ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ (India vs West Indies) 7 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಸತತ ಎರಡು ಟಿ20 ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿದ್ದ ಟೀಂ ಇಂಡಿಯಾ (Team India) ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಆಗಸ್ಟ್ 8ರಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ಕಳಪೆ ಆರಂಭದ ನಡುವೆಯೂ 18ನೇ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಟೀಂ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ (Suryakumar Yadav) 83 ರನ್ ಸಿಡಿಸಿದರೆ, ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ತಿಲಕ್ ವರ್ಮಾ (Tilak Varma) ಈ ಪಂದ್ಯದಲ್ಲೂ ಅಜೇಯ 49 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಸಂಪೂರ್ಣ ವಿಫಲವಾಗಿತ್ತು. ಹೀಗಾಗಿ ಮೂರನೇ ಟಿ20 ಪಂದ್ಯದಲ್ಲಿ ತಂಡದ ಟಾಪ್ ಆರ್ಡರ್ ಬದಲಿಸಲಾಗಿತ್ತು. ಆದರೂ ಮತ್ತೊಮ್ಮೆ ತಂಡದ ಟಾಪ್ ಆರ್ಡರ್ ಕೈಕೊಟ್ಟಿತು. ಆದರೆ ಮೂರನೇ ಪಂದ್ಯದಲ್ಲಿ ಲಯಕ್ಕೆ ಮರಳಿದ ಸೂರ್ಯಕುಮಾರ್ ಯಾದವ್ ಮತ್ತು ಸತತ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಬ್ಯಾಟರ್ ತಿಲಕ್ ವರ್ಮಾ, ಕಠಿಣ ಪಿಚ್‌ನಲ್ಲಿ ಅತ್ಯುತ್ತಮ ಜೊತೆಯಾಟವನ್ನು ಕಟ್ಟಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
IND vs WI: ಸತತ ಎರಡನೇ ಟಿ20 ಪಂದ್ಯದಲ್ಲಿ ಸೋತು ಮುಜುಗರದ ದಾಖಲೆ ಬರೆದ ಹಾರ್ದಿಕ್ ಪಡೆ..!
ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬೌಲಿಂಗ್ ಆರಂಭಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಕೂಡ ಉತ್ತಮ ಆರಂಭ ಪಡೆದುಕೊಂಡಿತು. ಆದರೆ ಮಧ್ಯಮ ಓವರ್‌ಗಳಲ್ಲಿ ದಾಳಿಗಿಳಿದ ಭಾರತೀಯ ಸ್ಪಿನ್ನರ್‌ಗಳು ವಿಂಡೀಸ್ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಆರಂಭಿಕರಾಗಿ ಕಣಕ್ಕಿಳಿದ ಬ್ರ್ಯಾಂಡನ್ ಕಿಂಗ್ ಮತ್ತು ಕೈಲ್ ಮೇಯರ್ಸ್ 55 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದು ಬಿಟ್ಟರೆ, ತಂಡದ ಟಾಪ್ ಆರ್ಡರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಈ ನಡುವೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (1/24) ಎಂಟನೇ ಓವರ್‌ನಲ್ಲಿ ಮೇಯರ್ಸ್ (25) ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು.
Axar Patel with the breakthrough, finally!#INDvWIAdFreeonFanCode #WIvIND pic.twitter.com/2pPMMHXzDT
— FanCode (@FanCode) August 8, 2023
ಅಕ್ಷರ್ಗೆ ಸಾಥ್ ನೀಡಿದ ಕುಲ್ದೀಪ್ ಯಾದವ್ ಅವರ ಬೌಲಿಂಗ್ ಅನ್ನು ಅರ್ಥಮಾಡಿಕೊಳ್ಳುವುದು ವಿಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟಕರವಾಗಿತ್ತು. ಕುಲ್ದೀಪ್ (3/28) ಮೊದಲು ಜಾನ್ಸನ್ ಚಾರ್ಲ್ಸ್ ವಿಕೆಟ್ ಪಡೆದರು. ನಂತರ 15ನೇ ಓವರ್‌ನಲ್ಲಿ ವಿಂಡೀಸ್ ತಂಡಕ್ಕೆ ದೊಡ್ಡ ಪೆಟ್ಟು ನೀಡಿದ ಕುಲ್ದೀಪ್ ಈ ಓವರ್‌ನಲ್ಲಿ ಮೊದಲು ಕಿಂಗ್ (42 ರನ್, 40 ಎಸೆತ) ಅವರ ನಿಧಾನಗತಿಯ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು. ನಂತರ ನಿಕೋಲಸ್ ಪೂರನ್ (20) ಅವರನ್ನು ಬಲೆಗೆ ಕೆಡವಿದರು.
ಹೀಗಾಗಿ ವೆಸ್ಟ್ ಇಂಡೀಸ್ 15 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 106 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ 5 ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ವಿಂಡೀಸ್ ಬ್ಯಾಟ್ಸ್‌ಮನ್‌ಗಳು 53 ರನ್ ಸೇರಿಸಿ ತಂಡವನ್ನು 159 ರನ್‌ಗೆ ಕೊಂಡೊಯ್ದರು. ನಾಯಕ ರೋವ್ಮನ್ ಪೊವೆಲ್ ಕೇವಲ 19 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು.
ಟೀಂ ಇಂಡಿಯಾಗೆ ಕಳೆದೆರಡು ಪಂದ್ಯಗಳಂತೆ ಈ ಬಾರಿಯೂ ಬ್ಯಾಟಿಂಗ್ ಆರಂಭ ಉತ್ತಮವಾಗಿರಲಿಲ್ಲ. ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ (1) ಪದಾರ್ಪಣೆ ಮಾಡುತ್ತಿದ್ದರೂ ಮೊದಲ ಓವರ್‌ನಲ್ಲಿ ಕೇವಲ ಎರಡು ಎಸೆತಗಳನ್ನು ಆಡಿ ಪೆವಿಲಿಯನ್‌ಗೆ ಮರಳಿದರು. ಆದರೆ ವಿಂಡೀಸ್ ಪ್ರವಾಸದಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಸೂರ್ಯಕುಮಾರ್ ಯಾದವ್, ಈ ಪಂದ್ಯದಲ್ಲಿ ಲಯಕ್ಕೆ ಮರಳಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸೂರ್ಯ, ಮೊದಲ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಉತ್ತಮ ಆರಂಭ ಪಡೆದುಕೊಂಡರು. ಆದರೆ ವಿಂಡೀಸ್ ಪ್ರವಾಸದಲ್ಲಿ ರನ್ ಬರ ಎದುರಿಸುತ್ತಿರುವ ಆರಂಭಿಕ ಶುಭ್ಮನ್ ಗಿಲ್ (6) ಮತ್ತೊಮ್ಮೆ ನಿರಾಸೆ ಮೂಡಿಸಿ ಐದನೇ ಓವರ್‌ನಲ್ಲಿ ಔಟಾದರು.
ಆರಂಭಿಕರ ವಿಕೆಟ್ ಪತನದ ನಡುವೆಯೂ ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಸೂರ್ಯನಿಗೆ ಯುವ ಆಟಗಾರ ತಿಲಕ್ ವರ್ಮಾ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಈ ಸಮಯದಲ್ಲಿ, ಸೂರ್ಯ 23 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದು ಈ ಪ್ರವಾಸದಲ್ಲಿ ಸೂರ್ಯ ಅವರ ಮೊದಲ ಅರ್ಧಶತಕವಾಯಿತು. ಇವರಿಬ್ಬರ 87 ರನ್ ಜೊತೆಯಾಟ ಭಾರತದ ಗೆಲುವನ್ನು ಖಚಿತಪಡಿಸಿತು.
Form is temporary. Surya is permanent!
.#INDvsWI #INDvWIAdFreeonFanCode pic.twitter.com/QRdE8Eg8BQ
— FanCode (@FanCode) August 8, 2023
ಆದರೆ ಶತಕದಂಚಿನಲ್ಲಿ ಎಡವಿದ ಸೂರ್ಯ, ಕೇವಲ 44 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಿತ 83 ರನ್ ಸಿಡಿಸಿದರು. ಇದರ ನಂತರ, ನಾಯಕ ಹಾರ್ದಿಕ್ ಮತ್ತು ತಿಲಕ್ ಅಜೇಯ 43 ರನ್‌ಗಳ ಜೊತೆಯಾಟ ನಡೆಸುವ ಮೂಲಕ ತಂಡವನ್ನು 17.5 ಓವರ್‌ಗಳಲ್ಲಿ ಈ ಸರಣಿಯಲ್ಲಿ ತನ್ನ ಮೊದಲ ಗೆಲುವಿನತ್ತ ಕೊಂಡೊಯ್ದರು. ತಿಲಕ್ (ಔಟಾಗದೆ 49) ಸತತ ಎರಡನೇ ಅರ್ಧಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಹಾರ್ದಿಕ್ (ಔಟಾಗದೆ 20) ಪಂದ್ಯವನ್ನು ಸಿಕ್ಸರ್‌ನೊಂದಿಗೆ ಪೂರ್ಣಗೊಳಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:19 am, Wed, 9 August 23