IND vs WI 1st T20: ಮೂವರು ಆಕ್ರಮಣಕಾರಿ ಆರಂಭಿಕರು: ಟೀಮ್ ಇಂಡಿಯಾದ ಓಪನರ್ ಯಾರು?

| Updated By: ಝಾಹಿರ್ ಯೂಸುಫ್

Updated on: Aug 03, 2023 | 3:26 PM

IND vs WI 1st T20: ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ.

IND vs WI 1st T20: ಮೂವರು ಆಕ್ರಮಣಕಾರಿ ಆರಂಭಿಕರು: ಟೀಮ್ ಇಂಡಿಯಾದ ಓಪನರ್ ಯಾರು?
Team India
Follow us on

India vs West Indies 1st T20: ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಣ ಟಿ20 ಸರಣಿಯು ಗುರುವಾರದಿಂದ ಪ್ರಾರಂಭವಾಗಲಿದೆ. 5 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯಕ್ಕೆ ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬುದೇ ಪ್ರಶ್ನೆ.
ಏಕೆಂದರೆ ಟೀಮ್ ಇಂಡಿಯಾದಲ್ಲಿ ಮೂವರು ಆಕ್ರಮಣಕಾರಿ ಆರಂಭಿಕರಿದ್ದಾರೆ. ಇವರಲ್ಲಿ ಇಬ್ಬರನ್ನು ಆಯ್ಕೆ ಮಾಡುವುದೇ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮುಂದಿರುವ ದೊಡ್ಡ ಸವಾಲು.

ಇಲ್ಲಿ ಟೀಮ್ ಇಂಡಿಯಾ ಮುಂದಿರುವ ಮೊದಲ ಆಯ್ಕೆ ಶುಭ್​ಮನ್ ಗಿಲ್. ಐಪಿಎಲ್​ನಲ್ಲಿ ಅಬ್ಬರಿಸಿದ್ದ ಗಿಲ್, ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 85 ರನ್ ಬಾರಿಸಿ ಮಿಂಚಿದ್ದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ 3ನೇ ಏಕದಿನ ಪಂದ್ಯ ನಡೆದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲೇ ಮೊದಲ ಟಿ20 ಪಂದ್ಯ ಕೂಡ ನಡೆಯುತ್ತಿದೆ. ಹೀಗಾಗಿ ಶುಭ್​ಮನ್ ಗಿಲ್ ಕಣಕ್ಕಿಳಿಯುವುದು ಖಚಿತ ಎನ್ನಬಹುದು.

ಮತ್ತೊಂದೆಡೆ ಇಶಾನ್ ಕಿಶನ್​ಗೆ ಅವಕಾಶ ನೀಡಬಹುದು. ಇಲ್ಲಿ ಕಿಶನ್​ ರನ್ನು ಹೊರಗಿಡಲು ಟೀಮ್ ಇಂಡಿಯಾ ಮುಂದೆ ಯಾವುದೇ ಕಾರಣಗಳಿಲ್ಲ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿ ಯುವ ಎಡಗೈ ದಾಂಡಿಗ ಅಬ್ಬರಿಸಿದ್ದಾರೆ. ಹೀಗಾಗಿ ಗಿಲ್ ಜೊತೆ ಇಶಾನ್ ಇನಿಂಗ್ಸ್ ಆರಂಭಿಸಬಹುದು.

ಇವರಿಬ್ಬರನ್ನು ಆರಂಭಿಕರಾಗಿ ಕಣಕ್ಕಿಳಿಸಿದರೆ ಮತ್ತೋರ್ವ ಆಕ್ರಮಣಕಾರಿ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹೊರಗುಳಿಯಬೇಕಾಗುತ್ತದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಜೈಸ್ವಾಲ್ ಅತ್ಯುತ್ತಮ ಟಿ20 ಬ್ಯಾಟರ್.

ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ್ದ ಜೈಸ್ವಾಲ್ ಕೇವಲ 14 ಪಂದ್ಯಗಳಲ್ಲಿ 625 ರನ್​ ಬಾರಿಸಿದ್ದರು. ಅದರಲ್ಲೂ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಈಗಾಗಲೇ ಸಂಚಲನ ಸೃಷ್ಟಿಸಿರುವ ಜೈಸ್ವಾಲ್ ಟೀಮ್ ಇಂಡಿಯಾ ಮುಂದಿರುವ ಅತ್ಯುತ್ತಮ ಆಯ್ಕೆ.

ಆದರೆ ಇಲ್ಲಿ ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್​ರನ್ನು ಕಣಕ್ಕಿಳಿಸಿದರೆ ಯಶಸ್ವಿ ಜೈಸ್ವಾಲ್​ರನ್ನು ಕೈ ಬಿಡಬೇಕಾಗುತ್ತದೆ. ಒಂದುವ ವೇಳೆ ಯಶಸ್ವಿಗೆ ಚಾನ್ಸ್​ ನೀಡಿದರೆ ಗಿಲ್ ಅಥವಾ ಇಶಾನ್​ರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಹೊರಗಿಡಬೇಕಾಗುತ್ತದೆ. ಹೀಗಾಗಿ ಈ ಮೂವರಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವುದು ಯಾರು ಎಂಬುದೇ ಈಗ ಕುತೂಹಲ.

ಇದನ್ನೂ ಓದಿ: Team India: ಶತಕ ಬಾರಿಸದೇ ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ

ಭಾರತ ಟಿ20 ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.