W 0 0 0 W 0 W: ಒಂದೇ ಒಂದು ರನ್ ನೀಡದೆ 7 ಎಸೆತಗಳಲ್ಲಿ 3 ವಿಕೆಟ್ ಪಡೆದ ಸಿರಾಜ್! ವಿಡಿಯೋ ನೋಡಿ

|

Updated on: Nov 02, 2023 | 8:05 PM

Mohammed Siraj, ICC World Cup 2023: ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್​ಗೆ ಬಾಲ ಮುದಿರಿರುವ ಸಿಂಹಳಿಯರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಾರೆ. ಸಿರಾಜ್ ಒಬ್ಬರೇ ಶ್ರೀಲಂಕಾದ ಆರಂಭಿಕ ಆಟಗಾರ ಸೇರಿದಂತೆ ಒಟ್ಟು ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಒಂದೇ ಒಂದು ರನ್ ನೀಡದೆ ಪೆವಿಲಿಯನ್‌ಗಟ್ಟಿದ್ದಾರೆ.

W 0 0 0 W 0 W: ಒಂದೇ ಒಂದು ರನ್ ನೀಡದೆ 7 ಎಸೆತಗಳಲ್ಲಿ 3 ವಿಕೆಟ್ ಪಡೆದ ಸಿರಾಜ್! ವಿಡಿಯೋ ನೋಡಿ
ಮೊಹಮ್ಮದ್ ಸಿರಾಜ್
Follow us on

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ (Team India) ಮೂವರು ಆಟಗಾರರ ಅರ್ಧಶತಕದ ನೆರವಿನಿಂದ ಬರೋಬ್ಬರಿ 358 ರನ್ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿರುವ ಶ್ರೀಲಂಕಾ ತಂಡ ಅಕ್ಷರಶಃ ತತ್ತರಿಸಿ ಹೋಗಿದೆ. ಈ ಸುದ್ದಿ ಬರೆಯುವ ವೇಳೆಗೆ ತಂಡದ 6 ವಿಕೆಟ್​ಗಳು ಕೇವಲ 21 ರನ್​ಗಳಿಗೆ ಪತನಗೊಂಡಿವೆ. ಅದರಲ್ಲೂ ಮೊಹಮ್ಮದ್ ಸಿರಾಜ್ (Mohammed Siraj) ಮಾರಕ ಬೌಲಿಂಗ್​ಗೆ ಬಾಲ ಮುದಿರಿರುವ ಸಿಂಹಳಿಯರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಾರೆ. ಸಿರಾಜ್ ಒಬ್ಬರೇ ಶ್ರೀಲಂಕಾದ ಆರಂಭಿಕ ಆಟಗಾರ ಸೇರಿದಂತೆ ಒಟ್ಟು ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಒಂದೇ ಒಂದು ರನ್ ನೀಡದೆ ಪೆವಿಲಿಯನ್‌ಗಟ್ಟಿದ್ದಾರೆ.

ಬುಮ್ರಾಗೆ ಮೊದಲ ಬಲಿ

ಭಾರತ ನೀಡಿದ್ದ 358 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾಕ್ಕೆ ಮೊದಲ ಓವರ್​ನ ಮೊದಲ ಎಸೆತದಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು. ಇಡೀ ವಿಶ್ವಕಪ್​ನಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದ ಪಾತುಮ್ ನಿಸ್ಸಾಂಕಾ, ಬುಮ್ರಾ ಅವರ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಇನ್ನೊಂದು ತುದಿಯಿಂದ ದಾಳಿಗಿಳಿದ ಮೊಹಮ್ಮದ್ ಸಿರಾಜ್, ಲಂಕಾ ಆಟಗಾರರಿಗೆ ಉಸಿರಾಡುವುದಕ್ಕೆ ಅವಕಾಶ ನೀಡಲಿಲ್ಲ.

ಸಿರಾಜ್​ ಮಾರಕ ದಾಳಿ

ದಾಳಿಗಿಳಿದೊಡನೆ, ಬುಮ್ರಾ ಅವರಂತೆ ಮೊದಲ ಎಸೆತದಲ್ಲೇ ಸಿರಾಜ್ ವಿಕೆಟ್ ಉರುಳಿಸಿದರು. ಮತ್ತೊಬ್ಬ ಆರಂಭಿಕರಾಗಿ ಕಣಕ್ಕಿಳಿದಿದ್ದ ದಿಮುತ್ ಕರುಣರತ್ನೆ, ಸಿರಾಜ್ ಅವರ ಮೊದಲ ಎಸೆತದಲ್ಲೇ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ನಿಸ್ಸಾಂಕಾರಂತೆ ಕರುಣರತ್ನೆ ಅವರಿಗೂ ತಮ್ಮ ಖಾತೆಯನ್ನು ತೆರೆಯಲಾಗಲಿಲ್ಲ.

7 ಎಸೆತಗಳಲ್ಲಿ  3 ವಿಕೆಟ್

ಬಳಿಕ ಇದೇ ಓವರ್‌ನ ಐದನೇ ಎಸೆತದಲ್ಲಿ ಸಿರಾಜ್ ಅವರು ಸದೀರ ಸಮರವಿಕ್ರಮ ಅವರನ್ನು ಪೆವಿಲಿಯನ್​ಗಟ್ಟಿದರು. ಸಿರಾಜ್ ಬೌಲ್ ಮಾಡಿದ ಔಟ್ ಸ್ವಿಂಗರ್ ಎಸೆತವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಸಮರವಿಕ್ರಮ ಮೂರನೇ ಸ್ಲಿನ್​ನಲ್ಲಿ ನಿಂತಿದ್ದ ಶ್ರೇಯಸ್ ಅಯ್ಯರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಕುತೂಹಲಕಾರಿ ಸಂಗತಿಯೆಂದರೆ ಸಮರವಿಕ್ರಮಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ತಮ್ಮ ಎರಡನೇ ಓವರ್ ಬೌಲ್ ಮಾಡಲು ಬಂದ ಸಿರಾಜ್ ಮೊದಲ ಎಸೆತದಲ್ಲೇ ಮತ್ತೊಮ್ಮೆ ದಾಳಿ ನಡೆಸಿ ಕುಸಾಲ್ ಮೆಂಡಿಸ್ (1) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಮೊಹಮ್ಮದ್ ಸಿರಾಜ್ ತಮ್ಮ ಮೊದಲ 7 ಎಸೆತಗಳಲ್ಲಿ ಯಾವುದೇ ರನ್ ನೀಡದೆ ಒಟ್ಟು 3 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Thu, 2 November 23