IND vs SL: 9ನೇ ಕ್ರಮಾಂಕದವರೆಗೂ ಬ್ಯಾಟರ್ಸ್; ಆದರೂ 110 ರನ್ಗಳಿಂದ ಸೋತ ಟೀಂ ಇಂಡಿಯಾ
IND vs SL: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ 110 ರನ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ 110 ರನ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಸರಣಿ ಆರಂಭಕ್ಕೂ ಮುನ್ನ ಗೆಲುವಿನ ಫೇವರೇಟ್ ಎನಿಸಿಕೊಂಡಿದ್ದ ರೋಹಿತ್ ಪಡೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಮುಜುಗರದ ಸೋಲಿಗೆ ಕೊರಳೊಡ್ಡಿದೆ. ವಿಚಿತ್ರ ಸಂಗತಿಯೆಂದರೆ ಇಡೀ ಸರಣಿಯಲ್ಲಿ ಟೀಂ ಇಂಡಿಯಾ 8ನೇ ಕ್ರಮಾಂಕದವರೆಗೂ ಬ್ಯಾಟ್ಸ್ಮನ್ಗಳನ್ನೂ ಹೊಂದಿದ್ದರೂ, ಮೂರೂ ಪಂದ್ಯಗಳಲ್ಲಿ ಕೇವಲ 250 ಕ್ಕೂ ಕಡಿಮೆ ಟಾರ್ಗೆಟ್ ಅನ್ನು ಬೆನ್ನಟ್ಟಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತು. ಈ ಮೂಲಕ 1997 ರ ನಂತರ ಅಂದರೆ ಬರೋಬ್ಬರಿ 27 ವರ್ಷಗಳ ನಂತರ ಲಂಕಾ ನಾಡಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಸೋತ ಕಳಪೆ ದಾಖಲೆ ಬರೆದಿದೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟಿಂಗ್ ವೈಫಲ್ಯ ತಂಡದ ನೂತನ ಕೋಚ್ ಗೌತಮ್ ಗಂಭೀರ್ ಅವರನ್ನು ಚಿಂತೆಗೀಡುಮಾಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 248 ರನ್‌ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 138 ರನ್‌ಗಳಿಗೆ ಆಲೌಟ್ ಆಯಿತು. ಅಚ್ಚರಿಯೆಂದರೆ ಬ್ಯಾಟ್ಸ್ಮನ್ಗಳ ದಂಡೇ ಹೊಂದಿದ್ದ ಭಾರತ ತಂಡ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ ಕೇವಲ 26.1 ಓವರ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು.
ಮತ್ತೆ ಬ್ಯಾಟಿಂಗ್ ವೈಫಲ್ಯ ಸೋಲು
ಟೀಂ ಇಂಡಿಯಾ ಈ ಪಂದ್ಯಕ್ಕೆ ಬರೋಬ್ಬರಿ 9 ಬ್ಯಾಟರ್ಗಳನ್ನು ಕಣಕ್ಕಿಳಿಸಿತ್ತು. ಆದರೆ ರೋಹಿತ್ ಶರ್ಮಾ ಹೊರತುಪಡಿಸಿ, ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ತನ್ನ ಶಕ್ತಿ ತೋರಿಸಲು ಸಾಧ್ಯವಾಗಲಿಲ್ಲ.ಆರಂಭಿಕ ಶುಭ್ಮನ್ ಗಿಲ್ ಕೇವಲ 6 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಕೂಡ 20 ರನ್, ರಿಷಬ್ ಪಂತ್ ಕೇವಲ 6 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಉಳಿದಂತೆ ಇಡೀ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿರುವ ಶ್ರೇಯಸ್ ಅಯ್ಯರ್ 8 ರನ್ ಗಳಿಸಿ ಔಟಾದರೆ, ಅಕ್ಷರ್ ಪಟೇಲ್ 2 ರನ್, ರಿಯಾನ್ ಪರಾಗ್ 15 ರನ್‌ಗಳಿಗೆ ಸುಸ್ತಾದರು. ಶಿವಂ ದುಬೆ ಕೇವಲ 9 ರನ್‌ಗಳಿಗೆ ಆಟ ಮುಗಿಸಿದರೆ, ಕೊನೆಯಲ್ಲಿ ಹೋರಾಟ ನೀಡಿದ ಸುಂದರ್ 30 ರನ್‌ಗಳ ಕಾಣಿಕೆ ನೀಡಿದರು. ಇನ್ನು ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಬಿಟ್ಟರೆ ಉಳಿದೆಲ್ಲ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳಿಗೆ ಬಲಿಯಾದರು.
ಅದ್ಭುತ ಸೃಷ್ಟಿಸಿದ ಶ್ರೀಲಂಕಾ ಸ್ಪಿನ್ನರ್ಸ್
ಭಾರತ ತಂಡದ ಸೋಲಿಗೆ ಶ್ರೀಲಂಕಾ ಸ್ಪಿನ್ನರ್‌ಗಳ ಮಾರಕ ದಾಳಿಯೇ ಪ್ರಮುಖ ಕಾರಣ. ಮೊದಲೆರಡು ಪಂದ್ಯಗಳಲ್ಲಿ ಪಾರುಪತ್ಯ ಮೆರೆದಿದ್ದ ಲಂಕಾ ಸ್ಪಿನ್ನರ್ಸ್ ಕೊನೆಯ ಏಕದಿನ ಪಂದ್ಯದಲ್ಲೂ ಮಾರಕ ದಾಳಿ ನಡೆಸಿದರು. ಅದರಲ್ಲೂ ಭಾರತದ ಬ್ಯಾಟರ್ಸ್ಗಲ ಹೆಡೆಮುರಿ ಕಟ್ಟಿದ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಕೇವಲ 31 ಎಸೆತಗಳಲ್ಲಿ 5 ವಿಕೆಟ್ ಪಡೆದು ಸರಣಿಯಲ್ಲಿ ಎರಡನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಇವರಲ್ಲದೆ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ 2 ವಿಕೆಟ್ ಪಡೆದರೆ, ಮಹೇಶ್ ತೀಕ್ಷಣ ಹಾಗೂ ಅಸಿತಾ ಫೆರ್ನಾಂಡೊ ತಲಾ ಒಂದು ವಿಕೆಟ್ ಪಡೆದರು.
ರೋಹಿತ್ ಬಿಟ್ಟರೆ ಮಿಕ್ಕವರೆಲ್ಲಾ ಫ್ಲಾಫ್
ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಬಿಟ್ಟರೆ ಟೀಂ ಇಂಡಿಯಾ ಪರ ಯಾವ ಬ್ಯಾಟ್ಸ್ಮನ್ಗೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ರೋಹಿತ್ ಇಡೀ ಸರಣಿಯಲ್ಲಿ 157 ರನ್ ಕಲೆಹಾಕಿ ಭಾರತದ ಪರ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ಉಳಿದಂತೆ ಅಕ್ಷರ್ ಪಟೇಲ್ 79 ರನ್, ವಿರಾಟ್ ಕೊಹ್ಲಿ ಕೇವಲ 58 ರನ್, ಆರಂಭಿಕ ಶುಭ್ಮನ್ ಗಿಲ್ 57, ಸುಂದರ್ 50 ರನ್ ಕಲೆಹಾಕಿದರು. ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಕೆಎಲ್ ರಾಹುಲ್ 31 ರನ್ ಮತ್ತು ಅಯ್ಯರ್ ಕೇವಲ 38 ರನ್ ಕೊಡುಗೆ ನೀಡಿದರು. ಇದನ್ನು ಗಮನಿಸಿದರೆ ತಂಡದ ಕೆಟ್ಟ ಬ್ಯಾಟಿಂಗ್ನಿಂದಾಗಿಯೇ ಏಕದಿನ ಸರಣಿ ಕೈತಪ್ಪಿತು ಎಂದರೆ ತಪ್ಪಾಗಲಾರದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Wed, 7 August 24