IND vs NZ: ಎಲ್ಲವೂ ಅಂದುಕೊಂಡಂತೆ ಸಾಗುತ್ತಿದ್ದ ಸಮಯದಲ್ಲಿ ಕೈಕೊಟ್ಟ ರಾಹುಲ್; ತಾಳ್ಮೆ ಕಳೆದುಕೊಂಡ ನೆಟ್ಟಿಗರು

|

Updated on: Oct 19, 2024 | 7:13 PM

KL Rahul: ಬೆಂಗಳೂರು ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕೆಎಲ್ ರಾಹುಲ್ ರನ್ ಕಲೆಹಾಕುವಲ್ಲಿ ಎಡವಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ರಾಹುಲ್ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದು, ಅವರನ್ನು ತಂಡದಿಂದ ಕೈಬಿಡಬೇಕೆಂದು ಬಿಸಿಸಿಐ ಬಳಿ ಆಗ್ರಹಿಸಿದ್ದಾರೆ.

IND vs NZ: ಎಲ್ಲವೂ ಅಂದುಕೊಂಡಂತೆ ಸಾಗುತ್ತಿದ್ದ ಸಮಯದಲ್ಲಿ ಕೈಕೊಟ್ಟ ರಾಹುಲ್; ತಾಳ್ಮೆ ಕಳೆದುಕೊಂಡ ನೆಟ್ಟಿಗರು
ಕೆಎಲ್ ರಾಹುಲ್
Follow us on

ಬೆಂಗಳೂರು ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕೆಎಲ್ ರಾಹುಲ್ ರನ್ ಕಲೆಹಾಕುವಲ್ಲಿ ಎಡವಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾದರು. ತವರು ಮೈದಾನದಲ್ಲಿ ಪಂದ್ಯವನ್ನಾಡುತ್ತಿದ್ದ ರಾಹುಲ್ ಮೇಲೆ ಟೀಂ ಇಂಡಿಯಾ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ಅಲ್ಲದೆ ತಂಡ ಸಂಕಷ್ಟದಲ್ಲಿರುವಾಗ ರಾಹುಲ್ ಬಿಗ್ ಇನ್ನಿಂಗ್ಸ್ ಆಡುವ ಮೂಲಕ ನೆರವಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ರಾಹುಲ್ ಮಾತ್ರ ತಮ್ಮ ಪೆವಿಲಿಯನ್ ಪರೇಡ್ ಮುಂದುವರೆಸಿದರು. ರಾಹುಲ್ ಅವರ ಈ ಹೊದ ಪುಟ್ಟ ಬಂದ ಪುಟ್ಟ ಆಟಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅವರನ್ನು ತಂಡದಿಂದ ಹೊರಹಾಕಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಿಸಿಸಿಐಗೆ ಬೇಡಿಕೆ ಇಟ್ಟಿದ್ದಾರೆ.

ಮತ್ತೆ ನಿರಾಸೆ ಮೂಡಿಸಿದ ರಾಹುಲ್

150 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ ಸರ್ಫರಾಜ್ ಖಾನ್ ಅವರ ವಿಕೆಟ್ ಪತನದ ಬಳಿಕ ಕ್ರೀಸ್​ಗೆ ಬಂದ ರಾಹುಲ್ ಅವರಿಂದ ಭಾರತೀಯ ಅಭಿಮಾನಿಗಳು ಹಾಗೂ ಟೀಮ್ ಮ್ಯಾನೇಜ್​ಮೆಂಟ್ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ಇದಕ್ಕೆ ಕಾರಣವೂ ಇದ್ದು, ಮೊದಲ ಇನ್ನಿಂಗ್ಸ್​ನಲ್ಲಿ ರಾಹುಲ್ ಹೊರತಾಗಿ ತಂಡದ ಬ್ಯಾಟಿಂಗ್‌ ಕ್ರಮಾಂಕ ಧಯನೀಯ ಪ್ರದರ್ಶನ ನೀಡಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ತಂಡದ ಟಾಪ್ ಆರ್ಡರ್ ಬಲಿಷ್ಠ ಪ್ರದರ್ಶನ ನೀಡಿತು. ನಾಲ್ವರು ಬ್ಯಾಟ್ಸ್​ಮನ್​ಗಳು ಶತಕ ಹಾಗೂ ಅರ್ಧಶತಕದ ಕಾಣಿಕೆ ನೀಡಿದ್ದರು. ಹೀಗಾಗಿ ಆರನೇ ಕ್ರಮಾಂಕದಲ್ಲಿ ಬಂದ ರಾಹುಲ್ ಅವರ ಮೇಲು ಇದೇ ನಿರೀಕ್ಷೆ ಇಡಲಾಗಿತ್ತು. ಸಾಲದೆಂಬಂತೆ ಇದು ರಾಹುಲ್ ಅವರ ತವರು ಮೈದಾನವಾಗಿರುವುದರಿಂದ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ, ರಾಹುಲ್ ಎಲ್ಲರ ಆಸೆಗೆ ತಣ್ಣೀರೆರಚಿ ಪೆವಿಲಿಯನ್ ಸೇರಿಕೊಂಡರು.

ವಾಸ್ತವವಾಗಿ ಎರಡನೇ ಇನ್ನಿಂಗ್ಸ್​ನಲ್ಲಿ ರಾಹುಲ್​ಗೆ ಉತ್ತಮ ಆರಂಭ ಸಿಕ್ಕಿತು. ಅವರು ಎರಡು ಬೌಂಡರಿ ಬಾರಿಸುವ ಮೂಲಕ ಅಬ್ಬರಿಸುವ ಸೂಚನೆ ನೀಡಿದ್ದರು. ಆರಂಭದಲ್ಲಿ ರಾಹುಲ್ ಆಟ ನೋಡಿದವರು ಇವತ್ತು ರಾಹುಲ್ ಬ್ಯಾಟ್​ನಿಂದ ಬಿಗ್ ಇನ್ನಿಂಗ್ಸ್ ಬರುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ರಾಹುಲ್ ವಿಲಿಯಂ ಓ’ರೂರ್ಕ್ ಅವರ ಎಸೆತದಲ್ಲಿ ಕೀಪರ್‌ಗೆ ಸುಲಭ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 16 ಎಸೆತಗಳನ್ನು ಎದುರಿಸಿದ ರಾಹುಲ್ 12 ರನ್ ಗಳಿಸಿ ಔಟಾದರು. ಕಳೆದ ಕೆಲವು ದಿನಗಳಿಂದ ಸ್ಥಿರ ಪ್ರದರ್ಶನ ನೀಡಲು ಎಡವುತ್ತಿರುವ ರಾಹುಲ್ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ವಿರುದ್ಧ ತರಹೆವಾರಿ ಮೀಮ್ಸ್​ಗಳನ್ನು ಹರಿಬಿಡುತ್ತಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್

ಬೆಂಗಳೂರು ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲೂ ಕೆಎಲ್ ರಾಹುಲ್ ಬ್ಯಾಟ್ ಮೌನವಾಗಿತ್ತು. ಆರು ಎಸೆತಗಳನ್ನು ಎದುರಿಸಿದ ರಾಹುಲ್ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡಿದ್ದರು. ರಾಹುಲ್ ಈ ವರ್ಷ ಆಡಿರುವ 5 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ 234 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. 2024ರಲ್ಲಿ ರಾಹುಲ್ ಇನ್ನೂ ಒಂದೇ ಒಂದು ಶತಕ ಸಿಡಿಸಿಲ್ಲ. ಕಳೆದ ವರ್ಷವೂ 3 ಟೆಸ್ಟ್ ಪಂದ್ಯಗಳ ಐದು ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಕೇವಲ 143 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Sat, 19 October 24