- Kannada News Photo gallery Cricket photos IND vs WI India registered embarrassing record in 2nd T20 match
IND vs WI: ಸತತ ಎರಡನೇ ಟಿ20 ಪಂದ್ಯದಲ್ಲಿ ಸೋತು ಮುಜುಗರದ ದಾಖಲೆ ಬರೆದ ಹಾರ್ದಿಕ್ ಪಡೆ..!
WI vs IND 2nd T20I: ವಾಸ್ತವವಾಗಿ ವಿಂಡೀಸ್ ವಿರುದ್ಧ ಇದುವರೆಗೆ 26 ಪಂದ್ಯಗಳನ್ನಾಡಿರುವ ಭಾರತದ ಇದರಲ್ಲಿ 9 ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಕೆರಿಬಿಯನ್ನರ ವಿರುದ್ಧ ಅತಿ ಹೆಚ್ಚು ಸೋಲು ಕಂಡ ಏಷ್ಯಾದ ಮೊದಲ ರಾಷ್ಟ್ರ ಎಂಬ ಕುಖ್ಯಾತಿಗೆ ಭಾರತ ಭಾಜನವಾಗಿದೆ.
Updated on: Aug 07, 2023 | 8:35 AM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯದಲ್ಲೂ ಹಾರ್ದಿಕ್ ಪಡೆ ಸೋಲನುಭವಿಸಿದೆ. ಈ ಪಂದ್ಯಕ್ಕೂ ಮುನ್ನ ಟೊರೊಬಾದ ಬ್ರಿಯಾನ್ ಲಾರಾ ಅಕಾಡೆಮಿಯಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದಲ್ಲೂ ಭಾರತ ಯುವ ತಂಡ ಸೋಲು ಅನುಭವಿಸಿತು. ಇದರೊಂದಿಗೆ ಮೆನ್ ಇನ್ ಬ್ಲೂ ತಂಡ ಬೇಡದ ದಾಖಲೆಗೆ ಕೊರಳೊಡ್ಡಿದೆ.

ಉಭಯ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಕೇವಲ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ವಿಂಡೀಸ್ ಪಡೆ 8 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಈ ಸೋಲಿನೊಂದಿಗೆ ಭಾರತ ವಿಂಡೀಸ್ ವಿರುದ್ಧ ಅತಿ ಹೆಚ್ಚು ಸೋಲು ಕಂಡ ಏಷ್ಯಾದ ಮೊದಲ ತಂಡ ಎನಿಸಿಕೊಂಡಿದೆ.

ವಾಸ್ತವವಾಗಿ ವಿಂಡೀಸ್ ವಿರುದ್ಧ ಇದುವರೆಗೆ 26 ಪಂದ್ಯಗಳನ್ನಾಡಿರುವ ಭಾರತದ ಇದರಲ್ಲಿ 9 ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಕೆರಿಬಿಯನ್ನರ ವಿರುದ್ಧ ಅತಿ ಹೆಚ್ಚು ಸೋಲು ಕಂಡ ಏಷ್ಯಾದ ಮೊದಲ ರಾಷ್ಟ್ರ ಎಂಬ ಕುಖ್ಯಾತಿಗೆ ಭಾರತ ಭಾಜನವಾಗಿದೆ.

ವಿಂಡೀಸ್ ವಿರುದ್ಧ ಆಡಿದ 16 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಸೋಲು ಕಂಡಿದ್ದ ಬಾಂಗ್ಲಾದೇಶದ ಹೆಸರಲ್ಲಿ ಈ ದಾಖಲೆ ಇತ್ತು. ಇದೀಗ ಭಾರತ 9 ಪಂದ್ಯಗಳಲ್ಲಿ ಸೋಲುವುದರೊಂದಿಗೆ ಬಾಂಗ್ಲಾದೇಶದ ಜೊತೆ ಜಂಟಿಯಾಗಿ ಮೊದಲ ಸ್ಥಾನಕ್ಕೇರಿದೆ.

ಗಮನಾರ್ಹವೆಂದರೆ, ವಿಂಡೀಸ್ ವಿರುದ್ಧ ಹೆಚ್ಚು ಪಂದ್ಯಗಳನ್ನು ಸೋತ ತಂಡ ಬಾಂಗ್ಲಾದೇಶವಲ್ಲ. ಏಷ್ಯನ್ ತಂಡಗಳ ವಿಷಯದಲ್ಲಿ ಬಾಂಗ್ಲಾ ಅಗ್ರಸ್ಥಾನದಲ್ಲಿರಬಹುದು. ಆದರೆ ವಿಶ್ವ ಮಟ್ಟದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಕೆರಿಬಿಯನ್ನರ ಎದುರು ಹೆಚ್ಚು ಸೋಲು ಕಂಡಿವೆ.

ಈ ಪೈಕಿ ವಿಂಡೀಸ್ ವಿರುದ್ಧ ಇಂಗ್ಲೆಂಡ್ 24 ಟಿ20 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 14 ಪಂದ್ಯಗಳಲ್ಲಿ ಸೋತಿದೆ.

ಹಾಗೆಯೇ 19 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ ಸೋಲು ಕಂಡಿದೆ.

ಇದೀಗ ಏಷ್ಯನ್ ರಾಷ್ಟ್ರಗಳ ವಿಚಾರದಲ್ಲಿ ಭಾರತ ಜಂಟಿಯಾಗಿ ಮೊದಲ ಸ್ಥಾನ ಪಡೆದಿರಬಹುದು. ಆದರೆ ವಿಂಡೀಸ್ ವಿರುದ್ಧ ಭಾರತ ಗೆಲುವಿನ ವಿಚಾರದಲ್ಲಿ ಮೇಲುಗೈ ಸಾಧಿಸಿದೆ. ಇದುವರೆಗೆ ಭಾರತ ವಿಂಡೀಸ್ ವಿರುದ್ಧ 26 ಟಿ20 ಪಂದ್ಯಗಳನ್ನಾಡಿದ್ದು, ಇದರಲ್ಲಿ 17 ಪಂದ್ಯಗಳನ್ನು ಗೆದ್ದಿದ್ದರೆ, 8 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

ಇನ್ನು ವಿಂಡೀಸ್ ವಿರುದ್ಧ ಸತತ 7 ವರ್ಷಗಳಿಂದ ಸರಣಿ ಗೆಲುವಿನ ದಾಖಲೆ ಹೊಂದಿರುವ ಭಾರತ ಕೊನೆಯದಾಗಿ 2016 ರಲ್ಲಿ ಟಿ20 ಸರಣಿಯನ್ನು ಕಳೆದುಕೊಂಡಿತ್ತು. ಎರಡು ಪಂದ್ಯಗಳ ಸ್ಪರ್ಧೆಯನ್ನು 0-1 ರಿಂದ ಭಾರತ ಸೋತಿತ್ತು.



















