IND vs NZ: ರಾತ್ರೋರಾತ್ರಿ ಪಾಕಿಸ್ತಾನದಿಂದ ಭಾರತಕ್ಕೆ ಹಾರಿದ ನ್ಯೂಜಿಲೆಂಡ್ ತಂಡ; ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Jan 15, 2023 | 1:53 PM

IND vs NZ: ಇದೀಗ ನ್ಯೂಜಿಲೆಂಡ್ ತಂಡ ಕರಾಚಿಯಿಂದ ಭಾರತಕ್ಕೆ ಪ್ರಯಾಣಣಿಸಿದ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

IND vs NZ: ರಾತ್ರೋರಾತ್ರಿ ಪಾಕಿಸ್ತಾನದಿಂದ ಭಾರತಕ್ಕೆ ಹಾರಿದ ನ್ಯೂಜಿಲೆಂಡ್ ತಂಡ; ವಿಡಿಯೋ ನೋಡಿ
ನ್ಯೂಜಿಲೆಂಡ್ ತಂಡ
Follow us on

ಪಾಕಿಸ್ತಾನ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ಆಡಿ ಮುಗಿಸಿರುವ ನ್ಯೂಜಿಲೆಂಡ್ ತಂಡ (Pakistan vs New zealand), ಏಕದಿನ ಸರಣಿಯನ್ನು ಗೆಲ್ಲುವುದರೊಂದಿಗೆ ಪಾಕ್ ಪ್ರವಾಸಕ್ಕೆ ವಿದಾಯ ಹೇಳಿದೆ. ಆದರೆ ಸರಣಿ ಗೆದ್ದ ಖುಷಿಯನ್ನು ಸರಿಯಾಗಿ ಸಂಭ್ರಮಿಸದ ಕಿವೀಸ್ ಪಡೆ ಅಂತಿಮ ಏಕದಿನ ಪಂದ್ಯ ಮುಗಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿಳಿದಿದೆ. ಜನವರಿ 13ರ ರಾತ್ರಿ ಸರಿಯಾಗಿ ಹತ್ತೂವರೆ ಗಂಟೆಗೆ ಪಂದ್ಯ ಮುಗಿಸಿದ ಕಿವೀಸ್ ತಂಡ ಸರಿಯಾಗಿ ಮಧ್ಯರಾತ್ರಿ 12.10ಕ್ಕೆ ಪಾಕಿಸ್ತಾನದಿಂದ ಭಾರತಕ್ಕೆ ವಿಮಾನ ಪ್ರಯಾಣ ಬೆಳೆಸಿದೆ. ಹೀಗಾಗಿ ಉತ್ತರಾಯಣದ ದಿನವೇ ಕಿವೀಸ್ ತಂಡ ಭಾರತ ತಲುಪಿದೆ. ಮುಂದಿನ ವಾರ ಭಾರತ ಮತ್ತು ನ್ಯೂಜಿಲೆಂಡ್ (India Vs New Zealand) ನಡುವೆ ಏಕದಿನ ಸರಣಿ ನಡೆಯಲಿದೆ.

ಜನವರಿ 13 ರಂದು, ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ 50 ಓವರ್​ಗಳ ಡೇನೈಟ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ 2 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಇದರೊಂದಿಗೆ ಪಾಕಿಸ್ತಾನವನ್ನು ಅವರದ್ದೇ ನೆಲದಲ್ಲಿ ಮಣಿಸಿದ ನ್ಯೂಜಿಲೆಂಡ್ ಏಕದಿನ ಸರಣಿಯನ್ನು ಕೈವಶಮಾಡಿಕೊಂಡಿತ್ತು. ಆದರೆ ಈ ಏಕದಿನ ಸರಣಿಗೂ ಮುನ್ನ ನಡೆದ 2 ಟೆಸ್ಟ್ ಪಂದ್ಯಗಳ ಸರಣಿಯನ್ನೂ ಹೇಗೋ ಡ್ರಾ ಮಾಡಿಕೊಳ್ಳುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿತ್ತು.

Axar Patel Marriage: ಇಷ್ಟರಲ್ಲೇ ಹಸೆಮಣೆ ಏರಲಿದ್ದಾರೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್

ರಾತ್ರೋರಾತ್ರಿ ಹೈದರಾಬಾದ್‌ಗೆ ಬಂದಿಳಿದ ಕಿವೀಸ್ ಪಡೆ

ಇದೀಗ ನ್ಯೂಜಿಲೆಂಡ್ ತಂಡ ಕರಾಚಿಯಿಂದ ಭಾರತಕ್ಕೆ ಪ್ರಯಾಣಣಿಸಿದ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸರಣಿ ಗೆಲುವಿನ ಬಳಿಕ ಕಿವೀಸ್ ಪಡೆ ಮಾಡಿದ ಕೆಲಸಗಳ ಇಂಚಿಂಚು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಹೀಗಾಗಿ ಈ ವಿಡಿಯೋವನ್ನು ಗಮನಿಸಿದರೆ, ಕಿವೀಸ್ ಪಡೆ, ಪಾಕಿಸ್ತಾನದಲ್ಲಿ ಒಂದು ಕ್ಷಣವೂ ನಿಲ್ಲಲು ಸಿದ್ಧವಿಲ್ಲ ಎಂಬದು ಕಾಣುತ್ತಿದೆ. ಏಕೆಂದರೆ ಈ ಹಿಂದೆಯೂ ಭದ್ರತಾ ಕಾರಣಗಳಿಂದಾಗಿ ಕಿವೀಸ್ ತಂಡ ಪಾಕಿಸ್ತಾನದ ನೆಲದಿಂದ ಕಾಲ್ಕಿತ್ತಿತ್ತು.

ನ್ಯೂಜಿಲೆಂಡ್ ತಂಡ, ಪಾಕಿಸ್ತಾನದಿಂದ ಭಾರತಕ್ಕೆ ಪ್ರಯಾಣಿಸಿದ ಎಲ್ಲಾ ಕ್ಷಣಗಳನ್ನು ವೀಡಿಯೊದಲ್ಲಿ ಸೆರೆ ಹಿಡಿದಿದೆ. ಇದರಲ್ಲಿ ರಾತ್ರಿ 10.30ಕ್ಕೆ ಸರಣಿ ಗೆದ್ದ ಆಟಗಾರರು ಪೆವಿಲಿಯನ್‌ಗೆ ಮರಳಿದ್ದಾರೆ. ಬಳಿಕ 10.55 ತಂಡ ವಿಜಯೋತ್ಸವ ಆಚರಿಸಿದೆ. 12.10ಕ್ಕೆ ರಾಷ್ಟ್ರೀಯ ಕ್ರೀಡಾಂಗಣದಿಂದ ಹೊರಟ ತಂಡ ನೇರವಾಗಿ ವಿಮಾನ ನಿಲ್ದಾಣ ತಲುಪಿದೆ. ಅಲ್ಲಿಂದ ತಂಡ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದು, ಜನವರಿ 14 ರ ಬೆಳಗ್ಗೆ, ಅಂದರೆ 5.45ಕ್ಕೆ ವಿಮಾನ ನಿಲ್ದಾಣದಿಂದ ಹೊರಟು, 6.55 ಕ್ಕೆ ಹೋಟೆಲ್ ತಲುಪಿದೆ.

ಉಭಯ ದೇಶಗಳ ಸರಣಿ ವೇಳಾಪಟ್ಟಿ ಹೀಗಿದೆ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಜನವರಿ 18 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ 21 ರಂದು ರಾಯ್‌ಪುರದಲ್ಲಿ ಮತ್ತು ಮೂರನೇ ಪಂದ್ಯ ಜನವರಿ 24 ರಂದು ಇಂದೋರ್‌ನಲ್ಲಿ ನಡೆಯಲಿದೆ. ಆ ಬಳಿಕ ಜನವರಿ 27ರಿಂದ ಉಭಯ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Sun, 15 January 23