ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 62 ರನ್ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ (Team India) ಇದೀಗ ದ್ವಿತೀಯ ಪಂದ್ಯಕ್ಕೆ ಸಜ್ಜಾಗಿದೆ. ಧರ್ಮಶಾಲಾದ (Dharmashala) ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಟೀಮ್ ಇಂಡಿಯಾ ಇಂದಿನ ಪಂದ್ಯ ಕೂಡ ಗೆದ್ದು ಈ ಸರಣಿಯನ್ನೂ ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. ಇತ್ತ ಪ್ರವಾಸಿ ಶ್ರೀಲಂಕಾ ತಂಡ ಸರಣಿ ಗೆಲುಚಿನ ಆಸೆ ಉಳಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಅನುಭವದ ಕೊರತೆ ಇರುವ ಲಂಕಾ ಬೌಲರ್‌ಗಳು ಶಿಸ್ತಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಹಾಗಾದ್ರೆ ಇಂಡೋ- ಲಂಕಾ (IND vs SL T20) ದ್ವಿತೀಯ ಟಿ20 ಎಷ್ಟು ಗಂಟೆಗೆ ಆರಂಭವಾಗಲಿದೆ, ಯಾವುದರಲ್ಲಿ ನೇರಪ್ರಸಾರ ಎಂಬ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.
ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಟಿ20 ಪಂದ್ಯ ಫೆಬ್ರವರಿ 26 ರಂದು ನಡೆಯಲಿದೆ.
ಎರಡನೇ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:00 ಗಂಟೆಗೆ ಶುರುವಾಗಲಿದೆ. 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಕಾಣಲಿದೆ. ಆನ್ಲೈನ್ನಲ್ಲಾದರೆ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.
ಮಳೆ ಸಾಧ್ಯತೆ:
ಹೈವೋಲ್ಟೇಜ್ ಪಂದ್ಯ ಎಂದೇ ನಿರೀಕ್ಷಿಸಲಾಗಿದ್ದ ಇಂಡೋ-ಲಂಕಾ ದ್ವಿತೀಯ ಟಿ20 ಕದನಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ದಟ್ಟವಾಗಿದೆ. ಹಿಮಾಚಲ ಪ್ರದೇಶದ ನಗರವಾಗಿರುವ ಧರ್ಮಶಾಲಾ ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳು ಆಯೋಜನೆಯಾಗಿದ್ದು ಶನಿವಾರ ಹಾಗೂ ಭಾನುವಾರ ಈ ಪಂದ್ಯಗಳು ನಡೆಯಲಿದೆ. ಆದರೆ ಈಗಿನ ಹವಾಮಾನ ವರದಿಯ ಪ್ರಕಾರ, ಇಂದು ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆಯಿದೆಯಂತೆ. ಹಿಮಾಚಲ ಪ್ರದೇಶದ ಧರ್ಮ ಶಾಲಾದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸಂಜೆ ಮಳೆಯಾಗುತ್ತಿದೆ. ಶನಿವಾರವೂ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಲ್ಲಿ ಮಳೆಯ ಕಾರಣದಿಂದಲೇ ದಕ್ಷಿಣ ಆಫ್ರಿಕಾ ಎದುರಿನ 2019ರ ಟಿ20 ಪಂದ್ಯ ಹಾಗೂ 2020ರ ಏಕದಿನ ಪಂದ್ಯಗಳೆರಡೂ ಒಂದೂ ಎಸೆತ ಕಾಣದೆ ಕೊಚ್ಚಿಹೋಗಿದ್ದು ಮರೆಯುವಂತಿಲ್ಲ. ಇಂದಿನ ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಟಿ20 ಪಂದ್ಯಕ್ಕೂ ಇದೇ ಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಪಂದ್ಯ ನಡೆಯುವುದು ಅನುಮಾನ.
ಪಿಚ್ ಹೇಗಿದೆ?:
ಧರ್ಮ ಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಇದಕ್ಕೆ ಹವಾಮಾನ ಕೂಡ ಕಾರಣವಾಗಬಹುದು ಎನ್ನಲಾಗಿದೆ. ಆದರೆ ದೊಡ್ಡ ಮೊತ್ತದ ಪಂದ್ಯ ನಡೆಯುವ ಸಾಧ್ಯತೆ ಕಡಿಮೆಯಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 160 ರನ್‌ಗಳಿಸಿದರೆ ರಕ್ಷಣೆ ಮಾಡಿಕೊಳ್ಳುವ ಅವಕಾಶ ದೊರೆಯಬಹುದು. ಈ ಪಿಚ್ನಲ್ಲಿ ಜಾಣ್ಮೆಯ ಆಟವಾಡಿದರೆ ಬ್ಯಾಟಿಂಗ್‌ಗೂ ಯೋಗ್ಯ.
ಭಾರತ ಸಂಭಾವ್ಯ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮ (ನಾಯಕ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಸಂಜು ಸ್ಯಾಮ್ಸನ್, ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್.
IND vs SL T20: ಇಂದು ಭಾರತ- ಶ್ರೀಲಂಕಾ 2ನೇ ಟಿ20 ಪಂದ್ಯ ನಡೆಯುವುದು ಅನುಮಾನ: ಯಾಕೆ ಗೊತ್ತೇ?