IND vs SL: ‘ಶತಕ ಓಕೆ.. ಆದ್ರೆ, ಬಾಂಗ್ಲಾ ಎದುರು ಭಾರತ ಸೋತಿದ್ದನ್ನು ಮರೆಯಬೇಡಿ’; ಮತ್ತೆ ಕೊಹ್ಲಿ ಕಾಲೆಳೆದ ಗಂಭೀರ್

| Updated By: ಪೃಥ್ವಿಶಂಕರ

Updated on: Jan 13, 2023 | 5:01 PM

IND vs SL: ವೈಯಕ್ತಿಕವಾಗಿ ಅರ್ಧಶತಕ ಅಥವಾ ಶತಕ ನಿಮ್ಮ ದಾಖಲೆ ಪುಸ್ತಕ ಸೇರಿದಾಗ ಅದು ತುಂಬಾ ಚೆನ್ನಾಗಿ ಕಾಣುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದನ್ನು ನೀವು ಮರೆಯಬಾರದು. ಅದೊಂದು ದೊಡ್ಡ ಪಾಠ ಎಂದು ಗಂಭೀರ್ ಹೇಳಿದ್ದಾರೆ.

IND vs SL: ‘ಶತಕ ಓಕೆ.. ಆದ್ರೆ, ಬಾಂಗ್ಲಾ ಎದುರು ಭಾರತ ಸೋತಿದ್ದನ್ನು ಮರೆಯಬೇಡಿ’; ಮತ್ತೆ ಕೊಹ್ಲಿ ಕಾಲೆಳೆದ ಗಂಭೀರ್
ವಿರಾಟ್ ಕೊಹ್ಲಿ, ಗೌತಮ್ ಗಂಭೀರ್
Follow us on

ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಹಾಗೂ ವಿರಾಟ್ ಕೊಹ್ಲಿ (Virat Kohli) ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಅದೊಂದು ಐಪಿಎಲ್ (IPL) ಪಂದ್ಯದಿಂದ ಶುರುವಾದ ಜಟಾಪಟಿ ಈಗಲೂ ಮುಂದುವರೆದಿದೆ. ಹೊಸ ಸಂಚಿಕೆ ಎಂಬಂತೆ ಲಂಕಾ ವಿರುದ್ಧ ಶತಕ ಸಿಡಿಸಿದ ಕೊಹ್ಲಿಯನ್ನು ಗಂಭೀರ್ ಮತ್ತೆ ಟೀಕಿಸಿ ಮಾತನಾಡಿದ್ದಾರೆ. ವಾಸ್ತವವಾಗಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ (India Vs Sri Lanka) ಗೆಲ್ಲುವುದರೊಂದಿಗೆ ಸರಣಿಯಲ್ಲಿ ಅಜೇಯ 2-0 ಮುನ್ನಡೆ ಸಾಧಿಸಿದೆ. ಅಂದರೆ ಸರಣಿ ಭಾರತದ ಪಾಲಾಗಿದೆ. ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಸಂಕಷ್ಟ ಎದುರಿಸಬೇಕಾಗಿತ್ತಾದರೂ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿಗೆ ಪ್ರಮುಖ ಕಾರಣ ವಿರಾಟ್ ಕೊಹ್ಲಿ ಅವರ ಅಮೋಘ ಶತಕವಾಗಿತ್ತು. ಈ ಶತಕದ ಆಧಾರದಲ್ಲಿ ಟೀಂ ಇಂಡಿಯಾ ದೊಡ್ಡ ಸ್ಕೋರ್ ದಾಖಲಿಸಿದ್ದು, ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ಹೀನಾಯ ಸೋಲು ಅನುಭವಿಸಿತ್ತು. ಆದರೆ ಈ ಇನ್ನಿಂಗ್ಸ್ ನಂತರವೂ ಭಾರತದ ಮಾಜಿ ಓಪನರ್ ಗೌತಮ್ ಗಂಭೀರ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿ ಮಾತನಾಡುವ ಚಾಳಿಯನ್ನು ಬಿಟ್ಟಂತ್ತೆ ಕಾಣುತ್ತಿಲ್ಲ.

ತಂಡ ಮುಖ್ಯ

ಎರಡನೇ ಪಂದ್ಯದ ವೇಳೆ, ಗಂಭೀರ್ ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಮಿಡ್ ಶೋನಲ್ಲಿ ಎಕ್ಸ್​ಪರ್ಟ್ ಪ್ಯಾನಲ್​ನಲ್ಲಿ ಕುಳಿತು ಚರ್ಚೆ ಮಾಡುತ್ತಿದ್ದರು. ಈ ವೇಳೆ ಬಾಂಗ್ಲಾದೇಶ ಪ್ರವಾಸದಲ್ಲಿನ ಏಕದಿನ ಸರಣಿ ಸೋಲನ್ನು ನೆನಪಿಸಿಕೊಂಡ ಗಂಭೀರ್, “ಭಾರತ ತನ್ನ ಕೊನೆಯ ಏಕದಿನ ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಯಿತು ಎಂಬುದನ್ನು ನಾವು ಮರೆಯಬಾರದು. ಇದನ್ನು ನಾವು ಮರೆತಿದ್ದೇವೆ. ಹೌದು, ವೈಯಕ್ತಿಕ ಯಶಸ್ಸು ಮುಖ್ಯ, ವೈಯಕ್ತಿಕವಾಗಿ ಅರ್ಧಶತಕ ಅಥವಾ ಶತಕ ನಿಮ್ಮ ದಾಖಲೆ ಪುಸ್ತಕ ಸೇರಿದಾಗ ಅದು ತುಂಬಾ ಚೆನ್ನಾಗಿ ಕಾಣುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದನ್ನು ನೀವು ಮರೆಯಬಾರದು. ಅದೊಂದು ದೊಡ್ಡ ಪಾಠ.”

“ಬಾಂಗ್ಲಾದೇಶದಲ್ಲಿ ಪೂರ್ಣ ಶಕ್ತಿಯ ಟೀಂ ಇಂಡಿಯಾವನ್ನು ಸೋಲಿಸಲಾಯಿತು. ಈ (ಶ್ರೀಲಂಕಾ) ಸರಣಿಯತ್ತ ಗಮನ ಹರಿಸುವ ಬದಲು ಬಾಂಗ್ಲಾದೇಶ ಸರಣಿಯಿಂದ ಪಾಠ ಕಲಿತು ಮುನ್ನಡೆಯಬೇಕು ಎಂದು ನಾನು ಭಾವಿಸುತ್ತೇನೆ. ಹಿಂದೆ ಏನಾಯಿತು ಎಂಬುದನ್ನು ಮರೆಯಬಾರದು” ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

IND vs NZ: ಭಾರತ ವಿರುದ್ಧದ ಟಿ20 ಸರಣಿಗೆ ಕಿವೀಸ್ ತಂಡ ಪ್ರಕಟ; ಸ್ಪಿನ್ ಆಲ್​ರೌಂಡರ್​ಗೆ ತಂಡದ ನಾಯಕತ್ವ

2ನೇ ಏಕದಿನ ಪಂದ್ಯದ ಪಕ್ಷಿ ನೋಟ

ಈ ಪಂದ್ಯದಲ್ಲಿ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿದರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಕುಲ್ದೀಪ್ ಸ್ಪಿನ್ ಮ್ಯಾಜಿಕ್​ ಜೊತೆಗೆ ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ 215 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಭಾರತ 43.2 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಸಾಧಿಸಿತು. ಬೌಲಿಂಗ್​ನಲ್ಲಿ ಕುಲ್ದೀಪ್ ಮೂರು ವಿಕೆಟ್ ಪಡೆದು ಮಿಂಚಿದರೆ, ಕೆಎಲ್ ರಾಹುಲ್ ಬ್ಯಾಟ್ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 103 ಎಸೆತಗಳನ್ನು ಎದುರಿಸಿದ ರಾಹುಲ್ ಅಜೇಯ 64 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಕೂಡ 36 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ಅಕ್ಷರ್ ಪಟೇಲ್ 21 ರನ್​ಗಳ ಕೊಡುಗೆ ನೀಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Fri, 13 January 23