VIDEO: ಕೈಗ್ ಹಾಕೋಲೋ…ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಕೆಎಲ್ ರಾಹುಲ್ ತಾಕೀತು..!

| Updated By: ಝಾಹಿರ್ ಯೂಸುಫ್

Updated on: Dec 28, 2023 | 8:44 AM

India vs South Africa: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕೆಎಲ್ ರಾಹುಲ್ (101) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 245 ರನ್​ ಕಲೆಹಾಕಿದೆ. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ ಡೀನ್ ಎಲ್ಗರ್ (140) ಅಜೇಯ ಶತಕ ಸಿಡಿಸಿದ್ದಾರೆ.

VIDEO: ಕೈಗ್ ಹಾಕೋಲೋ...ಪ್ರಸಿದ್ಧ್​ ಕೃಷ್ಣಗೆ ಕನ್ನಡದಲ್ಲೇ ಕೆಎಲ್ ರಾಹುಲ್ ತಾಕೀತು..!
Prasidh Krishna-KL Rahul
Follow us on

ಸೆಂಚುರಿಯನ್​ ಮೈದಾನದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೆಂಚುರಿ ಸಿಡಿಸಿ ಮಿಂಚಿದ್ದ ಕೆಎಲ್ ರಾಹುಲ್ (KL Rahul) ಇದೀಗ ಕನ್ನಡಿಗರ ಮನ ಗೆದ್ದಿದ್ದಾರೆ. ಅದು ಕೂಡ ಕನ್ನಡದಲ್ಲೇ ತಾಕೀತು ಮಾಡುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (101) ಆಕರ್ಷಕ ಶತಕ ಬಾರಿಸಿ ಮಿಂಚಿದ್ದರು. ಈ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 245 ರನ್​ ಕಲೆಹಾಕಿತು.

ಇದಾದ ಬಳಿಕ ಇನಿಂಗ್ಸ್​ ಆರಂಭಿಸಿದ ಸೌತ್ ಆಫ್ರಿಕಾ ತಂಡಕ್ಕೆ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದರು. ಐಡೆನ್ ಮಾರ್ಕ್ರಾಮ್ (5) ರನ್ನು ಬೇಗನೆ ಔಟ್ ಮಾಡಿದ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ಜಸ್​ಪ್ರೀತ್ ಬುಮ್ರಾ ಟೋನಿ ಝೋರ್ಝಿ (28) ಹಾಗೂ ಕೀಗನ್ ಪೀಟರ್ಸನ್ (2) ವಿಕೆಟ್ ಪಡೆದಿದ್ದರು. ಆದರೆ ಮತ್ತೊಂದೆಡೆ ಡೀನ್ ಎಲ್ಗರ್ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದರು.

ಇದರ ನಡುವೆ ಡೀನ್ ಎಲ್ಗರ್ ಬಾರಿಸಿದ ಚೆಂಡು ಲೆಗ್ ಸೈಡ್​ ಬೌಂಡರಿಯತ್ತ ಸಾಗಿದೆ. ಈ ವೇಳೆ ಬೌಂಡರಿ ಲೈನ್​ನಿಂದ ಓಡಿ ಬಂದು ಪ್ರಸಿದ್ಧ್ ಕೃಷ್ಣ ಚೆಂಡನ್ನು ವಿಕೆಟ್ ಕೀಪರ್​ನತ್ತ ಎಸೆದಿದ್ದಾರೆ. ಆದರೆ ಚೆಂಡು ವಿಕೆಟ್ ಕೀಪರ್ ಕೆಎಲ್ ರಾಹುಲ್​ಗೆ ನೇರವಾಗಿ ತಲುಪಿರಲಿಲ್ಲ.

ಇದರಿಂದ ಕೊಂಚ ಕೋಪಗೊಂಡ ಕೆಎಲ್ ರಾಹುಲ್ ಚೆಂಡನ್ನು ನೇರವಾಗಿ “ಕೈಗ್ ಹಾಕೋಲೋ”… ಎಂದು ಪ್ರಸಿದ್ಧ್ ಕೃಷ್ಣಗೆ ಕನ್ನಡದಲ್ಲೇ ತಾಕೀತು ಮಾಡಿದ್ದಾರೆ. ಈ ವಾರ್ನಿಂಗ್ ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್​ ಆಗಿದ್ದು, ಇದೀಗ ಇಬ್ಬರು ಕನ್ನಡಿಗರ ನಡುವೆ ಸಂಭಾಷಣೆ ವಿಡಿಯೋ ವೈರಲ್ ಆಗಿದೆ.

ಇನ್ನು ಕೆಎಲ್ ರಾಹುಲ್ ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಐಪಿಎಲ್​ನಲ್ಲಿ ಕರ್ನಾಟಕದ ಆಟಗಾರರಿಗೆ ಕನ್ನಡದಲ್ಲೇ ಸೂಚನೆ ನೀಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಮನೀಷ್ ಪಾಂಡೆ, ರಾಬಿನ್ ಉತ್ತಪ್ಪ ಕೂಡ ಮೈದಾನದಲ್ಲಿ ಕನ್ನಡದಲ್ಲಿ ಮಾತನಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಆಟಗಾರದ ಆಟಗಾರನೊಂದಿಗೆ ಕೆಎಲ್ ರಾಹುಲ್ ಕನ್ನಡದಲ್ಲೇ ವ್ಯವಹರಿಸುತ್ತಿದ್ದಾರೆ. ಅದರ ಸಣ್ಣ ಝಲಕ್ ಅಷ್ಟೇ ಈಗ ವೈರಲ್ ಆಗಿದೆ.  ಅಂದಹಾಗೆ ಈ ಪಂದ್ಯದ ಮೂಲಕ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲೇ ಕೈಲ್ ವೆರ್ರೆನ್ನೆ (4) ಯನ್ನು ಔಟ್ ಮಾಡಿ ಟೆಸ್ಟ್ ಕ್ರಿಕೆಟ್​ನಲ್ಲಿ ವಿಕೆಟ್ ಖಾತೆ ತೆರೆದಿದ್ದಾರೆ.

ಇದನ್ನೂ ಓದಿ: KL Rahul: ಕಿಂಗ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

ಸೌತ್ ಆಫ್ರಿಕಾ ತಂಡಕ್ಕೆ ಅಲ್ಪ ಮುನ್ನಡೆ:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕೆಎಲ್ ರಾಹುಲ್ (101) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 245 ರನ್​ ಕಲೆಹಾಕಿದೆ. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ ಡೀನ್ ಎಲ್ಗರ್ (140) ಅಜೇಯ ಶತಕ ಸಿಡಿಸಿದ್ದಾರೆ. ಅಲ್ಲದೆ 2ನೇ ದಿನದಾಟದ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು ಸೌತ್ ಆಫ್ರಿಕಾ 256 ರನ್​ಗಳಿಸಿದೆ. ಈ ಮೂಲಕ 11 ರನ್​ಗಳ ಮುನ್ನಡೆ ಸಾಧಿಸಿದೆ.