ್ಲಿ ಆರಂಭಿಕ ಡೆವೊನ್ ಕಾನ್ವೆಗೆ ಎಲ್‌ಬಿಡಬ್ಲ್ಯೂ ಆದರು. ಇದಾದ ಬಳಿಕ ನಾಯಕ ಟಾಮ್ ಲೇಥಮ್, ವಿಲ್ ಯಂಗ್ ಜೊತೆಗೂಡಿ 44 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್, ನಾಯಕ ಟಾಮ್ ಲೇಥಮ್ರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ಇದಾದ ಬಳಿಕ ಬಂದ ಮೊದಲೆರಡು ಟೆಸ್ಟ್ಗಳ ಹೀರೋ ರಚಿನ್ ರವೀಂದ್ರ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದೆ ಸುಂದರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಸುಂದರ್ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ ಮೂರನೇ ಬಾರಿಗೆ ರಚಿನ್ ಅವರನ್ನು ಔಟ್ ಮಾಡಿದರು.
ರಚಿನ್ ಔಟಾದ ನಂತರ, ಯಂಗ್ ನಾಲ್ಕನೇ ವಿಕೆಟ್‌ಗೆ ಡ್ಯಾರಿಲ್ ಮಿಚೆಲ್ ಜೊತೆ 87 ರನ್ ಜೊತೆಯಾಟ ನಡೆಸಿದರು. ಈ ಸಮಯದಲ್ಲಿ, ಯಂಗ್ ತಮ್ಮ ಟೆಸ್ಟ್ ವೃತ್ತಿಜೀವನದ ಎಂಟನೇ ಅರ್ಧಶತಕವನ್ನು ಪೂರೈಸಿದರು. ಈ ಜೊತೆಯಾಟವನ್ನು ರವೀಂದ್ರ ಜಡೇಜಾ ಮುರಿದರು. ಕಿವೀಸ್ ಇನ್ನಿಂಗ್ಸ್‌ನ 44ನೇ ಓವರ್‌ನಲ್ಲಿ ಜಡೇಜಾ ಎರಡು ವಿಕೆಟ್ ಪಡೆದರು. ಮೊದಲು ಯಂಗ್ ಅವರ ವಿಕೆಟ್ ಉರುಳಿಸಿದ ಜಡೇಜಾ, ಆ ಬಳಿಕ ಬಂದ ಟಾಮ್ ಬ್ಲಂಡೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಯಂಗ್ 71 ರನ್ಗಳ ಇನಿಂಗ್ಸ್ ಆಡಿದರೆ, ಬ್ಲಂಡೆಲ್ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಇದಾದ ನಂತರ ಜಡೇಜಾ, ಗ್ಲೆನ್ ಫಿಲಿಪ್ಸ್ ಅವರನ್ನು ಸಹ ಕ್ಲೀನ್ ಬೌಲ್ಡ್ ಮಾಡಿದರು.
ಫಿಲಿಪ್ಸ್ ಅವರನ್ನು 17 ರನ್‌ಗಳಿಗೆ ಪೆವಿಲಿಯನ್ಗಟ್ಟಿದ ಜಡೇಜಾ, ಈ ಇನ್ನಿಂಗ್ಸ್‌ನಲ್ಲಿ ಎರಡನೇ ಬಾರಿಗೆ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು. ಕಿವೀಸ್ ಇನ್ನಿಂಗ್ಸ್‌ನ 61 ನೇ ಓವರ್‌ನಲ್ಲಿ ಮೊದಲು ಇಶ್ ಸೋಧಿ ವಿಕೆಟ್ ಉರುಳಿಸಿದ ಜಡೇಜಾ, ಅದೇ ಓವರ್‌ನಲ್ಲಿ ಮ್ಯಾಟ್ ಹೆನ್ರಿಯನ್ನು ಪೆವಿಲಿಯನ್‌ಗೆ ಕಳುಹಿಸಿದರು. ಸೋಧಿ ಎಲ್ಬಿಡಬ್ಲ್ಯು ಔಟಾದರೆ, ಹೆನ್ರಿ ಕ್ಲೀನ್ ಬೌಲ್ಡ್ ಆದರು. ಸೋಧಿ ಏಳು ರನ್ ಗಳಿಸಿದರೆ, ಹೆನ್ರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ವಾಷಿಂಗ್ಟನ್ ಸುಂದರ್ ಡ್ಯಾರಿಲ್ ಮಿಚೆಲ್ (82) ಮತ್ತು ಅಜಾಜ್ ಪಟೇಲ್ (7) ಅವರನ್ನು ಔಟ್ ಮಾಡಿ ನ್ಯೂಜಿಲೆಂಡ್ ಇನ್ನಿಂಗ್ಸ್ ಅನ್ನು 235 ರನ್‌ಗಳಿಗೆ ಅಂತ್ಯಗೊಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Fri, 1 November 24