ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ಮಹಿಳಾ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ್ತಿ ರಾಧಾ ಯಾದವ್ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಪರಿಣಾಮ 31 ಓವರ್ಗಳ ವೇಳೆ ನ್ಯೂಝಿಲೆಂಡ್ ತಂಡವು 135 ರನ್ಗಳನ್ನು ಕಲೆಹಾಕಿತ್ತು. ಈ ಹಂತದಲ್ಲಿ ದಾಳಿಗಿಳಿದ ಆರುಂಧತಿ ಪ್ರಿಯಾ ಮಿಶ್ರಾ ಇಂಡಿಯಾಗೆ ಅಮೂಲ್ಯ ಯಶಸ್ಸು ತಂದುಕೊಟ್ಟರು. ಈ ಯಶಸ್ಸಿಗೆ ಕಾರಣಕರ್ತರಾಗಿದ್ದು ರಾಧಾ ಯಾದವ್.
ಪಂದ್ಯದ 32ನೇ ಓವರ್ನ ಮೂರನೇ ಎಸೆತದಲ್ಲಿ ಬ್ರೂಕ್ ಹಾಲ್ಲಿಡೆ ಆಫ್ ಸೈಡ್ನತ್ತ ಬಾರಿಸಿದ್ದರು. ಚೆಂಡು 30-ಯಾರ್ಡ್-ಸರ್ಕಲ್‌ನ ಹೊರಗೆ ಬೀಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇನ್ ಫೀಲ್ಡ್ನಲ್ಲಿದ್ದ ರಾಧಾ ಯಾದವ್ ಹಿಮ್ಮುಖವಾಗಿ ಓಡಿ ಹೋಗಿ ಅದ್ಭುತ ಡೈವಿಂಗ್ನೊಂದಿಗೆ ಕ್ಯಾಚ್ ಹಿಡಿದರು.
ರಾಧಾ ಯಾದವ್ ಅವರ ಈ ಸ್ಟನ್ನಿಂಗ್ ಕ್ಯಾಚ್ ನೋಡಿ ಪ್ರೇಕ್ಷಕರು ಕೂಡ ನಿಬ್ಬೆರಗಾದರು. ಇದೀಗ ಟೀಮ್ ಇಂಡಿಯಾ ಆಟಗಾರ್ತಿಯ ಅತ್ಯುತ್ತಮ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 47.1 ಓವರ್ಗಳಲ್ಲಿ 183 ರನ್ಗಳಿಗೆ ಆಲೌಟ್ ಆಗಿ 76 ರನ್ಗಳಿಂದ ಸೋಲೊಪ್ಪಿಕೊಂಡಿದೆ.