ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಕೊನೆಯ ಏಕದಿನ ಪಂದ್ಯವನ್ನು ಬರೋಬ್ಬರಿ 110 ರನ್ಗಳಿಂದ ಸೋತ ರೋಹಿತ್ ಶರ್ಮಾ ಪಡೆ 27 ವರ್ಷಗಳ ನಂತರ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಸೋತ ಬೇಡದ ದಾಖಲೆಗೆ ಕೊರಳೊಡ್ಡಿದೆ. ಇಡೀ ಸರಣಿಯಲ್ಲಿ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದ್ದು, ಬ್ಯಾಟಿಂಗ್ ವಿಭಾಗ. ಲಂಕಾದ ಸ್ಪಿನ್ ಬೌಲರ್‌ಗಳ ಎದುರು ಬ್ಯಾಟಿಂಗ್ ಮರೆತವರಂತೆ ವರ್ತಿಸಿದ ಭಾರತದ ಬ್ಯಾಟ್ಸ್‌ಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಳ್ಳುವ ಕಾಯಕವನ್ನು ಆಡಿದ ಮೂರೂ ಪಂದ್ಯಗಳಲ್ಲೂ ಮಾಡಿದರು. ಹೀಗಾಗಿ ತಂಡ ಅವಮಾನಕರ ಸರಣಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಇದೀಗ ನಾಯಕ ರೋಹಿತ್ ಶರ್ಮಾ ಕೂಡ ತಂಡದ ಈ ನ್ಯೂನತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಸ್ಪಿನ್ ಬೌಲರ್‌ಗಳ ವಿರುದ್ಧದ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀಡಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 249 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 26.1 ಓವರ್‌ಗಳಲ್ಲಿ ಕೇವಲ 138 ರನ್‌ಗಳಿಗೆ ಆಲೌಟ್ ಆಯಿತು. ಮತ್ತೊಮ್ಮೆ ಭಾರತದ ಬ್ಯಾಟರ್ಗಳನ್ನು ದುಸ್ವಪ್ನದಂತೆ ಕಾಡಿದ ಶ್ರೀಲಂಕಾದ ಸ್ಪಿನ್ನರ್‌ಗಳು ತಂಡದ ಸರಣಿ ಗೆಲುವಿಗೆ ಪ್ರಮುಖ ಕಾರಣರಾದರು. ಈ ಮೂಲಕ 1997ರ ನಂತರ ಭಾರತದ ವಿರುದ್ಧ ಏಕದಿನ ಸರಣಿ ಸೋತ ಐತಿಹಾಸಿಕ ಸಾಧನೆ ಮಾಡಿದರು.
ಇನ್ನು ಸರಣಿ ಸೋತ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್ನಲ್ಲಿ ಮಾತನಾಡಿದ ರೋಹಿತ್, ಇಡೀ ಸರಣಿಯಲ್ಲಿ ಸ್ಪಿನ್ ಬೌಲರ್‌ಗಳ ವಿರುದ್ಧ ಭಾರತದ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿದ್ದರ ಬಗ್ಗೆ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದರು. ‘ಇದು ಕಳವಳಕಾರಿ ವಿಷಯ ಎಂದು ನಾನು ಭಾವಿಸುವುದಿಲ್ಲ, ಆದರೆ ನಾವು ಗಂಭೀರವಾಗಿ ಯೋಚಿಸಬೇಕಾದ ವಿಷಯವಾಗಿದೆ. ನಮ್ಮ ವೈಯಕ್ತಿಕ ಆಟದ ಯೋಜನೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಬೇಕಿದೆ. ಈ ಸರಣಿಯಲ್ಲಿ ನಾವು ಖಂಡಿತವಾಗಿಯೂ ಒತ್ತಡಕ್ಕೆ ಒಳಗಾಗಿದ್ದೇವೆ. ಸರಣಿಯನ್ನು ಕಳೆದುಕೊಳ್ಳುವುದು ಪ್ರಪಂಚದ ಅಂತ್ಯವಲ್ಲ. ಆದರೆ ಇದರಿಂದ ಸಾಕಷ್ಟು ಕಲಿಯಲು ಅವಕಾಶ ಸಿಗುತ್ತದೆ.
Rohit Sharma speaks after the series loss against Sri Lanka:
"When I am the captain there is no chance of complacency". pic.twitter.com/rqdayCT0vW
— Johns. (@CricCrazyJohns) August 7, 2024
ಹೌದು ನಾವು ಸರಣಿಯನ್ನು ಕಳೆದುಕೊಂಡಿದ್ದೇವೆ ಮತ್ತು ಸಕಾರಾತ್ಮಕ ಅಂಶಗಳಿಗಿಂತ ಹೆಚ್ಚಾಗಿ ನಾವು ಅನೇಕ ಕ್ಷೇತ್ರಗಳತ್ತ ಗಮನಹರಿಸಬೇಕು ಎಂದು ನಾನು ಭಾವಿಸುತ್ತೇನೆ. ಅಂತಹ ಸಂದರ್ಭಗಳು ಎದುರಾದಾಗ ನಾವು ಏನು ಮಾಡಬೇಕು ಎಂಬುದರ ಮೇಲೆ ಗಮನಹರಿಸಬೇಕು. ಇಡೀ ಸರಣಿಯಲ್ಲಿ ನಾವು ಉತ್ತಮ ಕ್ರಿಕೆಟ್ ಆಡಲಿಲ್ಲ, ಅದಕ್ಕಾಗಿಯೇ ನಾವು ಇಲ್ಲಿ ನಿಂತಿದ್ದೇವೆ. ಆದಾಗ್ಯೂ ಇಡೀ ಸರಣಿಯಲ್ಲಿ ಕೆಲವು ಸಕಾರಾತ್ಮಕ ಅಂಶಗಳಿವೆ. ಅದರಲ್ಲೂ ತಂಡದ ಸ್ಪಿನ್ನರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಇದರ ನಡುವೆ ಕೆಲವು ಬ್ಯಾಟ್ಸ್‌ಮನ್‌ಗಳು ಕೂಡ ಉತ್ತಮವಾಗಿ ಆಡಿದರುಎಂದು ರೋಹಿತ್ ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Thu, 8 August 24