ಟಿ20 ವಿಶ್ವಕಪ್ಗೆ (T20 World Cup 2024) ದಿನಗಣನೆ ಶುರುವಾಗಿದೆ. ಜೂನ್ 2 ರಿಂದ ಶುರುವಾಗಲಿರುವ ಈ ಬಾರಿಯ ಟಿ20 ವಿಶ್ವಕಪ್ಗೆ ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸಲಿದೆ. ಇನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೆಜ್ ಪಂದ್ಯವು ಜೂನ್ 9 ರಂದು ನಡೆಯಲಿದೆ.
ಇಂಡೊ-ಪಾಕ್ ನಡುವಣ ಈ ರಣರೋಚಕ ಪಂದ್ಯಕ್ಕಾಗಿ ಈಗಾಗಲೇ ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ಆದರೆ ಈ ಸ್ಟೇಡಿಯಂನಲ್ಲಿ ಕೇವಲ 34 ಸಾವಿರ ಆಸನ ವ್ಯವಸ್ಥೆಗಳಿವೆ. ಹೀಗಾಗಿ ಹೆಚ್ಚಿನ ಪ್ರೇಕ್ಷಕರಿಗೆ ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸಲು ಅವಕಾಶವಿರುವುದಿಲ್ಲ.
ಇತ್ತ ಕಡಿಮೆ ಸೀಟ್ಗಳಿರುವುದನ್ನೇ ಬಂಡವಾಳವಾಗಿಸಿಕೊಂಡಿರುವ ಟಿಕೆಟ್ ರೀ ಸೇಲ್ ಫ್ಲಾಟ್ಫಾರ್ಮ್ಗಳು ಇದೀಗ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಟಿಕೆಟ್ ದರಗಳನ್ನು ಹೆಚ್ಚಿಸಿದೆ. ಅಂದರೆ ಐಸಿಸಿಯ ಅಧಿಕೃತ ವೆಬ್ಸೈಟ್ನಲ್ಲಿ 400 ಡಾಲರ್ ಇದ್ದ (INR 33000) ವಿಐಪಿ ಟಿಕೆಟ್ ದರಗಳನ್ನು ಇದೀಗ, ರೀ ಸೇಲ್ ವೇದಿಕೆಗಳಲ್ಲಿ ಬರೋಬ್ಬರಿ 33 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಅಲ್ಲದೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಕನಿಷ್ಠ ಬೆಲೆಯ ಟಿಕೆಟ್ಗಳು 1 ಲಕ್ಷ ರೂ.ಗಿಂತ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತಿದೆ. ಈ ಮೊತ್ತವು ಪಂದ್ಯದ ದಿನಕ್ಕೂ ಮುಂಚಿತವಾಗಿ ಮತ್ತಷ್ಟು ಏರುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ 34 ಸಾವಿರ ಆಸನಗಳಿರುವ ಹೊಸ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುವುದು ಭಾರತ ಮತ್ತು ಪಾಕಿಸ್ತಾನ್ ಅಭಿಮಾನಿಗಳ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಇದಾಗ್ಯೂ ಸಾಂಪ್ರದಾಯಿಕ ಎದುರಾಳಿಗಳ ರಣರೋಚಕ ಕಾದಾಟವನ್ನು ವೀಕ್ಷಿಸಲು ಉಭಯ ತಂಡಗಳ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದಕ್ಕೆ ಟಿಕೆಟ್ ದರಗಳ ಏರಿಕೆಯೇ ಸಾಕ್ಷಿ.
34,000 seat pop up stadium in New York for the ICC T20 World Cup. pic.twitter.com/Iz1kyNvg9C
— Jomboy (@Jomboy_) May 15, 2024
ಭಾರತ ಟಿ20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: IPL 2024: ಹೀಗಾದ್ರೆ RCB ಮತ್ತು CSK, ಎರಡೂ ತಂಡಗಳು ಪ್ಲೇಆಫ್ಗೆ..!
ಪಾಕಿಸ್ತಾನ್ ಟಿ20 ತಂಡ: ಬಾಬರ್ ಆಝಂ (ನಾಯಕ), ಅಬ್ರಾರ್ ಅಹ್ಮದ್, ಆಝಂ ಖಾನ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಝ್ವಾನ್, ಇರ್ಫಾನ್ ಖಾನ್, ನಸೀಮ್ ಶಾ, ಸೈಮ್ ಅಯ್ಯೂಬ್, ಸಲ್ಮಾನ್ ಅಲಿ ಅಗಾ, ಶಾದಾಬ್ ಖಾನ್, ಶಾಹೀನ್ ಶಾ ಆಫ್ರಿದಿ ಮತ್ತು ಉಸ್ಮಾನ್ ಖಾನ್. (ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಬಳಿಕ 15 ಸದಸ್ಯರ ತಂಡವನ್ನು ಪ್ರಕಟಿಸಲಾಗುತ್ತದೆ).
Published On - 8:59 am, Thu, 16 May 24