IND vs NZ: 14 ಬೌಂಡರಿ, 2 ಸಿಕ್ಸರ್; ಸತತ ಎರಡನೇ ಏಕದಿನ ಶತಕ ಸಿಡಿಸಿದ ಶುಭಮನ್ ಗಿಲ್!

| Updated By: ಪೃಥ್ವಿಶಂಕರ

Updated on: Jan 18, 2023 | 4:18 PM

Shubman Gill: ಟೀಂ ಇಂಡಿಯಾದ ಯಂಗ್ ಸ್ಟಾರ್ ಬ್ಯಾಟ್ಸ್​ಮನ್ ಶುಭಮನ್ ಗಿಲ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸುತ್ತಲೇ ಮತ್ತೊಂದು ಶತಕ ಬಾರಿಸಿದ್ದಾರೆ.

IND vs NZ: 14 ಬೌಂಡರಿ, 2 ಸಿಕ್ಸರ್; ಸತತ ಎರಡನೇ ಏಕದಿನ ಶತಕ ಸಿಡಿಸಿದ ಶುಭಮನ್ ಗಿಲ್!
ಶುಭಮನ್ ಗಿಲ್
Follow us on

ಟೀಂ ಇಂಡಿಯಾದ (Team India) ಯಂಗ್ ಸ್ಟಾರ್ ಬ್ಯಾಟ್ಸ್​ಮನ್ ಶುಭಮನ್ ಗಿಲ್ (Shubman Gill) ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸುತ್ತಲೇ ಮತ್ತೊಂದು ಶತಕ ಬಾರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ (India Vs New Zealand) 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗಿಲ್, ತಮ್ಮ ಏಕದಿನ ವೃತ್ತಿಜೀವನದ ಮೂರನೇ ಹಾಗೂ ಸತತ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ 87 ಎಸೆತಗಳನ್ನು ಎದುರಿಸಿದ ಗಿಲ್ 14 ಬೌಂಟರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ ಶತಕ ಸಿಡಿಸಿದ್ದಾರೆ. ಮೂರು ದಿನಗಳ ಹಿಂದೆ ತಿರುವನಂತಪುರದಲ್ಲಿ ಶ್ರೀಲಂಕಾ ವಿರುದ್ಧ ಎರಡನೇ ಏಕದಿನ ಶತಕ ಸಿಡಿಸಿದ್ದ ಗಿಲ್, ಕಿವೀಸ್ ಬೌಲರ್‌ಗಳ ವಿರುದ್ಧವೂ ಅದೇ ಶೈಲಿಯನ್ನು ಮುಂದುವರೆಸಿ ಸತತ ಎರಡನೇ ಏಕದಿನ ಶತಕ ಪೂರೈಸಿದ್ದಾರೆ.

ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್​ರಂತಹ ಬ್ಯಾಟ್ಸ್​ಮನ್​ಗಳು ಕಿವೀಸ್ ಬೌಲರ್​ಗಳ ದಾಳಿಗೆ ಮಂಕಾಗಿ ಬೇಗನೆ ಪೆವಿಲಿಯನ್ ಸೇರಿಕೊಂಡರೆ, ಶುಭಮನ್ ಗಿಲ್ ಮಾತ್ರ ಬೇರೆಯದ್ದೇ ಪಿಚ್​ನಲ್ಲಿ ಆಡುತ್ತಿರುವಂತೆ ಬ್ಯಾಟ್ ಬೀಸುತ್ತಿದ್ದಾರೆ. ಆರಂಭದಲ್ಲಿ ಕೊಂಚ ನಿದಾನಗತಿಯ ಬ್ಯಾಟಿಂಗ್ ಮಾಡಿದ ಗಿಲ್ ಕ್ರಮೇಣ ವೇಗ ಹೆಚ್ಚಿಸಿಕೊಂಡು 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಈ ಸಮಯದಲ್ಲಿ, ಕಿವೀಸ್ ನಾಯಕ ಮತ್ತು ವಿಕೆಟ್‌ಕೀಪರ್ ಟಾಮ್ ಲೇಥಮ್, ಗಿಲ್ ಅವರನ್ನು ಸ್ಟಂಪಿಂಗ್ ಮಾಡುವ ಅವಕಾಶವನ್ನು ಕಳೆದುಕೊಂಡರು. ಹೀಗಾಗಿ ಸಿಕ್ಕ ಜೀವದಾನವನ್ನು ಗಿಲ್ ಸದುಪಯೋಗ ಪಡಿಸಿಕೊಂಡರು.

IND vs SL: 11 ಬೌಂಡರಿ, 2 ಸಿಕ್ಸರ್‌ ಸಹಿತ ತವರಿನಲ್ಲಿ ಚೊಚ್ಚಲ ಏಕದಿನ ಶತಕ ಸಿಡಿಸಿದ ಶುಭಮನ್ ಗಿಲ್..!

ಸ್ಪಿನ್ನರ್ ವಿರುದ್ಧ ಗಿಲ್ ಸ್ಫೋಟ

ಇದಾದ ನಂತರ ಕಿವೀಸ್ ಬೌಲರ್​ಗಳಿಗೆ ಬೇರೆ ಯಾವುದೇ ಅವಕಾಶ ನೀಡದ ಗಿಲ್, ಸಿಂಗಲ್ಸ್-ಡಬಲ್ಸ್ ಮತ್ತು ಬೌಂಡರಿ ಬಾರಿಸಲಾರಂಭಿಸಿದರು. ಅದರಲ್ಲೂ ಗಿಲ್ ಕಿವೀಸ್ ಸ್ಪಿನ್ನರ್‌ಗಳ ವಿರುದ್ಧ ಸ್ಟೆಪ್ಸ್ ಮತ್ತು ಸ್ಲಾಗ್ ಸ್ವೀಪ್‌ಗಳನ್ನು ಚೆನ್ನಾಗಿ ಬಳಸಿಕೊಂಡು ರನ್ ಕಲೆ ಹಾಕಿದರು. 30ನೇ ಓವರ್‌ನಲ್ಲಿ, ಮಿಚೆಲ್ ಸ್ಯಾಂಟ್ನರ್ ಅವರ ಎರಡನೇ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಗಿಲ್ 93 ರಿಂದ 99 ರನ್​ಗಳಿಗೆ ಜಿಗಿದರೆ, ಬಳಿಕ ಮುಂದಿನ ಎಸೆತದಲ್ಲಿ ಸಿಂಗಲ್ ಕದಿಯುವ ಮೂಲಕ ಸತತ ಎರಡನೇ ಮತ್ತು ಒಟ್ಟಾರೆ ಮೂರನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು.

19 ಏಕದಿನ ಇನ್ನಿಂಗ್ಸ್‌ಗಳಲ್ಲಿ ಇದು ಗಿಲ್ ಅವರ ಮೂರನೇ ಶತಕವಾಗಿದ್ದು, ಶಿಖರ್ ಧವನ್ (17 ಇನ್ನಿಂಗ್ಸ್) ನಂತರ ಭಾರತದ ಪರ ಅತ್ಯಂತ ವೇಗದ ಮೂರನೇ ಏಕದಿನ ಶತಕ ಸಿಡಿಸಿದ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.

 

ಕೊಹ್ಲಿ, ಧವನ್ ದಾಖಲೆ ಮುರಿದ ಗಿಲ್

ಇಷ್ಟೇ ಅಲ್ಲ ಶತಕ ಪೂರೈಸಿದ ಗಿಲ್ ತನ್ನ ಹೆಸರಿನಲ್ಲಿ ಮತ್ತೊಂದು ದಾಖಲೆ ಬರೆದಿದ್ದು, ಭಾರತದ ಪರ ವೇಗವಾಗಿ 1000 ಏಕದಿನ ರನ್ ಪೂರೈಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಕೇವಲ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಗಿಲ್, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ (ಇಬ್ಬರೂ 24 ಇನ್ನಿಂಗ್ಸ್) ದಾಖಲೆಯನ್ನು ಮುರಿದಿದ್ದಾರೆ. ಅಷ್ಟೇ ಅಲ್ಲ, ಪಾಕಿಸ್ತಾನದ ಬ್ಯಾಟ್ಸ್‌ಮನ್ ಫಖರ್ ಜಮಾನ್ (18 ಇನ್ನಿಂಗ್ಸ್) ನಂತರ ಅತಿ ವೇಗವಾಗಿ 1000 ರನ್ ಪೂರೈಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಯೂ ಗಿಲ್ ಖಾತೆ ಸೇರಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Wed, 18 January 23