ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಫೈನಲ್ಗೆ ಲಗ್ಗೆಯಿಟ್ಟಿದೆ. ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 70 ರನ್ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಶತಕದ ನೆರವಿನಿಂದ 397 ರನ್ ಕಲೆಹಾಕಿತು. ನ್ಯೂಝಿಲೆಂಡ್ ಕಠಿಣ ಪೈಪೋಟಿ ನೀಡಿದರೂ 327 ರನ್ಗಳಿಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 7 ವಿಕೆಟ್ ಕಿತ್ತು ಮಿಂಚಿದರು.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನು ಈ ಮೈದಾನದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ, ಇಲ್ಲಿ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಆದಷ್ಟು ಬೇಗ ಕೆಲಸವನ್ನು ಪೂರ್ಣಗೊಳಿಸಬೇಕು ಎಂಬುದು ಗೊತ್ತಿತ್ತು ಎಂದು ಹೇಳಿದ್ದಾರೆ.
ನಮ್ಮ ಮೇಲೆ ಒತ್ತಡವಿದೆ ಎಂದು ನಮಗೆ ತಿಳಿದಿತ್ತು. ನಮ್ಮ ಫೀಲ್ಡಿಂಗ್ ಕೂಡ ಇಂದು ಚೆನ್ನಾಗಿರಲಿಲ್ಲ. ಇಂತಹ ವಿಷಯಗಳು ಸಂಭವಿಸುತ್ತವೆ. ಬೇಕಾಗಿರುವ ರನ್ರೇಟ್ 9 ಕ್ಕಿಂತ ಹೆಚ್ಚಿರುವಾಗ, ನೀವು ಅವಕಾಶಗಳನ್ನು ತೆಗೆದುಕೊಳ್ಳಬೇಕು. ಎದುರಾಳಿ ನಮಗೆ ಕೆಲ ಅವಕಾಶಗಳನ್ನು ನೀಡಿದರು, ಆದರೆ ನಾವು ಅವುಗಳನ್ನು ತೆಗೆದುಕೊಳ್ಳಲಿಲ್ಲ- ರೋಹಿತ್ ಶರ್ಮಾ.
ಮಿಚೆಲ್ ಮತ್ತು ವಿಲಿಯಮ್ಸನ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಆದರೆ, ನಾವು ಒತ್ತಡಕ್ಕೆ ಒಳಗಾಗದೆ ಕಾಮ್ ಆಗಿದ್ದೆವು. ಅದು ಆಟದ ಸ್ವರೂಪ. ನಾವು ಆ ಸಂದರ್ಭ ಎಲ್ಲ ಪ್ರಯತ್ನ ಮಾಡಿದೆವು. ಶಮಿ ಅದ್ಭುತ ಪ್ರದರ್ಶನ ನೀಡಿ ಬ್ರೇಕ್ ತಂದುಕೊಟ್ಟರು. ಈ ಟೂರ್ನಿಯಲ್ಲಿ ಅಯ್ಯರ್ ಮಾಡಿರುವ ಸಾಧನೆಗೆ ತುಂಬಾ ಸಂತಸಗೊಂಡಿದ್ದೇನೆ. ಗಿಲ್ ಬ್ಯಾಟಿಂಗ್ ಕೂಡ ಉತ್ತಮವಾಗಿತ್ತು ಎಂದು ರೋಹಿತ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಎಂದಿನಂತೆ ಅದ್ಭುತವಾಗಿ, ತಮ್ಮ ಟ್ರೇಡ್‌ಮಾರ್ಕ್ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಒಟ್ಟಿನಲ್ಲಿ ನಮ್ಮ ಬ್ಯಾಟಿಂಗ್ ಅಮೋಘವಾಗಿತ್ತು. ಇಂದು, ನಾವು ಯಾವುದೇ ಒತ್ತಡಲ್ಲಿ ಇರಲಿಲ್ಲ ಎಂದು ನಾನು ಹೇಳುವುದಿಲ್ಲ. ನಮ್ಮ ಹುಡುಗರು ಸಾಕಷ್ಟು ಕೆಲಸ ಮಾಡಿದ್ದಾರೆ. ಮೊದಲ ಒಂಬತ್ತು ಪಂದ್ಯಗಳಲ್ಲಿ ನಾವು ಹೇಗೆ ಆಡಿದ್ದೆವೊ ಅದೇರೀತಿ ಇಂದುಕೂಡ ಆಡುವುದು ನಮ್ಮ ಯೋಜನೆ ಆಗಿತ್ತು ಎಂಬುದು ರೋಹಿತ್ ಶರ್ಮಾ ಮಾತು.
ಈ ಗೆಲುವಿನ ಮೂಲಕ ಟೀಮ್ ಇಂಡಿಯಾ 2019ರ ವಿಶ್ವಕಪ್ ಸೆಮಿಫೈನಲ್ ಸೋಲಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಇದೀಗ ಫೈನಲ್ಗೇರಿರುವ ರೋಹಿತ್ ಪಡೆ ನವೆಂಬರ್ 19 ಭಾನುವಾರದಂದು ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇಂದು ಆಫ್ರಿಕಾ-ಆಸೀಸ್ ನಡುವೆ ದ್ವಿತೀಯ ಸೆಮಿಫೈನಲ್ ನಡೆಯಲಿದೆ.
Published On - 7:19 am, Thu, 16 November 23