IND vs WI: 2016 ರ ಬಳಿಕ ಭಾರತದೆದುರು ಮೊದಲ ಸರಣಿ ಗೆದ್ದ ವೆಸ್ಟ್ ಇಂಡೀಸ್..!

|

Updated on: Aug 14, 2023 | 5:47 AM

IND vs WI: 6 ​​ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕೆರಿಬಿಯನ್ನರು ಅಂತಿಮವಾಗಿ ಟಿ20 ಸರಣಿಯಲ್ಲಿ ಭಾರತವನ್ನು ಸೋಲಿಸಿದ್ದಾರೆ. ರೋವ್‌ಮನ್ ಪೊವೆಲ್ ನಾಯಕತ್ವದ ವಿಂಡೀಸ್ ತಂಡವು ಟಿ20 ಸರಣಿಯ ಐದನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 8 ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3-2ರಿಂದ ಗೆದ್ದುಕೊಂಡಿತು.

IND vs WI: 2016 ರ ಬಳಿಕ ಭಾರತದೆದುರು ಮೊದಲ ಸರಣಿ ಗೆದ್ದ ವೆಸ್ಟ್ ಇಂಡೀಸ್..!
ಭಾರತ- ವೆಸ್ಟ್ ಇಂಡೀಸ್
Follow us on

6 ​​ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕೆರಿಬಿಯನ್ನರು ಅಂತಿಮವಾಗಿ ಟಿ20 ಸರಣಿಯಲ್ಲಿ ಭಾರತವನ್ನು (West Indies Beat India ) ಸೋಲಿಸಿದ್ದಾರೆ. ರೋವ್‌ಮನ್ ಪೊವೆಲ್ (Rovman Powell) ನಾಯಕತ್ವದ ವಿಂಡೀಸ್ ತಂಡವು ಟಿ20 ಸರಣಿಯ ಐದನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾವನ್ನು (Team India) 8 ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3-2ರಿಂದ ಗೆದ್ದುಕೊಂಡಿತು. ರೊಮಾರಿಯೊ ಶೆಫರ್ಡ್ (4 ವಿಕೆಟ್) ಅವರ ಅದ್ಭುತ ಬೌಲಿಂಗ್ ನಂತರ, ಬ್ರಾಂಡನ್ ಕಿಂಗ್ (Brandon King) (ಅಜೇಯ 85) ಮತ್ತು ನಿಕೋಲಸ್ ಪೂರನ್ (Nicholas Pooran) (47) ಅವರ ಸ್ಫೋಟಕ ಇನ್ನಿಂಗ್ಸ್‌ನ ಆಧಾರದ ಮೇಲೆ ವಿಂಡೀಸ್ ಪಡೆ ಟಿ20 ಸರಣಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 2016 ರ ನಂತರ ಮೊದಲ ಬಾರಿಗೆ ವಿಂಡೀಸ್ ಒಂದಕ್ಕಿಂತ ಹೆಚ್ಚು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವನ್ನು ಸೋಲಿಸಿದ ದಾಖಲೆ ಬರೆದಿದೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಏಕೆಂದರೆ ಟಾಸ್ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ ನಮ್ಮ ತಂಡವು ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಎದುರಾಳಿ ತಂಡವನ್ನು ಕಟ್ಟಿಹಾಕುವ ಉದ್ದೇಶ ಹೊಂದಿದೆ ಎಂದಿದ್ದರು. ಆದರೆ ನಾಯಕನ ಯೋಜನೆಗೆ ತಕ್ಕಂತೆ ಟೀಂ ಇಂಡಿಯಾಕ್ಕೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ 165 ರನ್ ಗಳಿಸಲಷ್ಟೇ ಶಕ್ತವಾದರೆ, ಆ ನಂತರ ವೆಸ್ಟ್ ಇಂಡೀಸ್​ನ ಆಕ್ರಮಣಕಾರಿ ಬ್ಯಾಟಿಂಗ್ ಮುಂದೆ ತಂಡದ ಬೌಲರ್​ಗಳು ಅಸಹಾಯಕರಾದರು. ನಾಲ್ಕನೇ ಟಿ20 ಪಂದ್ಯದಲ್ಲಿ ಶುಭ್​ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾ ಪರ ಯಾವ ರೀತಿಯ ಆಟ ಪ್ರದರ್ಶಿಸಿದ್ದರೋ, ಅದೇ ಆಟವನ್ನು ನಿಕೋಲಸ್ ಪೂರನ್ ಮತ್ತು ಬ್ರ್ಯಾಂಡನ್ ಕಿಂಗ್ ಕೊನೆಯ ಟಿ20 ಪಂದ್ಯದಲ್ಲಿ ವಿಂಡೀಸ್ ಪರ ಮಾಡಿದರು.

IND vs WI: 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬರೆದ ಪ್ರಮುಖ ದಾಖಲೆಗಳಿವು

ಭಾರತಕ್ಕೆ ಕೈಕೊಟ್ಟ ಆರಂಭಿಕರು

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಕಳೆದ ಪಂದ್ಯದಲ್ಲಿ 165 ರನ್‌ಗಳ ಆರಂಭಿಕ ಜೊತೆಯಾಟವಾಡಿದ್ದ ಯಶಸ್ವಿ ಜೈಸ್ವಾಲ್ (5) ಮತ್ತು ಶುಭ್​ಮನ್ ಗಿಲ್ (9) ಈ ಬಾರಿ ಮೂರನೇ ಓವರ್‌ ಮುಗಿಯುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡರು. ಇವರಿಬ್ಬರನ್ನೂ ವಿಂಡೀಸ್ ಸ್ಪಿನ್ನರ್ ಅಕಿಲ್ ಹೊಸೇನ್ ಬಲಿಪಶು ಮಾಡಿದರು.

ಏಕಾಂಗಿ ಹೋರಾಟ ನಡೆಸಿದ ಸೂರ್ಯ

ಹೀಗಾಗಿ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದರಿಂದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ (27) ಅವರ ಮೇಲೆ ಜವಾಬ್ದಾರಿ ಬಿದ್ದಿತ್ತು. ಸೂರ್ಯ ತನ್ನ ಲಯ ಕಂಡುಕೊಳ್ಳಲು ಬಹಳ ಸಮಯ ತೆಗೆದುಕೊಂಡರೂ, ತಿಲಕ್ ಬಂದ ತಕ್ಷಣ ಕೆಲವು ಅತ್ಯುತ್ತಮ ಹೊಡೆತಗಳನ್ನು ಹೊಡೆದು ತಂಡದ ಸ್ಕೋರ್‌ಗೆ ವೇಗ ನೀಡಿದರು. ಇವರಿಬ್ಬರ ನಡುವೆ 30 ಎಸೆತಗಳಲ್ಲಿ 51 ರನ್‌ಗಳ ಜೊತೆಯಾಟ ಇತ್ತು. ಇಲ್ಲಿ, ರೋಸ್ಟನ್ ಚೇಸ್ ತಮ್ಮದೇ ಎಸೆತದಲ್ಲಿ ತಿಲಕ್ ಅವರ ಅತ್ಯುತ್ತಮ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಈ ಜೊತೆಯಾಟವನ್ನು ಮುರಿದರು.

ಸಂಜು ಸ್ಯಾಮ್ಸನ್ (13) ಮತ್ತೊಮ್ಮೆ ನಿರಾಸೆ ಮೂಡಿಸಿ ರೊಮಾರಿಯೊ ಶೆಫರ್ಡ್​ಗೆ ಬಲಿಯಾದರು. ಆ ಬಳಿಕ ಭಾರತದ ಕೆಳ ಮಧ್ಯಮ ಕ್ರಮಾಂಕವನ್ನು ಕಟ್ಟಿಹಾಕಿದ ವಿಂಡೀಸ್ ವೇಗಿಗಳು ಟೀಂ ಇಂಡಿಯಾ ದೊಡ್ಡ ಸ್ಕೋರ್ ಮಾಡದಂತೆ ತಡೆದರು. ನಾಯಕ ಹಾರ್ದಿಕ್ 14 ರನ್​ಗಳಿಗೆ ಸುಸ್ತಾದರೆ, ಮತ್ತೊಂದೆಡೆ ಸೂರ್ಯ (61) ಹೋರಾಟದ ಇನಿಂಗ್ಸ್‌ ಆಡಿ ಅರ್ಧಶತಕ ಸಿಡಿಸಿದರು. ಕೊನೆಯ ಹಂತದಲ್ಲಿ ಅಕ್ಷರ್ ಪಟೇಲ್ ಒಂದಷ್ಟು ರನ್ ಗಳಿಸಿ ತಂಡವನ್ನು 165 ರನ್ ಗಡಿ ದಾಟಿಸಿದರು.

ಪೂರನ್-ಕಿಂಗ್ ಸಿಡಿಲಬ್ಬರ

ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್‌ನ ಆರಂಭಿಕರಾದ ಕೈಲ್ ಮೇಯರ್ಸ್, ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದ ಮೊದಲ ಓವರ್‌ನಲ್ಲಿಯೇ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಅಬ್ಬರಿಸಿದರು. ಆದರೆ, ಮುಂದಿನ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಮತ್ತೆ ಮೇಯರ್ಸ್ ಅವರನ್ನು ಬಲಿಪಶು ಮಾಡಿದರು. ಈ ಯಶಸ್ಸಿನ ಹೊರತಾಗಿಯೂ ಟೀಂ ಇಂಡಿಯಾದ ಬೌಲರ್‌ಗಳು ಒತ್ತಡ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಕ್ರೀಸ್‌ಗೆ ಬಂದ ನಿಕೋಲಸ್ ಪೂರನ್, ಹಾರ್ದಿಕ್ ಓವರ್​ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿ, ಭರ್ಜರಿ ಆರಂಭ ಪಡೆದುಕೊಂಡರು.

72 ಎಸೆತಗಳಲ್ಲಿ 107 ರನ್‌ಗಳ ಜೊತೆಯಾಟ

ಇದಾದ ಬಳಿಕ ಪೂರನ್ ಮತ್ತು ಬ್ರಾಂಡನ್ ಕಿಂಗ್ ಭಾರತದ ಬೌಲರ್‌ಗಳನ್ನು ವಿಕೆಟ್‌ಗಾಗಿ ಹಾತೊರೆಯುವಂತೆ ಮಾಡಿದರು. ಇವರಿಬ್ಬರ ನಡುವೆ ನಡೆದ 72 ಎಸೆತಗಳಲ್ಲಿ 107 ರನ್‌ಗಳ ಜೊತೆಯಾಟ ಭಾರತದ ಸೋಲನ್ನು ಬಹುತೇಕ ನಿರ್ಧರಿಸಿತು. ಇದೇ ವೇಳೆ ಹವಾಮಾನ ವೈಪರೀತ್ಯದಿಂದ ಸುಮಾರು ಅರ್ಧ ಗಂಟೆ ಪಂದ್ಯ ಸ್ಥಗಿತಗೊಂಡಿತ್ತು. ಆಟವು ಪುನರಾರಂಭಗೊಂಡಾಗ, ತಿಲಕ್ ವರ್ಮಾ ಅವರು ತಮ್ಮ ಎರಡನೇ ಎಸೆತದಲ್ಲಿ ಪೂರನ್ ಅವರನ್ನು ಔಟ್ ಮಾಡುವ ಮೂಲಕ ಪುನರಾಗಮನದ ಭರವಸೆಯನ್ನು ಮೂಡಿಸಿದರು. ಆದರೆ, ಅಷ್ಟೊತ್ತಿಗಾಗಲೇ ತಡವಾಗಿತ್ತು. ಶಾಯ್ ಹೋಪ್ (ಔಟಾಗದೆ 22) ಮತ್ತು ಬ್ರ್ಯಾಂಡನ್ ಕಿಂಗ್ ಕೇವಲ 4.4 ಓವರ್‌ಗಳಲ್ಲಿ 52 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡು ಪಂದ್ಯವನ್ನು ಗೆಲ್ಲುವುದರೊಂದಿಗೆ ಟಿ20 ಸರಣಿಯನ್ನು ವೆಸ್ಟ್ ಇಂಡೀಸ್ ಮಡಿಲಿಗೆ ಹಾಕಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:22 am, Mon, 14 August 23