
ಸತತ ಮೂರು ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಗೂ ಭಾರತದ (India vs West Indies) ವಿರುದ್ಧ ಮೊದಲ ಗೆಲುವು ದಾಖಲಿಸಿದೆ. ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್ ತಂಡ ಟೀಂ ಇಂಡಿಯಾವನ್ನು (Team India) 6 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಇಲ್ಲದೆ ಆಡಿದ ಭಾರತ ತಂಡದ ಬ್ಯಾಟಿಂಗ್ ವಿಭಾಗ ಈ ಪಂದ್ಯದಲ್ಲೂ ವಿಫಲವಾಗಿ ವಿಂಡೀಸ್ ಸ್ಪಿನ್ನರ್ ಗುಡ್ಕೇಶ್ ಮೋತಿ ಎದುರು ಅಸಹಾಯಕತೆ ತೋರಿತು. ಹೀಗಾಗಿ ಸಂಪೂರ್ಣ 50 ಓವರ್ಗಳನ್ನು ಆಡದ ಹಾರ್ದಿಕ್ ಪಡೆ ಕೇವಲ 181 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ನಾಯಕ ಶಾಯ್ ಹೋಪ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಸುಲಭ ಜಯ ಸಾಧಿಸಿತು.
ಮೊದಲ ಪಂದ್ಯದಲ್ಲೂ ರೋಹಿತ್ ಮತ್ತು ಕೊಹ್ಲಿ ಅವರ ಬ್ಯಾಟಿಂಗ್ ಇಲ್ಲದೇ ಟೀಂ ಇಂಡಿಯಾ 115 ರನ್‌ಗಳ ಗುರಿ ತಲುಪಲು ಸಾಕಷ್ಟು ಕಷ್ಟ ಪಡಬೇಕಾಯಿತು. ಬ್ರಿಡ್ಜ್ಟೌನ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಭಾರತದ ಬ್ಯಾಟಿಂಗ್ ಮತ್ತೆ ಸಪ್ಪೆ ಪ್ರದರ್ಶನ ನೀಡಿತು. ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 181 ರನ್‌ಗಳಿಗೆ ಆಲೌಟ್ ಆಯಿತು.
IND vs WI: ಐಪಿಎಲ್ ಬಳಿಕ ಲಯ ಕಳೆದುಕೊಂಡ ಗಿಲ್; ಟೀಂ ಇಂಡಿಯಾಗೆ ಹೊಸ ತಲೆನೋವು
ಟೀಂ ಇಂಡಿಯಾ ಪರ ಆರಂಭಿಕರಾಗಿ ಬಂದ ಇಶಾನ್ ಕಿಶನ್ (55) ಅಮೋಘ ಅರ್ಧಶತಕ ಬಾರಿಸಿ, ಗಿಲ್ ಅವರೊಂದಿಗೆ 90 ರನ್‌ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಗಿಲ್ (34) ಉತ್ತಮ ಆರಂಭ ಪಡೆದುಕೊಂಡರಾದರೂ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಗಿಲ್ ವಿಕೆಟ್ ಮೂಲಕ ಈ ಇಬ್ಬರ ಜೊತೆಯಾಟಕ್ಕೂ ಬ್ರೇಕ್ ಬಿತ್ತು. ಇಲ್ಲಿಂದ ಟೀಂ ಇಂಡಿಯಾದ ಪೆವಿಲಿಯನ್ ಪರೇಡ್ ಕೂಡ ಆರಂಭವಾಯಿತು.
ಈ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ಗೆ ಬ್ಯಾಟಿಂಗ್ ಬಡ್ತಿ ಸಿಕ್ಕಿತ್ತು. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಸಂಜು ಸ್ಯಾಮ್ಸನ್ (9 ರನ್) ಸ್ಪಿನ್ನರ್ಗಳಿಗೆ ವಿಕೆಟ್ ಒಪ್ಪಿಸುವ ತಮ್ಮ ಹಳೆಯ ಕಯಾಲಿಯನ್ನು ಇಲ್ಲಿಯೂ ಮುಂದುವರೆಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಅಕ್ಷರ್ ಪಟೇಲ್ (1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ 7 ರನ್‌ಗಳಿಗೆ ಸುಸ್ತಾದರೆ, ಆ ಬಳಿಕ ಬಂದ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ಲಯ ಕಂಡುಕೊಳ್ಳಲು ಪ್ರಯತ್ನಿಸಿದರಾದರೂ, ಬೇಡದ ಶಾಟ್ ಆಡಿ 24 ರನ್‌ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಕೂಡ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಇನ್ನು ಟೀಂ ಇಂಡಿಯಾವನ್ನು ಕಾಡಿದ ವೆಸ್ಟ್ ಇಂಡೀಸ್ ಬೌಲರ್ಗಳಾದ ಗುಡ್ಕೇಶ್ ಮೋತಿ ಮತ್ತು ವೇಗದ ಬೌಲರ್ ರೊಮಾರಿಯೊ ಶೆಫರ್ಡ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ಭಾರತ ನೀಡಿದ ಅಲ್ಪ ಟಾರ್ಗೆಟ್ ಬೆನ್ನಟ್ಟಿದ ವಿಂಡೀಸ್ಗೆ ಕೈಲ್ ಮೇಯರ್ಸ್ (36) ಮತ್ತು ಬ್ರಾಂಡನ್ ಕಿಂಗ್ (15) ತ್ವರಿತ ಆರಂಭವನ್ನು ನೀಡಿದರು. ಕೇವಲ 8.2 ಓವರ್‌ಗಳಲ್ಲಿ 53 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆರಂಭಿಕ ಮೇಯರ್ಸ್ ಅವರನ್ನು ಔಟ್ ಮಾಡುವ ಮೂಲಕ ಶಾರ್ದೂಲ್ ಠಾಕೂರ್ ಈ ಜೊತೆಯಾಟವನ್ನು ಮುರಿದರು. ಅದೇ ಓವರ್‌ನಲ್ಲಿ ಶಾರ್ದೂಲ್ ಕಿಂಗ್‌ರನ್ನು ಔಟ್ ಮಾಡಿದರು. ಆ ಬಳಿಕ 13 ನೇ ಓವರ್‌ನಲ್ಲಿ ಅಲಿಕ್ ಅಥಾನಾಜ್ ಅವರನ್ನು ಬಲಿಪಶು ಮಾಡಿದ ಶಾರ್ದೂಲ್ ಮೂರು ವಿಕೆಟ್ ಪಡೆದು ಮಿಂಚಿದರು. ಆ ಬಳಿಕ ಬಂದ ಶಿಮ್ರೋನ್ ಹೆಟ್ಮೆಯರ್ ಕುಲ್ದೀಪ್ ಯಾದವ್ಗೆ ಬಲಿಯಾದರು.
ಈ ಎಲ್ಲದರ ನಡುವೆ, ಗೆಲುವಿಗಾಗಿ ಹೋರಾಡಿದ ವಿಂಡೀಸ್ ನಾಯಕ ಶಾಯ್ ಹೋಪ್ ಅಜೇಯ 63 ರನ್ ಬಾರಿಸಿದರೆ, ಯುವ ಬ್ಯಾಟ್ಸ್‌ಮನ್ ಕೇಸಿ ಕಾರ್ಟಿ ಕೂಡ ಅಜೇಯ 48 ರನ್‌ಗಳ ಕೊಡುಗೆ ನೀಡಿದರು. ಒಟ್ಟಾಗಿ ಈ ಇಬ್ಬರೂ 91 ರನ್‌ಗಳ ಜೊತೆಯಾಟ ಹಂಚಿಕೊಳ್ಳುವ ಮೂಲಕ ಭಾರತದ ಗೆಲುವಿನ ಆಸೆಗೆ ಅಂತ್ಯ ಹಾಡಿದರು. ಹಾರ್ದಿಕ್ ಬೌಲ್ ಮಾಡಿದ 37ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸುವ ಮೂಲಕ ಕಾರ್ಟಿ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:34 am, Sun, 30 July 23