ಕೋಟ್ಯಾಂತರ ಭಾರತೀಯರ ಅದೊಂದು ಕನಸು ನನಸಾಗಿದೆ. ಬರೋಬ್ಬರಿ 12 ವರ್ಷಗಳಿಂದ ಟೀಂ ಇಂಡಿಯಾ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಸನಿಹವಾಗಿದೆ. ಟೀಂ ಇಂಡಿಯಾ ವಿಶ್ವವನ್ನು ಗೆಲ್ಲಲು ಕೇವಲ ಇನ್ನೊಂದು ಹೆಜ್ಜೆ ಹಿಂದೆ ಇದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium in Mumbai) ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India Vs New Zealand) ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆಯನ್ನು 70 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ 2023 ರ ಏಕದಿನ ವಿಶ್ವಕಪ್ನ ಫೈನಲ್ಗೇರಿದೆ. ಈ ಮೂಲಕ 2019ರ ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಸೆಮಿಫೈನಲ್ನಲ್ಲಿ ಸೋಲಿಸಿ ಟೂರ್ನಿಯಿಂದ ಹೊರಹಾಕಿದ್ದ ನ್ಯೂಜಿಲೆಂಡ್ಗೆ ರೋಹಿತ್ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ಶತಕದ ನೆರವಿನಿಂದ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 398 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಡೇರೆಲ್ ಮಿಚೆಲ್ ಅವರ ಏಕಾಂಗಿ ಹೋರಾಟದ ಶತಕದ ಹೊರತಾಗಿಯೂ 48.5 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 327 ರನ್ಗಳಿಸಲಷ್ಟೇ ಶಕ್ತವಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅರ್ಧಶತಕದ ಜೊತೆಯಾಟದೊಂದಿಗೆ ಉತ್ತಮ ಆರಂಭ ನೀಡಿದರು. ಈ ವೇಳೆ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ವಿರಾಟ್ ಕೊಹ್ಲಿ ಜೊತೆಯಾದ ಶುಭ್ಮನ್ ಗಿಲ್ ಶತಕದ ಜೊತೆಯಾಟವನ್ನು ನಡೆಸಿದರು. ಈ ಹಂತದಲ್ಲಿ ಇಂಜುರಿಗೆ ತುತ್ತಾದ ಗಿಲ್ ಆಟದ ಮಧ್ಯದಲ್ಲೇ ಮೈದಾನ ತೊರೆದರು. ಅಂತಿಮವಾಗಿ ಅವರು ಅಜೇಯ 80 ರನ್ ಸಿಡಿದರು.
😲 Mohammed Shami – 7/57
👑 Virat Kohli – 117
💥 Shreyas Iyer – 105India are through to their first men’s @cricketworldcup final in 12 years 🎉
Read the full match report 📝⬇️#CWC23 #INDvNZ https://t.co/ZNSOT2Bsng
— ICC (@ICC) November 15, 2023
ಶುಭ್ಮನ್ ಗಿಲ್ ನಂತರ ಕಿಂಗ್ ಕೊಹ್ಲಿ ಜೊತೆಯಾದ ಲೋಕಲ್ ಬಾಯ್ ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇಬ್ಬರು ಶತಕದ ಜೊತೆಯಾಟ ನಡೆಸಿದಲ್ಲದೆ, ವೈಯಕ್ತಿಕವಾಗಿ ಶತಕ ಸಿಡಿಸಿ ಮಿಂಚಿದರು. ಈ ವೇಳೆ ವಿರಾಟ್ ಕೊಹ್ಲಿ 113 ಎಸೆತಗಳಲ್ಲಿ 117 ರನ್ ಸಿಡಿಸಿ ಏಕದಿನ ಕ್ರಿಕೆಟ್ನಲ್ಲಿ 50ನೇ ಶತಕವನ್ನು ಪೂರ್ಣಗೊಳಿಸಿದರೆ, ಮುಂಬೈಕರ್ ಶ್ರೇಯಸ್ ಅಯ್ಯರ್ 105 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅಜೇಯ 39 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 1 ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 3 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದರು.
ಭಾರತ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡ 40 ರನ್ ದಾಖಲಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಆರಂಭಿಕ ಆಘಾತದ ಬಳಿಕ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡ್ಯಾರೆಲ್ ಮಿಚೆಲ್ ಶತಕದ ಜೊತೆಯಾಟ ಹಂಚಿಕೊಂಡರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಮಿಚೆಲ್ 134 ರನ್ ಸಿಡಿಸಿದರೆ, ನಾಯಕ ಕೇನ್ ವಿಲಿಯಮ್ಸನ್ 69 ರನ್ಗಳ ಕೊಡುಗೆ ನೀಡಿದರು. ಗ್ಲೆನ್ ಫಿಲಿಪ್ಸ್ 41 ರನ್ ಗಳಿಸಿ ಔಟಾದರೆ, ಆರಂಭಿಕ ಜೋಡಿ ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಇಬ್ಬರೂ ತಲಾ 13 ರನ್ ಗಳಿಸಿದರು. ಟಾಮ್ ಲಾಥ್‌ಮನ್‌ಗೆ ಖಾತೆ ಕೂಡ ತೆರೆಯಲು ಸಾಧ್ಯವಾಗಲಿಲ್ಲ. ಕಿವೀಸ್ ಬಾಲಂಗೋಚಿಗಳು ಭಾರತದ ದಾಳಿಯ ಮುಂದೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಮೊಹಮ್ಮದ್ ಶಮಿ ಟೀಂ ಇಂಡಿಯಾ ಪರ ಅತಿ ಹೆಚ್ಚು 6 ವಿಕೆಟ್ ಕಬಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:27 pm, Wed, 15 November 23