IND vs SA: 2ನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ? ಸೇಂಟ್ ಜಾರ್ಜ್ ಪಾರ್ಕ್‌ ಪಿಚ್ ಯಾರಿಗೆ ಸಹಕಾರಿ?

|

Updated on: Dec 18, 2023 | 10:33 PM

IND vs SA: ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂನಲ್ಲಿ ಬೌಲರ್‌ಗಳು ಹೆಚ್ಚು ಸಹಾಯ ಪಡೆಯುತ್ತಾರೆ. ಇಲ್ಲಿನ ಪಿಚ್ ಹಸಿರಾಗಿದ್ದರೆ ವೇಗದ ಬೌಲರ್​ಗಳಿಗೆ ಸಾಕಷ್ಟು ನೆರವು ಸಿಗಲಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 300 ರನ್​ಗಳ ಗಡಿ ದಾಟಿದರೆ ಗೆಲುವು ಖಚಿತ ಎಂದೇ ಹೇಳಬಹುದು.

IND vs SA: 2ನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ? ಸೇಂಟ್ ಜಾರ್ಜ್ ಪಾರ್ಕ್‌ ಪಿಚ್ ಯಾರಿಗೆ ಸಹಕಾರಿ?
ಭಾರತ- ಆಫ್ರಿಕಾ
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ ಭರ್ಜರಿಯಾಗಿ ಆರಂಭಿಸಿದ್ದು, ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡವು ಕೇವಲ 116 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಟೀಂ ಇಂಡಿಯಾ 16.4 ಓವರ್‌ಗಳಲ್ಲಿ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಇದೀಗ ಉಭಯ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಡಿಸೆಂಬರ್ 19 ರಂದು ಸೇಂಟ್ ಜಾರ್ಜ್ ಪಾರ್ಕ್ (St George’s Park), ಗ್ಕೆಬೆಹರಾದಲ್ಲಿ ನಡೆಯಲಿದೆ. ಆದರೆ ಈ ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿದ್ದು, ಇದು ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.

ಹವಾಮಾನ ವರದಿ ಹೀಗಿದೆ

ಗ್ಕೆಬೆಹರಾದಲ್ಲಿರುವ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದ ಹವಾಮಾನದ ಬಗ್ಗೆ ನಾವು ಮಾತನಾಡಿದರೆ, ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4:30ಕ್ಕೆ ಪ್ರಾರಂಭವಾಗಲಿದೆ. ಗ್ಕೆಬೆಹರಾದಲ್ಲಿರುವ ಅಕ್ಯುವೆದರ್ ವರದಿ ಪ್ರಕಾರ ಬೆಳಗ್ಗೆ 7ರಿಂದ 10ರವರೆಗೆ ಶೇ.60ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇದಾದ ಬಳಿಕ ಪಂದ್ಯ ಆರಂಭಕ್ಕೂ ಮುನ್ನ ಶೇ.20ಕ್ಕೆ ಇಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆ ಬಂದರೆ ಸ್ವಲ್ಪ ತಡವಾಗಿ ಪಂದ್ಯ ಆರಂಭವಾಗುವ ನಿರೀಕ್ಷೆ ಇದೆ. ಆದರೆ, ಮಳೆಯಿಂದಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇಲ್ಲ.

IND vs SA: ಶ್ರೇಯಸ್ ಬದಲು ಯಾರಿಗೆ ಅವಕಾಶ? 2ನೇ ಏಕದಿನಕ್ಕೆ ಭಾರತ ಸಂಭಾವ್ಯ ತಂಡ ಇಲ್ಲಿದೆ

ಪಿಚ್ ವರದಿ

ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂನಲ್ಲಿ ಬೌಲರ್‌ಗಳು ಹೆಚ್ಚು ಸಹಾಯ ಪಡೆಯುತ್ತಾರೆ. ಇಲ್ಲಿನ ಪಿಚ್ ಹಸಿರಾಗಿದ್ದರೆ ವೇಗದ ಬೌಲರ್​ಗಳಿಗೆ ಸಾಕಷ್ಟು ನೆರವು ಸಿಗಲಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 300 ರನ್​ಗಳ ಗಡಿ ದಾಟಿದರೆ ಗೆಲುವು ಖಚಿತ ಎಂದೇ ಹೇಳಬಹುದು. ಏಕೆಂದರೆ ಗುರಿಯನ್ನು ಬೆನ್ನಟ್ಟುವಾಗ ಇಷ್ಟು ರನ್ ಗಳಿಸುವುದು ಇಲ್ಲಿ ಸುಲಭವಲ್ಲ. ಹೀಗಾಗಿ ಟಾಸ್ ಗೆದ್ದ ನಾಯಕ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಹೆಚ್ಚು ಆಧ್ಯತೆ ನೀಡಲಿದ್ದಾನೆ.

ಪೋರ್ಟ್ ಎಲಿಜಬೆತ್​ನ ಸೇಂಟ್ ಪಾರ್ಕ್ ಸ್ಟೇಡಿಯಂನಲ್ಲಿ ಇದುವರೆಗೆ ಒಟ್ಟು 42 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಕ್ರೀಡಾಂಗಣದಲ್ಲಿ, ಗುರಿಯನ್ನು ಬೆನ್ನಟ್ಟಿದ ತಂಡಗಳು 21 ಬಾರಿ ಗೆದ್ದರೆ, ಮೊದಲು ಬ್ಯಾಟ್ ಮಾಡಿದ ತಂಡವು 20 ಬಾರಿ ಗೆದ್ದಿದೆ. ಇಲ್ಲಿ ಕೇವಲ ಒಂದು ಪಂದ್ಯ ಮಾತ್ರ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

ಉಭಯ ತಂಡಗಳ ಮುಖಾಮುಖಿ

ಉಭಯ ತಂಡಗಳ ನಡುವೆ ಒಟ್ಟು 92 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ ತಂಡ ಕೇವಲ 39 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 50 ಪಂದ್ಯಗಳನ್ನು ಗೆದ್ದಿದೆ. ಇದರ ಹೊರತಾಗಿ ಮೂರು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಕಂಡಿಲ್ಲ. ಆಫ್ರಿಕಾದಲ್ಲಿ ಭಾರತ ಈವರೆಗೆ ಆಡಿರುವ 38 ಪಂದ್ಯಗಳಲ್ಲಿ 11ರಲ್ಲಿ ಜಯ ಸಾಧಿಸಿದ್ದರೆ, 25ರಲ್ಲಿ ಸೋಲು ಕಂಡಿದೆ.

ಗೆಲುವಿಗಾಗಿ ಆಫ್ರಿಕಾ ಹೋರಾಟ

ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಕಂಡಿರುವ ದಕ್ಷಿಣ ಆಫ್ರಿಕಾ ತಂಡ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವ ಪ್ರಯತ್ನದಲ್ಲಿದ್ದು, ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸುವ ಗುರಿ ಹೊಂದಿದೆ. ಮತ್ತೊಂದೆಡೆ, ಕೆಎಲ್ ರಾಹುಲ್ ನಾಯಕತ್ವದಲ್ಲಿ ಆಡುತ್ತಿರುವ ತಂಡವು ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಲು ಬಯಸುತ್ತದೆ. ಆದಾಗ್ಯೂ, ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ 11 ರಲ್ಲಿ ಬದಲಾವಣೆ ಖಚಿತ ಎಂದು ಪರಿಗಣಿಸಲಾಗಿದೆ. ಏಕೆಂದರೆ ಶ್ರೇಯಸ್ ಅಯ್ಯರ್ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಉಳಿದ 2 ಏಕದಿನ ಪಂದ್ಯಗಳಲ್ಲಿ ತಂಡದ ಭಾಗವಾಗಿಲ್ಲ, ಅಂತಹ ಪರಿಸ್ಥಿತಿಯಲ್ಲಿ ರಿಂಕು ಸಿಂಗ್ ಅಥವಾ ರಜತ್ ಪಾಟಿದಾರ್ ತಂಡದಲ್ಲಿ ಆಡಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ